ಬೆಂಗಳೂರು ಮೂಲದ ಹುಡುಗ ರಚಿನ್ ರವೀಂದ್ರ ಹಾಗೂ ಸ್ಪೋಟಕ ಆಟಗಾರ ಡೆವೊನ್ ಕಾನ್ವೇ ಅವರ ಶತಕಗಳ ನೆರವಿನಿಂದ 14ನೇ ಏಕದಿನ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸಿತು.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 283 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 36.2 ಓವರ್‌ಗಳಲ್ಲಿ ಜಯ ತನ್ನದಾಗಿಸಿಕೊಂಡಿತು.
ನ್ಯೂಜಿಲೆಂಡ್ ತಂಡದಲ್ಲಿನ ಕನ್ನಡಿಗ ರಚಿನ್ ರವೀಂದ್ರ 96 ಚೆಂಡುಗಳಲ್ಲಿ 5 ಭರ್ಜರಿ ಸಿಕ್ಸರ್‌ಗಳು ಹಾಗೂ 11 ಬೌಂಡರಿಗಳೊಂದಿಗೆ 123ರನ್ ಬಾರಿಸಿ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿಯೇ ಶತಕ ದಾಖಲಿಸಿ ಅಜೇಯರಾಗಿ ಉಳಿದರು.
ರಚಿನ್‌ಗೆ ಉತ್ತಮ ಜೊತೆಯಾಟ ನೀಡಿದ ಡೆವೊನ್ ಕಾನ್ವೇ 121 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 19 ಬೌಂಡರಿಗಳೊಂದಿಗೆ 152 ರನ್ ಪೇರಿಸಿ ಅಜೇಯರಾದರು. ಇವರಿಬ್ಬರು ಮುರಿಯದ ಎರಡನೇ ವಿಕೆಟ್ ಜೊತೆಯಾಟಕ್ಕೆ 272 ರನ್ ಕಲೆ ಹಾಕಿದರು.
Two quickfire hundreds from Rachin Ravindra and Devon Conway helped New Zealand to a comfortable win in the #CWC23 opener 👊#ENGvNZ 📝: https://t.co/ROYLnOtSh0 pic.twitter.com/d9iBySMrR5
— ICC (@ICC) October 5, 2023
ಕಳೆದ ಬಾರಿಯ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಇವರಿಬ್ಬರನ್ನು ಔಟ್ ಮಾಡಲು 6 ಬೌಲರ್‌ಗಳನ್ನು ಕಣಕ್ಕಿಳಿಸಿದರೂ ಸಾಧ್ಯವಾಗಲಿಲ್ಲ.
ಇದಕ್ಕೂ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್, ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಕೇನ್ ವಿಲಿಯಮ್ಸ್‌ನ್ ಅನುಪಸ್ಥಿತಿಯಲ್ಲಿ ಟಾಮ್ ಲ್ಯಾಥಮ್ ನಾಯಕತ್ವ ವಹಿಸಿಕೊಂಡಿದ್ದರು.
ಇಂಗ್ಲೆಂಡ್‌ನಿಂದ ಸ್ಪರ್ಧಾತ್ಮಕ ಮೊತ್ತ
ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 282 ರನ್ ಗಳಿಸಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಯಿತು.
ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ ಕ್ರಿಕೆಟ್ ಹಬ್ಬ ಶುರು: ದಿಗ್ಗಜರ ಆಟದ ರಸದೌತಣಕ್ಕೆ ಸಿದ್ಧರಾಗಿ…
ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ಮಲಾನ್ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. 24 ಎಸೆತಗಳಲ್ಲಿ 2 ಬೌಂಡರಿ ಸಹಿತ 14 ರನ್ ಗಳಿಸಿ ಮ್ಯಾಟ್ ಹೆನ್ರಿ ಬೌಲಿಂಗ್ನಲ್ಲಿ ಔಟಾದರು. ಮಲಾನ್ ಬೆನ್ನಲ್ಲೇ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಜಾನಿ ಬೈರ್ಸ್ಟೋ 35 ಎಸೆತಗಳಲ್ಲಿ 33 ರನ್ ಕಲೆ ಹಾಕಿ ಪೆವಿಲಿಯನ್‌ಗೆ ತೆರಳಿದರು. ಈ ಜೋಡಿ ಮೊದಲ ವಿಕೆಟ್ಗೆ ಕಲೆ ಹಾಕಿದ್ದು 40 ರನ್ ಮಾತ್ರ.
Conway and Ravindra now have New Zealand's highest partnership in men's ODI World Cup history 🤝
They go past a 168-run stand between Lee Germon and Chris Harris against Australia in 1996#ENGvNZ | #CWC23 pic.twitter.com/v2KDlYRZnM
— ESPNcricinfo (@ESPNcricinfo) October 5, 2023
3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗಿಳಿದ ಜೋ ರೂಟ್, ಅದ್ಭುತ ಪ್ರದರ್ಶನ ನೀಡಿದರು. ಇದರ ನಡುವೆ ಬೆನ್ ಸ್ಟೋಕ್ಸ್ ಜಾಗದಲ್ಲಿ ಅವಕಾಶ ಪಡೆದುಕೊಂಡಿದ್ದ ಹ್ಯಾರಿ ಬ್ರೂಕ್ (25), ಸ್ಫೋಟಕ ಆಟಕ್ಕೆ ಕೈಹಾಕಿ ಕೈಸುಟ್ಟುಕೊಂಡರು. ಫೋರ್, ಫೋರ್, ಸಿಕ್ಸರ್ ಬಾರಿಸಿ 16.6 ಓವರ್ನಲ್ಲಿ ರಚಿನ್ ರವೀಂದ್ರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಮೊಯಿನ್ ಅಲಿ ಕೂಡ 11 ರನ್ಗಳಿಗೆ ಆಟ ಮುಗಿಸಿದರು. ಸತತ ವಿಕೆಟ್ ಕಳೆದುಕೊಂಡರೂ ರೂಟ್ ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆ ನಿಂತರು.
ಜವಾಬ್ದಾರಿಯುತ ಮತ್ತು ರಕ್ಷಣಾತ್ಮಕ ಆಟವಾಡುತ್ತಿದ್ದ ಜೋ ರೂಟ್ಗೆ, ನಾಯಕ ಜೋಸ್ ಬಟ್ಲರ್ ಅಮೋಘ ಜೊತೆಯಾಟ ನೀಡಿದರು. ಈ ಜೋಡಿ 5ನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟವಾಡಿತು. ಈ ನಡುವೆ ಜೋ ರೂಟ್ ಸೊಗಸಾದ ಅರ್ಧಶತಕ ಸಿಡಿಸಿ ಮಿಂಚಿದರು. ನಾಯಕನ ಆಟವಾಡುತ್ತಿದ್ದ ಬಟ್ಲರ್, 42 ಎಸೆತಗಳಲ್ಲಿ 43 ರನ್ ಕಲೆ ಹಾಕಿ ನಿರ್ಗಮಿಸಿದರು.
The first time in ODI history all 11 batters in a team have reached double figures 🤯#ENGvNZ | #CWC23 pic.twitter.com/J2JlQupsrj
— ESPNcricinfo (@ESPNcricinfo) October 5, 2023
ನ್ಯೂಜಿಲೆಂಡ್ ತಂಡದ ಪರ ಮಾರಕ ದಾಳಿ ನಡೆಸಿದ ಮ್ಯಾಟ್ ಹೆನ್ರಿ 48 ರನ್ ನೀಡಿ 3 ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್ ಹಾಗೂ ಗ್ಲೆನ್ ಫಿಲಿಫ್ಸ್ ತಲಾ 2 ವಿಕೆಟ್ ಪಡೆದರು. ಇನ್ನು ಟ್ರೆಂಟ್ ಬೌಲ್ಟ್, ರಚಿನ್ ರವೀಂದ್ರ ತಲಾ ಒಂದೊಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.