ರಾಜ್ಯ ಚುನಾವಣಾ ಕಣ ರಂಗೇರುತ್ತಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಇನ್ನೂ ಹಲವಾರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಹೆಣಗಾಡುತ್ತಿವೆ. ಈ ನಡುವೆ, ಎರಡೂ ಪಕ್ಷಗಳ ಕಾರ್ಯಕರ್ತರು ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡುವುದನ್ನು ವಿರೋಧಿಸುತ್ತಿದ್ದಾರೆ.
ಕಲಬುರಗಿ, ಬಳ್ಳಾರಿ, ಹಾವೇರಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಹಾಲಿ ಶಾಸಕರಿಗೆ ಮತ್ತೆ ಟಿಕೆಟ್ ನೀಡುವುದನ್ನು ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ. “ಹಾಲಿ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿಲ್ಲ. ಪಕ್ಷದ ಕಾರ್ಯಕರ್ತರನ್ನೂ ನಿರ್ಲಕ್ಷಿಸಿದ್ದಾರೆ” ಎಂದು ಶಾಸಕರ ವಿರುದ್ಧ ಸ್ಥಳೀಯ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಕಲಬುರಗಿಯ ನೂರಾರು ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಬಸವರಾಜ್ ಮಟ್ಟಿಮುಡ್ ಅವರಿಗೆ ಮತ್ತೆ ಟಿಕೆಟ್ ನೀಡದಂತೆ ನಗರದಲ್ಲಿ ಭಾನುವಾರ ರ್‍ಯಾಲಿ ನಡೆಸಿದ್ದರು. ‘ಮಟ್ಟಿಮುಡ್ ಹಠಾವೋ, ಕಲಬುರಗಿ ಗ್ರಾಮೀಣ ಬಿಜೆಪಿ ಬಚಾವೋ’ (ಮಟ್ಟಿಮೂಡ ತೊಲಗಿಸಿ, ಕಲಬುರಗಿ ಗ್ರಾಮೀಣ ಬಿಜೆಪಿ ಉಳಿಸಿ) ಎಂಬ ಘೋಷಣೆಯಡಿ ಪ್ರತಿಭಟನೆ ನಡೆಸಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ (ಎಸ್‌ಸಿ) ಕ್ಷೇತ್ರದಲ್ಲಿ ಶಾಸಕ ರಾಮಣ್ಣ ಲಮಾಣಿ ಅವರಿಗೂ ಟಿಕೆಟ್ ನೀಡದಂತೆ ಅಲ್ಲಿನ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಎರಡು ದಿನಗಳ ಹಿಂದೆ ಲಕ್ಷ್ಮೇಶ್ವರದಲ್ಲಿ ಪಕ್ಷದ ನೂರಾರು ಕಾರ್ಯಕರ್ತರು ಸಭೆ ನಡೆಸಿ ಲಮಾಣಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿದ್ದಾರೆ.
ಶಿರಗುಪ್ಪ ಕ್ಷೇತ್ರದಲ್ಲಿ ಶಾಸಕ ಸೋಮಲಿಂಗಪ್ಪ ಮರು ನಾಮಪತ್ರ ಸಲ್ಲಿಸಿರುವುದನ್ನು ವಿರೋಧಿಸಿ ಸ್ಥಳೀಯ ಬಿಜೆಪಿ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಪಕ್ಷದ ಯಶಸ್ಸಿಗೆ ದುಡಿದವರನ್ನು ಶಾಸಕರು ಕಡೆಗಣಿಸಿದ್ದಾರೆ. ಅವರ ನಾಮಪತ್ರವನ್ನು ಹಿಂಪಡೆದು, ನಿಷ್ಠ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕೆಂದು ಎಂದು ಪಕ್ಷದ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಧಾರವಾಡ ಜಿಲ್ಲೆಯ ಕುಂಡಗೋಳ ಕಾಂಗ್ರೆಸ್ ಶಾಸಕಿ ಕುಸುಮಾವತಿ ಶಿವಳ್ಳಿ ಅವರಿಗೆ ಟಿಕೆಟ್ ನೀಡದಂತೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಕ್ಷೇತ್ರದಲ್ಲಿ 16 ಆಕಾಂಕ್ಷಿಗಳಿದ್ದು, ಅವರ ಬೆಂಬಲಿಗರು ಹೊಸ ಮುಖವನ್ನು ಆಯ್ಕೆ ಮಾಡುವಂತೆ ಕೆಪಿಸಿಸಿ ಮೇಲೆ ಒತ್ತಡ ಹೇರುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬಿಜೆಪಿ ಸೇರಿದ ಮಾಜಿ ಸಂಸದ ನಾಗಮಂಗಲದ ಎಲ್ ಆರ್ ಶಿವರಾಮೇಗೌಡ
ಹಾನಗಲ್‌ನಲ್ಲಿ ಹಾಲಿ ಶಾಸಕ ಶ್ರೀನಿವಾಸ ಮಾನೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿರುವುದನ್ನು ಕಾಂಗ್ರೆಸ್‌ನ ಹಿರಿಯ ಪದಾಧಿಕಾರಿ ಹಾಗೂ ಮಾಜಿ ಶಾಸಕ ಮನೋಹರ ತಹಶೀಲ್ದಾರ್ ಮತ್ತು ಅವರ ಬೆಂಬಲಿಗರು ವಿರೋಧಿಸಿದ್ದಾರೆ. ಪಕ್ಷವು ಮಾನೆ ಅವರನ್ನು ಅಭ್ಯರ್ಥಿ ಎಂದು ಹೆಸರಿಸಿದ ನಂತರ, ತಹಶೀಲ್ದಾರ್ ಅವರು ಪಕ್ಷ ತೊರೆದು ಜೆಡಿಎಸ್‌ಗೆ ಸೇರಿದ್ದಾರೆ. ಹಾನಗಲ್‌ನಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲಿದ್ದಾರೆ.
ಹಡಗಲಿ (ಎಸ್‌ಸಿ)ಯಿಂದ ಹಾಲಿ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ಶಾಸಕರ ಮರುನಾಮಕರಣದ ವಿರುದ್ಧ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.