ಅಕ್ಟೋಬರ್ 14ರಂದು ಗುಜರಾತ್, ದೆಹಲಿ ಹಾಗೂ ಉತ್ತರ ಭಾರತದ ಕೆಲವು ರಾಜ್ಯಗಳ ಟೈಮ್ಸ್ ಆಫ್ ಇಂಡಿಯಾ ಆಂಗ್ಲ ಪತ್ರಿಕೆಯ ನಗರ ಆವೃತ್ತಿಗಳಲ್ಲಿ ಭಾರತದ ಪ್ರಮುಖ ಆನ್‌ಲೈನ್ ಪ್ರಯಾಣ ಟಿಕೆಟ್ ಸೇವಾ ಕಂಪನಿಯಾದ ‘ಮೇಕ್ ಮೈ ಟ್ರಿಪ್’ ಒಂದು ಜಾಹೀರಾತನ್ನು ಪ್ರಕಟಿಸಿತ್ತು.
ಜಾಹೀರಾತಿನ ಸಾರಾಂಶ ಹೀಗಿದೆ: ‘ಪಾಕಿಸ್ತಾನಿ ಅಭಿಮಾನಿಗಳಿಗೆ ಮುಕ್ತ ಆಹ್ವಾನ. ಪ್ರಿಯ ನೆರೆಹೊರೆಯವರೆ, ಸ್ವಲ್ಪ ಸಮಯ ತೆಗೆದುಕೊಳ್ಳೋಣ ಮತ್ತು ನಮ್ಮ ಪೈಪೋಟಿಯನ್ನು ಮರೆತುಬಿಡೋಣ. ಇದು ನೀವು ನಮ್ಮನ್ನು ಭೇಟಿ ಮಾಡುವ ಪ್ರತಿ ದಿನವಲ್ಲ. ನೀವು ಯಾವುದೇ ಅಭ್ಯಂತರವಿಲ್ಲದೆ ಉತ್ತಮ ಅತಿಥಿಯಾಗಿ ಆಟವಾಡುತ್ತಿದ್ದೀರಿ ಎಂದು ನಾವು ಭಾವಿಸುತ್ತೇವೆ. ಇಂದಿನ ದಿನ ದೊಡ್ಡ ದಿನವಾಗಲಿದೆ. ಹಾಗಾಗಿ, ಅತಿಥಿ ದೇವೋಭವ ಎಂಬ ಭಾರತೀಯ ಸಂಪ್ರದಾಯಕ್ಕೆ ಬದ್ಧರಾಗಿ, ನಾವು ನಿಮಗೆ ಕೆಲವು ಹೃತ್ಪೂರ್ವಕ ಕೊಡುಗೆಗಳನ್ನು ನೀಡಲು ಬಯಸುತ್ತೇವೆ.’
‘ಪಾಕಿಸ್ತಾನವು 200 ರನ್‌ಗಳಿಂದ ಅಥವಾ 10 ವಿಕೆಟ್‌ಗಳಿಂದ ಸೋತರೆ ಶೇ 50 ರಿಯಾಯಿತಿ ಪಡೆಯಿರಿ. 100 ರನ್‌ಗಳಿಂದ ಅಥವಾ 6 ವಿಕೆಟ್‌ಗಳಿಂದ ಸೋತರೆ ಶೇ.30 ರಷ್ಟು ರಿಯಾಯಿತಿ ಪಡೆಯಿರಿ. 3 ವಿಕೆಟ್‌ಗಳಿಂದ ಅಥವಾ 50 ರನ್‌ಗಳಿಂದ ಪರಾಭವಗೊಂಡರೆ ಶೇ.10 ರಷ್ಟು ರಿಯಾಯಿತಿಯನ್ನು ನಿರ್ದಿಷ್ಟ ಕೋಡ್ ಬಳಸಿ ಪಡೆಯಿರಿ’ ಎಂದು ಪ್ರಕಟಿಸಲಾಗಿತ್ತು.
ಅಕ್ಟೋಬರ್ 14ರಂದು ಗುಜರಾತ್‌ನ ಅಹಮದಾಬಾದಿನಲ್ಲಿ ಐಸಿಸಿ ಏಕದಿನ ವಿಶ್ವಕಪ್ 14ನೇ ಟೂರ್ನಿಯ ಭಾರತ – ಪಾಕಿಸ್ತಾನ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ಸೋತು ಭಾರತ ಗೆಲುವು ಸಾಧಿಸಿತ್ತು. ಕ್ರೀಡೆಯಲ್ಲಿ ಸೋಲು ಗೆಲುವು ಮಾಮಾಲಿ. ಹಲವು ಬಾರಿ ಪಾಕಿಸ್ತಾನ ಭಾರತದ ನೆಲದಲ್ಲಿ ಟೀಂ ಇಂಡಿಯಾವನ್ನು ಸೋಲಿಸಿದ್ದರೆ, ಭಾರತ ಕೂಡ ನೆರೆಯ ದೇಶದಲ್ಲಿ ನಡೆದ ಪಂದ್ಯಗಳಲ್ಲಿ ಪಾಕ್ ವಿರುದ್ಧ ಗೆಲುವು ಸಾಧಿಸಿದೆ.
This is aweful – @makemytrip let’s have sporting spirit – bad in taste pic.twitter.com/qYqppuGfC9
— pallavi ghosh (@_pallavighosh) October 14, 2023
ಆದರೆ ಮೇಕ್ ಮೈ ಟ್ರಿಪ್ ಪ್ರಕಟಿಸಿದ ಈ ಜಾಹಿರಾತು ಕುಚೋದ್ಯದ ಹಾಗೂ ಉಭಯ ದೇಶಗಳ ನಡುವೆ ಕೋಮು ಭಾವನೆಯನ್ನು ಕೆರಳಿಸುವಂಥದ್ದಾಗಿದೆ. ಒಂದು ತಂಡವು ಸೋತರೆ ನಿಮಗಿಷ್ಟು ರಿಯಾಯಿತಿ ನೀಡುತ್ತೇವೆ ಎನ್ನುವ ಜಾಹೀರಾತು ಪ್ರತಿಷ್ಠಿತ ಕಂಪನಿಯ ಸಭ್ಯ ಲಕ್ಷಣವಲ್ಲ. ದೇಶಾದ್ಯಂತ ನೂರಾರು ಉದ್ಯೋಗಿಗಳೊಂದಿಗೆ ಸಾವಿರಾರು ಕೋಟಿ ವ್ಯವಹಾರ ನಡೆಸುವ ಕಂಪನಿಯೊಂದು ತನ್ನ ವ್ಯವಹಾರವನ್ನು ದೇಶ ದೇಶಗಳ ನಡುವೆ ಹಗೆ ಮರೆತು ಬಾಂಧವ್ಯಕ್ಕಾಗಿ ನಡೆಯುವ ಕ್ರಿಕೆಟ್‌ನಂಥ ಸಭ್ಯ ಕ್ರೀಡೆಯಲ್ಲಿ ದ್ವೇಷದ ಬೀಜವನ್ನು ಬಿತ್ತುವುದಕ್ಕೆ ಇಟ್ಟುಕೊಂಡಿರುವುದು ನಿಜಕ್ಕೂ ನೋವಿನ ವಿಚಾರ ಮಾತ್ರವಲ್ಲ, ಖಂಡನೀಯ ಕೂಡ.
ಮೇಕ್ ಮೈ ಟ್ರಿಪ್ ಈ ನಡೆಯನ್ನು ಕ್ರೀಡಾಸಕ್ತರು ಮಾತ್ರವಲ್ಲ ಭಿನ್ನ ವಿಚಾರಧಾರೆಗಳನ್ನು ವ್ಯಕ್ತಪಡಿಸುವ ಬಲಪಂಥೀಯರು ವಿರೋಧಿಸುತ್ತಿದ್ದಾರೆ. ಕ್ರೀಡೆಯು ಧರ್ಮ, ಜಾತಿ, ಭಾಷೆ ಮುಂತಾದ ಗಡಿ ಮೀರಿ ಮನುಷ್ಯರನ್ನು ಬೆಸೆಯುತ್ತದೆ. ಸೋಲು ಗೆಲುವು ಎನ್ನುವುದು ಕೇವಲ ಫಲಿತಾಂಶ ಅಷ್ಟೆ. ಮನುಷ್ಯ ಸಂಬಂಧಗಳೆ ಇಲ್ಲಿ ಹೆಚ್ಚು ಮುಖ್ಯವಾಗುತ್ತವೆ.
ಮಾನವೀಯತೆ ಧರ್ಮವನ್ನು ಒಂದೆಡೆ ಸಾರಲು ಕ್ರಿಕೆಟ್ ಒಳಗೊಂಡು ಎಲ್ಲ ಕ್ರೀಡೆಗಳು ಹುಟ್ಟಿಕೊಂಡವು. ಇದಕ್ಕೆ ನೂರು ವರ್ಷಗಳ ಹಿಂದೆ ಆರಂಭವಾದ ವಿಶ್ವ ಕ್ರೀಡಾ ಹಬ್ಬ ಒಲಿಂಪಿಕ್ಸ್ ಕ್ರೀಡಾಕೂಟಗಳೆ ಸಾಕ್ಷಿ. ಗ್ರಾಹಕರ ಹಿತರಕ್ಷಣೆ ನಮಗೆ ಬೇಡ, ನಮ್ಮ ವ್ಯವಹಾರದಲ್ಲಿ ಲಾಭವೇ ಮುಖ್ಯ ಎನ್ನುವ ಬಹುತೇಕ ಕಂಪನಿಗಳಿವೆ. ಒಂದು ವೇಳೆ ಇದೇ ಸಾಲಿನಲ್ಲಿ ಮೇಕ್ ಮೈ ಟ್ರಿಪ್ ಕೂಡ ವ್ಯವಹಾರದ ಉದ್ದೇಶವನ್ನು ಅನುಸರಿಸಬೇಕೆಂದಿದ್ದರೆ ಭಾರತ ತಂಡ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದರೆ ಅಥವಾ ಟ್ರೋಫಿ ಎತ್ತಿ ಹಿಡಿದಿದ್ದರೆ ಈ ರೀತಿಯ ಜಾಹೀರಾತು ಪ್ರಕಟಿಸಿ ಲಾಭವನ್ನು ಗಳಿಸಿಕೊಳ್ಳಬೇಕಾಗಿತ್ತು. ಅದನ್ನು ಬಿಟ್ಟು ಉಭಯ ದೇಶಗಳ ನಡುವೆ ನಡೆಯುತ್ತಿರುವ ಪಂದ್ಯವನ್ನು ಉರಿವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದಿತ್ತು. ಕೆಲವು ಧರ್ಮಾಂಧರು ಹಾಗೂ ಅದೇ ರೀತಿ ಹಿನ್ನೆಲೆಯನ್ನು ಹೊಂದಿರುವ ಸಂಘಟನೆಗಳನ್ನು ಹೊರತುಪಡಿಸಿದರೆ ಉಭಯ ದೇಶಗಳ ಬಹುತೇಕ ನಿವಾಸಿಗಳಿಗೆ ದ್ವೇಷದ ಭಾವನೆ, ಹಗೆತನ ಬೇಕಾಗಿಲ್ಲ. ಎಲ್ಲರಿಗೂ ಸಹಬಾಳ್ವೆಯಿಂದ ಬದುಕು ನಡೆಸುವುದೇ ಪ್ರಮುಖ ಉದ್ದೇಶವಾಗಿದೆ.
ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ಜಯ್ ಶಾ ಪ್ರತಿಷ್ಠೆಯಿಂದ ಪ್ರೇಕ್ಷಕರಿಲ್ಲದ ಕ್ರೀಡಾಂಗಣಗಳು, ಕಳೆಗುಂದಿದ ಕ್ರಿಕೆಟ್
ಇಲ್ಲಿ ಇನ್ನೊಂದು ವಿಷಯವೇನೆಂದರೆ ಮೇಕ್ ಮೈ ಟ್ರಿಪ್‌ನಂಥ ಆನ್‌ಲೈನ್ ಟ್ರಾವೆಲ್ ಕಂಪನಿಗಳು ರಿಯಾಯಿತಿಯಿಂದ ಗ್ರಾಹಕರಿಗೆ ಎಳ್ಳಷ್ಟು ಉಪಯೋಗವಾಗುವುದಿಲ್ಲ ಎಂಬುದು ಬಹುತೇಕ ಗ್ರಾಹಕರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸುವ ಅಭಿಪ್ರಾಯ. ಒಂದರಲ್ಲಿ ಚೂರು ನೀಡಿ ಮತ್ತೊಂದರಲ್ಲಿ ಎರಡರಷ್ಟು ಕಿತ್ತುಕೊಳ್ಳುವುದೇ ಇವುಗಳ ವ್ಯವಹಾರ.
As an Indian, I want to apologize to every Pakistani person for this @makemytrip ad. This does not represent Indian values. It only represents the worst among us. (1/2) pic.twitter.com/xzJ7GWd5hY
— Rahul Fernandes (@newspaperwallah) October 14, 2023
ತುಟಿ ಬಿಚ್ಚದ ಹಿರಿಯ ಕ್ರಿಕೆಟಿಗರು
ಮುಖ್ಯವಾಗಿ ಈ ರೀತಿಯ ಜಾಹೀರಾತುಗಳ ಬಗ್ಗೆ ಬಿಸಿಸಿಐ ಉಗ್ರ ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಆದರೆ ಪರೋಕ್ಷವಾಗಿ ಬೆಂಬಲ ನೀಡಿ ಕ್ರಿಕೆಟ್ ಅನ್ನು ಕೇವಲ ಹಣ ಹಾಗೂ ಧರ್ಮದ ಕ್ರೀಡೆಯನ್ನಾಗಿ ಮಾಡುತ್ತಿರುವುದು ನಿಜಕ್ಕೂ ಶೋಚನೀಯ.
ಅಲ್ಲದೆ ವಿಶ್ವ ಮಟ್ಟದ ಶ್ರೀಮಂತ ಕ್ರೀಡಾಸಂಸ್ಥೆಗಳಲ್ಲಿ ಒಂದಾಗಿರುವ ಬಿಸಿಸಿಐನ ಆಡಳಿತ, ಅವ್ಯವಹಾರ, ಏಕಚಕ್ರಾಧಿಪತ್ಯ ಮುಂತಾದವುಗಳ ಬಗ್ಗೆ ಆಗಾಗ ಬಹಿರಂಗವಾಗಿ ಸಿಡಿದೇಳುವ ಸುನಿಲ್ ಗವಾಸ್ಕರ್, ಕಪಿಲ್ ದೇವ್, ಅನಿಲ್ ಕುಂಬ್ಳೆ, ವೆಂಕಟೇಶ್ ಪ್ರಸಾದ್‌ರಂಥ ಹಿರಿಯ ಕ್ರಿಕೆಟಿಗರು ಈ ದ್ವೇಷ ಭಾವನೆ ಕೆರಳಿಸುವ ಮೇಕ್ ಮೈ ಟ್ರಿಪ್ ಜಾಹೀರಾತಿನ ಬಗ್ಗೆ ತುಟಿ ಬಿಚ್ಚಿಲ್ಲ.
ಬಹುಶಃ ತಮ್ಮ ಅಧಿಕಾರ, ವರಮಾನಕ್ಕೆ ಕ್ರಿಕೆಟ್ ಮಂಡಳಿಯಿಂದ ಎಲ್ಲಿ ಕುತ್ತು ಬರಬಹುದೋ ಎಂಬ ಆತಂಕ ಇವರಿಗೂ ಕಾಡಿರಬಹುದು. ಧರ್ಮವನ್ನು ಕೆರಳಿಸುವಂಥ ನಾಯಕರೆ ಮಂಡಳಿಯ ಚುಕ್ಕಾಣಿ ಹಿಡಿದಿರುವಾಗ ಕ್ರಿಕೆಟ್ ವ್ಯವಸ್ಥೆಯ ವಿರುದ್ಧ ತಿರುಗಿ ನಿಂತರೆ ತಮ್ಮನ್ನು ಸಂಪೂರ್ಣವಾಗಿ ಮೌನವಾಗಿಸುವ ಭಯದಿಂದಲೂ ಜಾಹೀರಾತಿನ ವಿರುದ್ಧ ಮಾತನಾಡದೆ ಇರಬಹುದು.
Na Ishq mein na Pyaar mein .
Jo mazza hai Pakistan ki haar mein.Aise kaun invite karta hai yaar 🤣
Sahi khel gaye MMT ! pic.twitter.com/xfN9sk98sG
— Virender Sehwag (@virendersehwag) October 14, 2023
ಈ ಜಾಹೀರಾತಿನ ವಿಚಾರದಲ್ಲಿ ದೇಶದ ಖ್ಯಾತ ಕ್ರಿಕೆಟಿಗ, ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ನಡೆದುಕೊಂಡ ರೀತಿ ತೀರ ಅಪಹಾಸ್ಯಕ್ಕೆ ಗುರಿಯಾಗಿದೆ. ಅವರು ಕೋಮು ಭಾವನೆ ಕೆರಳಿಸುವ ಜಾಹೀರಾತಿಗೆ ಬೆಂಬಲ ವ್ಯಕ್ತಪಡಿಸಿರುವುಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಭಾರತ ಪಾಕಿಸ್ತಾನದ ಕ್ರಿಕೆಟಿಗರಲ್ಲಿ ಕ್ರೀಡಾ ಸ್ಫೂರ್ತಿಯನ್ನು ಮೆರೆಸುವ ಹಲವರು ಬಂದು ಹೋಗಿದ್ದಾರೆ. ತಮ್ಮ ಆಟ, ಮಾನವೀಯತೆಯನ್ನು ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿಸಿದ್ದಾರೆ. ಅದಕ್ಕೆ ಮಹಮ್ಮದ್ ಅಜುರುದ್ದೀನ್, ವಾಸೀಂ ಅಕ್ರಂ, ವಿರಾಟ್ ಕೊಹ್ಲಿ, ಇಮ್ರಾನ್ ಖಾನ್‌ರಂಥ ಹಲವು ಆಟಗಾರರ ಉದಾಹರಣೆ ನೀಡಬಹುದು.
ಭಾರತೀಯರ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಪಾಕ್‌ನ ಮಾಜಿ ನಾಯಕರಾದ ವಾಸೀಂ ಅಕ್ರಂ, ಇಮ್ರಾನ್ ಖಾನ್ ಆಟ ಈಗಲು ಅಚ್ಚಳಿಯದೆ ಉಳಿದಿದೆ. ಇದೇ ರೀತಿ ಭಾರತ ತಂಡದ ಮಾಜಿ ನಾಯಕ ಮಹಮ್ಮದ್ ಅಜುರುದ್ದೀನ್ ಅವರ ಸಭ್ಯತೆಯ ಲಕ್ಷಣವನ್ನು ಪಾಕ್‌ನ ಹಲವು ಅಭಿಮಾನಿಗಳು ಈಗಲು ನೆನಪಿಸಿಕೊಳ್ಳುತ್ತಾರೆ. ವಿರಾಟ್ ಕೊಹ್ಲಿ ಆಟಕ್ಕೆ ಪಾಕ್‌ನ ಲಕ್ಷಾಂತರ ಕ್ರಿಕೆಟ್ ಪ್ರಿಯರು ಮನಸೋಲುತ್ತಾರೆ. ಕೊಹ್ಲಿಯ ಆಟ ವಿಶ್ವದ ಯಾವುದೇ ಭಾಗದಲ್ಲಿ ನಡೆದರೆ ಆತನ ಆಟವನ್ನು ಸವಿಯಲು ಧರ್ಮ, ಗಡಿ ಎಲ್ಲವನ್ನು ಮರೆತು ತೆರಳುವ ಪಾಕಿಸ್ತಾನದ ಅಭಿಮಾನಿಗಳಿದ್ದಾರೆ. ಈ ರೀತಿಯ ಆಟಗಾರರ ನಡುವೆ ವೀರೇಂದ್ರ ಸೆಹ್ವಾಗ್ ತುಂಬ ಚಿಕ್ಕವರಾಗಿ ಕಾಣುತ್ತಾರೆ.
ಏಕದಿನ ವಿಶ್ವಕಪ್ ಆತಿಥ್ಯ ವಹಿಸಿಕೊಂಡಿರುವ ಬಿಸಿಸಿಐ ವಿಶ್ವಕಪ್‌ನಲ್ಲಿ ಭಾರತದ ಪಂದ್ಯಗಳಿಗೆ ಮಾತ್ರ ಹೆಚ್ಚು ಪ್ರಾಧಾನ್ಯತೆ ಕೊಟ್ಟಂತೆ ಕಾಣುತ್ತಿದೆ. ಭಾರತ ತಂಡವನ್ನು ಹೊರತುಪಡಿಸಿ ಉಳಿದ ಪಂದ್ಯಗಳಿಗೆ ಕ್ರೀಡಾಭಿಮಾನಿಗಳೆ ಬರುತ್ತಿಲ್ಲ. ಕ್ರೀಡಾಂಗಣಗಳು ಭಣಗುಡುತ್ತಿವೆ. ಒಲಿಂಪಿಕ್ಸ್‌ನಲ್ಲಿ ಕ್ರಿಕೆಟನ್ನು ಸೇರ್ಪಡೆಗೊಳಿಸಲು ಶತ ಪ್ರಯತ್ನ ಮಾಡುತ್ತಿರುವ ಬಿಸಿಸಿಐ ಕ್ರಿಕೆಟನ್ನು ಕೋಮು ಭಾವನೆಯನ್ನು ಕೆರಳಿಸುವ ಜಾಹೀರಾತಿಗೆ ಹಾಗೂ ದೇಶದೇಶಗಳ ಮಧ್ಯೆ ಬಾಂಧವ್ಯ ಹದೆಗಡೆಸುವುದಕ್ಕೆ ಪ್ರೋತ್ಸಾಹ ನೀಡುವುದನ್ನು ಬಿಟ್ಟು ಕ್ರೀಡಾಸ್ಫೂರ್ತಿಯನ್ನು ಮೆರೆಸುವುದಕ್ಕೆ ಬಳಸಬೇಕಿದೆ.