ಬೀದರ್ ಜಿಲ್ಲೆಯ ರೈತರ ಜೀವನಾಡಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ಎಸ್‌ಕೆ) ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯನ್ನು ರಾಜಿನಾಮೆ ಕೊಡಿಸಿ ಸರ್ಕಾರದ ಅಧೀನದಲ್ಲಿ ಕಾರ್ಖಾನೆ ಮುನ್ನಡೆಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಕರ್ತರು ಆಗ್ರಹಿಸಿದರು.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರಿಗೆ ಸಲ್ಲಿಸಿದರು.
“ಬೀದರ ಜಿಲ್ಲೆಯ ರೈತರು ಮಳೆಯಿಲ್ಲದೆ ಕಂಗಾಲಾಗಿದ್ದು, ಸರ್ಕಾರ ಶೀಘ್ರದಲ್ಲಿ ರೈತರ ನೆರವಿಗೆ ಧಾವಿಸಿ ಸಮಸ್ಯೆಗಳು ಬಗೆಹರಿಸಬೇಕು. ಕೃಷಿ ಪಂಪಸೆಟ್‌ಗಳಿಗೆ ವಿದ್ಯುತ್ ಸಮಯ ಮತ್ತು ಗಂಟೆಗಳು ಬದಲಾವಣೆ ಮಾಡಲಾಗಿದ್ದು. ಅದನ್ನು ಶೀಘ್ರದಲ್ಲಿ ರದ್ದುಪಡಿಸಿ, ಮೊದಲಿನಂತೆ ಹಗಲಿನಲ್ಲಿ ಏಳು ಗಂಟೆ ವಿದ್ಯುತ್ ಪೂರೈಸಬೇಕು” ಎಂದು ಒತ್ತಾಯಿಸಿದರು.
ಮುಂದಿನ ತಿಂಗಳಲ್ಲಿ ಸಕ್ಕರೆ ಕಾರ್ಖಾನೆಗಳು ಪುನಾರಂಭವಾಗಲಿದ್ದು, ಇಲ್ಲಿಯವರೆಗೆ ದರ ನಿಗದಿಪಡಿಸಿಲ್ಲ, ಕೂಡಲೇ ದರ ನಿಗದಿ ಮಾಡುವ ವ್ಯವಸ್ಥೆ ಮಾಡಬೇಕು. ಶೂನ್ಯ ಬಡ್ಡಿಯಲ್ಲಿ ಎಲ್ಲಾ ರೈತರಿಗೆ ಸಹಕಾರ ಬ್ಯಾಂಕಿನಿಂದ ಐದು ಲಕ್ಷದವರೆಗೆ ಸಾಲ ಒದಗಿಸುವ ವ್ಯವಸ್ಥೆ ಮಾಡಿಸಬೇಕೆಂದರು.
“ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಎಲ್ಲಾ ರೈತರಿಗೆ ಪರಿಹಾರ ಒದಗಿಸಬೇಕು. ಕೃಷಿ ಮಾರುಕಟ್ಟೆಯಲ್ಲಿ ರೈತರ ದವಸ, ಧಾನ್ಯಗಳ ಪ್ರತಿ ಕ್ವಿಂಟಲ್‌ಗೆ ಒಂದುವರೆ ಕೆ.ಜಿ. ಕಡತ ಹಾಗೂ 2% ಕಮಿಷನ್ ಪಡೆಯುವುದಕ್ಕೆ ಕಡಿವಾಣ ಹಾಕಬೇಕು. ನೆಟೆ ರೋಗದಿಂದ ಹಾನಿಯಾದ ತೊಗರಿ ಬೆಳೆಯ ಪರಿಹಾರ ಹಣ ಕೂಡಲೇ ಬಿಡುಗಡೆ ಮಾಡಬೇಕೆಂದು” ಆಗ್ರಹಿಸಿದರು.
ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಅತೀ ಶೀಘ್ರದಲ್ಲಿ ಬಗೆಹರಿಸಿ, ರೈತರ ಹಿತ ಕಾಪಾಡಬೇಕು. ಇಲ್ಲದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಯಾವುದೇ ಅಹಿತಕರ ಘಟನೆಗೆ ಸರಕಾರವೇ ಜವಾಬ್ದಾರಿ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | 82ರ ಇಳಿ ವಯಸ್ಸಿನಲ್ಲೂ ಆರದ ಉತ್ಸಾಹ; ಸ್ವತಃ ಖರ್ಚಿನಲ್ಲೇ ಊರಿನ ರಸ್ತೆ ದುರಸ್ತಿ
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರ. ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ ಹಾಗೂ ರೈತ ಸಂಘದ ಪ್ರಮುಖರಾದ ಸುಭಾಷ ರಗಟೆ, ಬಾಬುರಾವ ಜೋಳದಾಬಕಾ, ಪ್ರವೀಣ ಕುಲಕರ್ಣಿ, ಬಸಪ್ಪಾ ಆಲೂರೆ, ರಿಯಾಜ ಪಟೇಲ್, ಪ್ರಕಾಶ ಬಾವಗೆ, ಶಿವಾನಂದ ಹುಡಗೆ, ಧೂಳಪ್ಪಾ ಆಣದೂರ, ಮನೋಹರ ಬಿರಾದಾರ, ಶ್ರೀನಿವಾಸ ರೆಡ್ಡಿ, ರಾಜಕುಮಾರ ಪಾಟೀಲ, ಮಲ್ಲಿಕಾರ್ಜುನ ಚಕ್ಕಿ, ವಿಠಲರಾವ ಪಾಟೀಲ,ಪ್ರಭುದಾಸ ಸಂತಪೂರ, ವಿಶ್ವನಾಥ ಧರಣಿ, ಬಾಬುರಾವ ಕೃಷ್ಣಾಜಿ ಇದ್ದರು.