- ಹಾಲಶ್ರೀ ಮೇಲೆ ಮತ್ತೊಂದು ವಂಚನೆ ಪ್ರಕರಣ ದಾಖಲು
- ಸಂಜಯ್ ಚವಡಾಳರಿಂದ 1 ಕೋಟಿ ರೂ. ಪಡೆದ ಆರೋಪ
ವಿಧಾನಸಭಾ ಚುನಾವಣೆ ವೇಳೆ ಟಿಕೆಟ್ ಆಸೆ ತೋರಿಸಿ ಮಂಗಳೂರು ಉದ್ಯಮಿ ಗೋವಿಂದ ಪೂಜಾರಿಯಿಂದ ಐದಾರು ಕೋಟಿ ಪೀಕಿರುವ ಚೈತ್ರಾ ಕುಂದಾಪುರ ಟೀಮ್ ಭಾನಗಡಿ ಹೊರಬೀಳುತ್ತಿದ್ದಂತೆ ಅದೇ ತಂಡದಲ್ಲಿದ್ದ ಅಭಿನವ ಹಾಲಶ್ರೀ ಸ್ವಾಮೀಜಿ ತನ್ನದೇ ಪ್ರತ್ಯೇಕ ಪ್ರಯತ್ನದಲ್ಲಿ ಮತ್ತೊಬ್ಬ ಮಿಕಕ್ಕೆ ಗಾಳ ಹಾಕಿ 1 ಕೋಟಿ ರೂ. ವಂಚಿಸಿರುವ ಆರೋಪ ಕೇಳಿಬಂದಿದೆ.
ಗೋವಿಂದ ಪೂಜಾರಿ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡು, ನಂತರ ಒಡಿಶಾದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದ ಅಭಿನವ ಹಾಲಶ್ರೀ ಮೇಲೆ ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಟಿಕೆಟ್ ವಂಚನೆ ಪ್ರಕರಣ ದಾಖಲಾಗಿದೆ.
ಗದಗ ಜಿಲ್ಲೆಯ ಶಿರಹಟ್ಟಿ ಮತಕ್ಷೇತ್ರ ಶಾಸಕ ಆಗಬೇಕು ಎಂದು ಟಿಕೆಟ್‌ಗಾಗಿ ಪೈಪೊಟಿ ನಡೆಸುತ್ತಿದ್ದ ಸಂಜಯ್ ಚವಡಾಳಗೆ ಹಾಲಶ್ರೀ ಟಿಕೆಟ್ ಕೊಡಿಸುವುದಾಗಿ ಒಂದು ಕೋಟಿ ರೂ. ಅವರಿಂದ ಪಡೆದಿದ್ದಾರಂತೆ. ಹೀಗಾಗಿ ಸಂಜಯ್ ಚವಡಾಳ ಅವರು ತಮಗೆ ಸ್ವಾಮೀಜಿಯಿಂದ ವಂಚನೆಯಾಗಿದೆ ಎಂದು ಸೆ. 25ರಂದು ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು ಜೈಲಿನಲ್ಲಿರುವ ಹಾಲಶ್ರೀಯನ್ನು ಮುಂಡರಗಿ ಪೊಲೀಸರು ಬಾಡಿ ವಾರಂಟ್ ಮೇಲೆ ಆಚೆ ಕರೆದುಕೊಂಡು ಮುಂಡರಗಿ ಪಟ್ಟಣದ ಹಣಕಾಸಿನ ವ್ಯವಹಾರ ನಡೆದ ವಿವಿಧ ಸ್ಥಳಗಳಲ್ಲೂ ಸ್ಥಳ ಮಹಜರು ಮಾಡಿದ್ದಾರೆ. ನಂತರ ಅವರನ್ನು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಮಠಕ್ಕೂ ಕರೆದುಕೊಂಡು ಹೋಗಿ ಮಹಜರು ಮಾಡಲಾಗಿದೆ. ಹಾಲಶ್ರೀ ಹಣ ಪಡೆದಿರುವ ಸಾಕ್ಷ್ಯಗಳು ಸಾಬೀತಾಗಿವೆ ಎನ್ನಲಾಗಿದ್ದು, ತನಿಖೆಯಿಂದ ಸತ್ಯ ಹೊರಗೆ ಬರಬೇಕಾಗಿದೆ.
ಹಾಲಶ್ರೀ ಬೆಂಗಳೂರು ಜೈಲಿಗೆ ಶಿಫ್ಟ್
ಸ್ಥಳ ಮಹಜರು ಹಾಗೂ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿನವ ಹಾಲಶ್ರೀಯನ್ನು ಗದಗ ಜಿಲ್ಲೆಯ ಮುಂಡರಗಿ ಪೊಲೀಸರು ವಾಪಸ್ ಬೆಂಗಳೂರು ಕೇಂದ್ರ ಕಾರಗೃಹಕ್ಕೆ ಶಿಫ್ಟ್ ಮಾಡಿದ್ದಾರೆ. ಅಕ್ಟೊಬರ್ 3 ಮತ್ತು 4 ಎರಡು ದಿನ ತೀವ್ರ ವಿಚಾರಣೆ ಮಾಡಿದ ಪೊಲೀಸರು, ನಿನ್ನೆ (ಅಕ್ಟೋಬರ್ 04) ರಾತ್ರಿಯೇ ಬೆಂಗಳೂರ ಜೈಲಿಗೆ ಬಿಟ್ಟುಬಂದಿದ್ದಾರೆ.
ಸಂಜಯ್ ಚವಡಾಳ ಯಾರು?
ಮೂಲತಃ ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದವರಾದ ಸಂಜಯ್ ಚವಡಾಳ ಅವರು ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಆಗಿದ್ದು, ಕರ್ತವ್ಯ ಲೋಪದ ಆರೋಪದಡಿ ಸದ್ಯ ಅಮಾನತ್ತಿನಲ್ಲಿದ್ದಾರೆ. ಎಸ್ಸಿ ಮೀಸಲು ಕ್ಷೇತ್ರ ಶಿರಹಟ್ಟಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ಹೊಂದಿದ್ದರು. ಅರುಂಧತಿ ಫೌಂಡೇಷನ್ ಹೆಸರಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಭಾರತದಲ್ಲಿ ಸ್ವತಂತ್ರ ಮಾಧ್ಯಮದ ಪಾಲಿಗೆ ಇದು ಅತ್ಯಂತ ಕರಾಳ ಕಾಲ
ಚುನಾವಣೆಗೆ ಮುಂಚಿತವಾಗಿ ಸಂಜಯ್ ಅವರು ಹಾಲಶ್ರೀಗೆ ಮೊದಲ ಹಂತದಲ್ಲಿ, 10 ಲಕ್ಷ ರೂ, ಎರಡನೆಯ ಹಂತದಲ್ಲಿ 40 ಲಕ್ಷ ರೂ, ಮೂರನೇ ಹಂತದಲ್ಲಿ 50 ಲಕ್ಷ ರೂ. ಹಣವನ್ನು ನೀಡಿದ್ದಾರಂತೆ. ಮೂರು ಹಂತದಲ್ಲಿ ಹಣ ನೀಡಿದ್ದಾಗಿ ದೂರಿನಲ್ಲಿ ದಾಖಲಿಸಿರುವ ಬಗ್ಗೆ ಮಾಹಿತಿಯಿದೆ. ಸೂಕ್ತ ದಾಖಲೆ ಇಲ್ಲದ ಕಾರಣ ಮುಂಡರಗಿ ಪೊಲೀಸರು ಕೇವಲ ಎನ್‌ಸಿ ದಾಖಲಿಸಿ ಕಳುಹಿಸಿದ್ದಾರೆ.
ಸಸ್ಪೆಂಡ್ ಆಗಿರುವ ಪಿಡಿಒ ಸಂಜಯ್ ಚವಡಾಳಗೆ ಸಮರ್ಪಕ ದಾಖಲೆ ತೆಗೆದುಕೊಂಡು ಬರುವಂತೆ ಮುಂಡರಗಿ ಪೊಲೀಸರು ಸೂಚಿಸಿದ್ದಾರೆ. ಪಿಟಿಷನ್ ದಾಖಲಿಸಿಕೊಂಡು, ಮುಂಡರಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತ ಸಂಜಯ್ ದೂರು ನೀಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಾಗೆಯೇ ತಮ್ಮ ಆದಾಯ ಮೂಲ ತಿಳಿಸುವಂತೆ ಸಂಜಯ್‌ಗೆ ನೋಟಿಸ್ ನೀಡಿದ್ದಾರೆಂದು ತಿಳಿದು ಬಂದಿದೆ.
ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದ ಸಂಜಯ್
ಸಂಜಯ್ ಚವಡಾಳ ಅವರು ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿರುವುದಕ್ಕೆ ಸಾಕಷ್ಟು ಪುರಾವೆಗಳು ಅವರ ಫೇಸ್‌ಬುಕ್ ಪುಟದಲ್ಲಿ ಸಿಕ್ಕಿವೆ. ಆರ್‌ಎಸ್‌ಎಸ್ ಗಣವೇಷಧಾರಿಯಲ್ಲಿರುವ ಸಂಜಯ್ ಅವರ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.