ಹಿರಿಯ ಪತ್ರಕರ್ತ ಕೆ ಎಸ್ ಸಚ್ಚಿದಾನಂದಮೂರ್ತಿ ಇಂದು ಬೆಳಗ್ಗೆ (ಅಕ್ಟೋಬರ್ 13) 11.55 ರ ಸುಮಾರಿನಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಶ್ರೀಯುತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಅನಾರೋಗ್ಯದ ಕಾರಣದಿಂದ ಬೆಂಗಳೂರಿನ ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಚ್ಚಿದಾನಂದಮೂರ್ತಿ ಅವರು ನಿಧನರಾಗಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಸರಳ ವ್ಯಕ್ತಿತ್ವದ ಸಚ್ಚಿದಾನಂದಮೂರ್ತಿ ಅವರು ಸ್ಥಳೀಯ ಪತ್ರಕರ್ತ ಬಳಗದಲ್ಲಿ ‘ಸಚ್ಚಿ’ ಎಂದೇ ಹೆಸರಾಗಿದ್ದರು.
ಕೋಲಾರ ಜಿಲ್ಲೆಯ ಮೂಲದವರಾದ ಸಚ್ಚಿದಾನಂದ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇಂಡಿಯನ್ ಎಕ್ಸ್‌ಪ್ರೆಸ್ ಆಂಗ್ಲ ಪತ್ರಿಕೆ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದರು.
ನಂತರದಲ್ಲಿ ದಿ ವೀಕ್ ಹಾಗೂ ಮಲಯಾಳಿ ಮನೋರಾಮ ವಾರಪತ್ರಿಕೆಗೆ ಸೇರಿ ಬೆಂಗಳೂರು ಹಾಗೂ ದೆಹಲಿ ಬ್ಯೂರೊ ಮುಖ್ಯಸ್ಥ, ಮಾಜಿ ಸ್ಥಾನೀಯ ಸಂಪಾದಕರಾಗಿ ಸುಮಾರು ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಹಿರಿಯ ಪತ್ರಕರ್ತ, 'ಮಲಯಾಳ ಮನೋರಮಾ' ಮತ್ತು 'ದಿ ವೀಕ್' ಪತ್ರಿಕೆಗಳ ಮಾಜಿ ಸ್ಥಾನೀಯ ಸಂಪಾದಕರಾಗಿದ್ದ ಕೆ.ಎಸ್.ಸಚ್ಚಿದಾನಂದಮೂರ್ತಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ.
ನನಗೆ ಆತ್ಮೀಯರು ಮತ್ತು ಹಿತೈಷಿಗಳಾಗಿದ್ದ ಸಚ್ಚಿದಾನಂದಮೂರ್ತಿಯವರು ದೆಹಲಿಯ ಮಾಧ್ಯಮರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ… pic.twitter.com/e8l7ZmXrHH
— Siddaramaiah (@siddaramaiah) October 13, 2023
ಕೇಂದ್ರ ಪತ್ರಿಕಾ ಮಾನ್ಯತೆ ಸಮಿತಿ ಮತ್ತು ಪತ್ರಿಕಾ ಮಂಡಳಿ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ, ಲೋಕಸಭೆ ಮಾಧ್ಯಮ ಸಲಹಾ ಸಮಿತಿಯ ಅಧ್ಯಕ್ಷ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾಧ್ಯಮ ಸಲಹಾ ಸದಸ್ಯ ಸೇರಿದಂತೆ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸಚ್ಚಿದಾನಂದ ಅವರಿಗೆ 2006ರಲ್ಲಿ ಕರ್ನಾಟಕ ರಾಜ್ಯ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಹೇಳಿದ್ದ ಹಸಿ ಸುಳ್ಳು-‘ನಾನೂ ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ’
ಸಚ್ಚಿದಾನಂದ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚಿಸಿದ್ದಾರೆ. “ನನಗೆ ಆತ್ಮೀಯರು ಮತ್ತು ಹಿತೈಷಿಗಳಾಗಿದ್ದ ಸಚ್ಚಿದಾನಂದಮೂರ್ತಿಯವರು ದೆಹಲಿಯ ಮಾಧ್ಯಮರಂಗದಲ್ಲಿ ಸಕ್ರಿಯರಾಗಿದ್ದ ಕೆಲವೇ ಕೆಲವು ಹಿರಿಯ ಕನ್ನಡಿಗ ಪತ್ರಕರ್ತರಲ್ಲಿ ಒಬ್ಬರಾಗಿದ್ದರು. ರಾಜ್ಯ-ರಾಷ್ಟ್ರಗಳ ವಿದ್ಯಮಾನಗಳ ಜ್ಞಾನಕೋಶದಂತಿದ್ದ ಸಚ್ಚಿದಾನಂದಮೂರ್ತಿಯವರ ಸಾವು ಮಾಧ್ಯಮರಂಗಕ್ಕೆ ತುಂಬಲಾರದ ನಷ್ಟ” ಎಂದು ಸಿದ್ದರಾಮಯ್ಯ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಸಚ್ಚಿದಾನಂದ ಅವರ ಮೃತದೇಹವನ್ನು ಜಯನಗರದ 5ನೇ ಬ್ಲಾಕ್‌ನಲ್ಲಿರುವ ನಂ.558,10 ನೇ ಮುಖ್ಯ
ರಸ್ತೆಯ ಅವರ ಮನೆಯಲ್ಲಿ ಸಂಜೆ 5 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಇಡಲಾಗುವುದು. 5 ಗಂಟೆ ನಂತರ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.