- ಮೂರ್ನಾಲ್ಕು ದಿನಗಳಿಂದ ತಲೆಮರೆಸಿಕೊಂಡಿದ್ದ ಪುನೀತ್
- ರಾಜಸ್ಥಾನದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು
ಕನಕಪುರದ ಸಾತನೂರು ಬಳಿ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ವ್ಯಾಪಾರಿ ಇದ್ರೀಸ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣದ ಆರೋಪಿ ಪುನೀತ್ ಕೆರೆಹಳ್ಳಿ ಅವರನ್ನು ರಾಜಸ್ಥಾನದಲ್ಲಿ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ.
ಏ.1 ರಂದು ರಾಮನಗರ ಜಿಲ್ಲೆಯ ಸಾತನೂರಿ ಬಳಿ ಜಾನುವಾರಗಳ ವ್ಯಾಪಾರಿ ಇದ್ರೀಸ್ ಪಾಷಾ ಅವರ ಮೃತದೇಹ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದೇ ಸ್ಥಳದಲ್ಲಿ ಈ ವ್ಯಕ್ತಿ ಸಾಯುವ ಕೆಲವೆ ಗಂಟೆಗಳ ಹಿಂದೆ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರು ಜಾನುವಾರುಗಳ ರಕ್ಷಣೆ ಮಾಡಿದ್ದರು.
ಜಾನುವಾರುಗಳನ್ನು ರಕ್ಷಣೆ ಮಾಡುವ ನೆಪದಲ್ಲಿ ಇದ್ರೀಸ್ ಪಾಶಾ ಮೇಲೆ ಹಲ್ಲೆ ಮಾಡಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ, ಪುನೀತ್ ಮತ್ತು ಸಹಚರರ ವಿರುದ್ಧ ಮೃತರ ಕುಟುಂಬಸ್ಥರು ಸಾತನೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು ಮತ್ತು ಠಾಣೆ ಬಳಿ ಪ್ರತಿಭಟನೆ ನಡೆಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಸಾತನೂರು ಪೊಲೀಸರು, ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರ ವಿರುದ್ಧ ಭಾರತೀಯ ದಂಡ ಸಂಹಿತೆ 41, 504, 506, 324, 302, 34 ರ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ?: ಎನ್‌ಸಿಇಆರ್‌ಟಿ ಯಡವಟ್ಟು | 12ನೇ ತರಗತಿಯ ಪಠ್ಯದಿಂದ ಗಾಂಧಿ ಕುರಿತ ಕೆಲ ಉಲ್ಲೇಖಗಳೇ ಮಾಯ!
ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಪುನೀತ್, “ನನ್ನ ವಿರುದ್ಧ ಎಫ್ಐಆರ್ ದಾಖಲಾಗಿದ್ದರೆ ವಿಚಾರಣೆ ಎದುರಿಸಿ, ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ. ಸದ್ಯ ನಾನು ದೇವಸ್ಥಾನ ಸುತ್ತುತ್ತಿದ್ದೇನೆ” ಎಂದು ಹೇಳಿಕೆ ನೀಡಿರುವ ವಿಡಿಯೋ ಹರಿಬಿಟ್ಟಿದ್ದನು.
ಆದರೆ, ಆರೊಪಿಯನ್ನು ಬಂಧಿಸುವಂತೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಪುನೀತ್ ಮತ್ತು ತಂಡವನ್ನು ಬಂಧಿಸಲು ವಿಶೇಷ ತಂಡ ರಚನೆ ಮಾಡಿದ್ದ ಪೊಲೀಸರು, ಇಂದು ರಾಜಸ್ಥಾನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.