2007 ರಲ್ಲಿ 100 ರೂಪಾಯಿ ಲಂಚ ಪಡೆದಿರುವುದು ತುಂಬಾ ಚಿಕ್ಕ ಮೊತ್ತವಾಗಿದ್ದು ಈಗ ಅದರ ಬೆಲೆ ಇನ್ನೂ ಕಡಿಮೆ ಎಂದು ಭ್ರಷ್ಟಾಚಾರ ಮತ್ತು ಲಂಚ ಪ್ರಕರಣದಿಂದ ಸರ್ಕಾರಿ ವೈದ್ಯಾಧಿಕಾರಿಯನ್ನು ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ.
ನ್ಯಾಯಮೂರ್ತಿ ಜಿತೇಂದ್ರ ಜೈನ್ ಅವರಿದ್ದ ಏಕಸದಸ್ಯ ಪೀಠವು ಇದೊಂದು ಕ್ಷುಲ್ಲಕ ವಿಷಯವೆಂದು ಪರಿಗಣಿಸಲು ಯೋಗ್ಯವಾದ ಪ್ರಕರಣ ಎಂದು ತೀರ್ಪಿನಲ್ಲಿ ತಿಳಿಸಿದ್ದು, ವೈದ್ಯಾಧಿಕಾರಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.
2007 ರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪೌಡ್‌ನಲ್ಲಿರುವ ಗ್ರಾಮೀಣ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅನಿಲ್ ಶಿಂಧೆ ಅವರು ಪಿಂಗಳೆ ಎಂಬ ವ್ಯಕ್ತಿಯೊಬ್ಬರಿಂದ ಹಲ್ಲೆಯಿಂದಾಗಿದ್ದ ಗಾಯವನ್ನು ಪ್ರಮಾಣೀಕರಿಸಲು 100 ರೂ. ಲಂಚ ಕೇಳಿದ್ದರು.
ಈ ಸುದ್ದಿ ಓದಿದ್ದೀರಾ? ತಾಳಿ ಕಟ್ಟಿದ ಮೇಲೆ ಸಪ್ತಪದಿ ತುಳಿಯಬೇಕು, ಇಲ್ಲಾಂದ್ರೆ ವಿವಾಹ ಅನೂರ್ಜಿತ: ಅಲಹಾಬಾದ್ ಹೈಕೋರ್ಟ್ ತೀರ್ಪು
ಈ ಬಗ್ಗೆ ಪಿಂಗಳೆ, ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಭ್ರಷ್ಟಾಚಾರ ನಿಗ್ರಹ ಸಿಬ್ಬಂದಿ ವೈದ್ಯರನ್ನು ಬಲೆ ಬೀಸಿ ಲಂಚ ನೀಡಿಕೆ ಸಂದರ್ಭದಲ್ಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿತ್ತು.
ಜನವರಿ 2012 ರಲ್ಲಿ, ವಿಶೇಷ ನ್ಯಾಯಾಲಯವು ಶಿಂಧೆ ಅವರನ್ನು ಎಲ್ಲ ಆರೋಪಗಳಿಂದ ಖುಲಾಸೆಗೊಳಿಸಿತ್ತು. ವಿಶೇಷ ನ್ಯಾಯಾಲಯದ ತೀರ್ಪನ್ನು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 2007ರಲ್ಲೇ ಇದು ಸಣ್ಣ ಮೊತ್ತವಾಗಿದ್ದು, ಇದೊಂದು ಕ್ಷುಲ್ಲಕ ಪ್ರಕರಣವಾಗಿದೆ ಎಂದು ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.