ಬೇಕಾದರೆ ಕೇಳಿ ನೋಡಿ… ದೈಹಿಕ ಬಿಗುಮಾನ ಕಳಚಿಕೊಳ್ಳುತ್ತ ಬಿಡುಗಡೆ ಪಡೆವ ದಾರಿಯಲ್ಲಿ ರಂಗಭೂಮಿ, ಕ್ರೀಡೆ, ನೃತ್ಯ, ಯಕ್ಷಗಾನ ಇತ್ಯಾದಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅನೇಕ ಮಹಿಳೆಯರು ಹೇಳಿಕೊಳ್ಳುತ್ತಾರೆ. ಹ್ಞಾಂ, ಈಗ ಹೇಳಿ… ನಿಮ್ಮ ಮನೆಯ ಹೆಣ್ಣುಮಕ್ಕಳು ಏನಂತಾರೆ?
(ಆಡಿಯೊ ಪೂರ್ಣಪ್ರಮಾಣದಲ್ಲಿ ಸಿಗದಿದ್ದಲ್ಲಿ, ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ, ‘ಸ್ಪಾಟಿಫೈ’ನಲ್ಲಿ ಕೇಳಿ…)
ಮಹಿಳೆಯರನ್ನು ‘ಹಾಳು ಹರಟೆ ಹೊಡೆಯುವವರು’ ಅಂತ ಹೇಳುತ್ತಾರೆ. ನಿಜ ಹೇಳಬೇಕೆಂದರೆ, ಈ ಹರಟೆಗಳಿಂದಲೇ ಮಹಿಳೆಯರು ತಮ್ಮನ್ನು ತಾವು ಕಂಡುಕೊಳ್ಳಲು ಶುರುಮಾಡಿದ್ದು, ತಮ್ಮ ಅಂತರಾಳವನ್ನು ಬಿಚ್ಚಿಕೊಳ್ಳಲು ಶುರುಮಾಡಿದ್ದು. ಪಿಸುಪಿಸು ಮಾತುಗಳಾಡುತ್ತ, ನೋವು-ಅವಮಾನಗಳ ನೆನಪಿಸಿಕೊಳ್ಳುತ್ತ, ಕಾಡುವ ಭಾವನೆಗಳನ್ನು ಹಂಚಿಕೊಳ್ಳುತ್ತ, ಪಟಪಟ ಕಣ್ಣೀರ ಮಳೆ ಹರಿಸುತ್ತ, ಚಿಕ್ಕ-ಪುಟ್ಟ ಆನಂದಗಳನ್ನು ಹೇಳಿಕೊಳ್ಳುತ್ತ, ಕುಸುಕುಸು ನಗೆಯಾಡುತ್ತ, ಮಿಸುಕಾಡುತ್ತ, ಅನುಮಾನಿಸುತ್ತ, ಸಿಟ್ಟು ಸೆಡವುಗಳನ್ನು ಹೊರಹಾಕುತ್ತ, ಒಂದಿಷ್ಟು ಕೀಟಲೆ ಮಾಡುತ್ತ, ಆಗಾಗ ತೋಚಿದ ಪ್ರಶ್ನೆಗಳನ್ನು ಹೊರಗಿಡುತ್ತ, ಆಗೊಮ್ಮೆ ಈಗೊಮ್ಮೆ ಚೌಕಟ್ಟು ಮೀರಲು ಹವಣಿಸಿದ ಸಾಹಸಗಳನ್ನು ಹೆಮ್ಮೆಯಿಂದ ಅಭಿವ್ಯಕ್ತಿಸುತ್ತ, ಪರಸ್ಪರ ಅನುಭವಗಳಿಗೆ ಕಿವಿಯಾಗುತ್ತ, ತಮ್ಮದೇ ಕತೆಗಳು ಪ್ರತಿಧ್ವನಿಸಿದಾಗ, “ಓಹ್… ನಾವು ಮಾತ್ರವಲ್ಲ,” ಅಂತ ಅಂದುಕೊಳ್ಳುತ್ತ, ಅಚ್ಚರಿಪಡುತ್ತ – ಸಂಕಲೆಗಳನ್ನು ಕಳಚಿಕೊಳ್ಳುವ ಪರಿ ಅದ್ಭುತವಾದದ್ದು. ಮಹಿಳೆಯರು ತಮ್ಮ ಪಾಡಿಗೇ ತಾವೇ ಹರಟೆ ಹೊಡೆಯುತ್ತ, ಪಡೆವ-ಪಡೆದ ಅರಿವು ಅಗಾಧವಾದದ್ದು.
ಮಹಿಳೆಯರಿಗೆ ತಮ್ಮದೇ ಚಿಂತನೆಯನ್ನು ಹೊರಹಾಕಲು ‘ಸಮಯ ಮತ್ತು ಅವಕಾಶ’ ಒದಗಿಸುವ ಪರಿಕಲ್ಪನೆಯು ಬಹಳ ಗಂಭೀರ ಸಿದ್ಧಾಂತವಾಗಿ, ಪ್ರಜ್ಞಾಪೂರ್ವಕವಾಗಿ ನಡೆಸುವ ಕಾರ್ಯತಂತ್ರವಾಗಿ ಕಾಣುತ್ತದೆ. ಒಂದು ರೀತಿಯಲ್ಲಿ ಅದು ನಿಜ ಕೂಡ. ಆದರೆ, ತಮಗಾಗಿ ತಮ್ಮದೇ ಸಮಯವನ್ನು ಹಿಡಿದಿಟ್ಟು ಹೊಸ ಅವಕಾಶಗಳನ್ನು ತಾವೇ ಹುಡುಕಿಕೊಳ್ಳುವ, ರೂಪಿಸಿಕೊಳ್ಳುವ ರೀತಿ-ನೀತಿಗಳು ಅತ್ಯಂತ ಸರಳವಾಗಿ ಇರುತ್ತವೆ; ಪುಟ್ಟ-ಪುಟ್ಟದಾಗಿ ಇರುತ್ತವೆ. ಯಾವುದೇ ಮಹಿಳಾ ಚಳವಳಿಗಳನ್ನು, ಒಡನಾಟಗಳನ್ನು, ಪ್ರಕ್ರಿಯೆಗಳನ್ನು ತೆಗೆದುಕೊಂಡರೂ, ಎಲ್ಲರ ನೆನಪಿನಲ್ಲಿ ಹಚ್ಚಹಸಿರಾಗಿ ಉಳಿದಿರುವುದು ಮೊದಮೊದಲ ಆ ದಿನಗಳಲ್ಲಿ ತಮ್ಮ ಬದುಕಿನ ಕಥನಗಳನ್ನು ಹಂಚಿಕೊಂಡ ಅನುಭವ ಮತ್ತು ಆಗ ಅನುಭವಿಸಿದ ಒಂದು ನಮೂನೆಯ ನಿರಾಳತೆ. ಮಹಿಳಾ ಸಂಘಟನೆಗಳಲ್ಲಿ, ಬರಹಗಾರ್ತಿಯರ ವೇದಿಕೆಗಳಲ್ಲಿ, ಮಹಿಳೆಯರ ತರಬೇತಿಗಳಲ್ಲಿ, ಪ್ರಜ್ಞಾ ಜಾಗೃತಿ ಶಿಬಿರಗಳಲ್ಲಿ, ರಂಗ ತರಬೇತಿಗಳಲ್ಲಿ… ತಮ್ಮ ಸ್ವಂತ ಬದುಕನ್ನು ತೆರೆದಿಡುವ ಒಂದು ಅವಕಾಶ ಹೆಚ್ಚಾಗಿಯೂ ಇರುತ್ತದೆ. ಎಲ್ಲೂ ಹೇಳಿಕೊಂಡಿರದ ಜೀವನ ನದಿಯ ಕಥನಗಳನ್ನು ಸಹಚರಿಗಳ ಎದುರು ಹೊರಸುರುವಿದಾಗ ಆಗುವ ಆನಂದ ಇದೆಯಲ್ಲ, ಅದೊಂದು ಅದ್ಭುತ ಅನುಭವ. ಅದುವೇ ಸಹೋದರಿತ್ವವನ್ನು ಕಟ್ಟಿರುವಂತಹುದು. ಈ ಆನಂದವನ್ನು ಕಂಡಿರುವವರು ‘ಹೆಣ್ಣೇ ಹೆಣ್ಣಿಗೆ ಶತ್ರು’ ಅಂತ ಹೇಳುವುದು ಸಾಧ್ಯವೇ ಇಲ್ಲ. ಹೀಗೆ ಒಡನಾಡುತ್ತ, ತಮ್ಮೊಳಗಿನ ದನಿಗಳನ್ನು ಒಂದಾಗಿಸಿ, ಸಮಾಜಮುಖಿಯಾಗಿ ದನಿ ಎತ್ತುವ ಶಕ್ತಿ ಪಡೆದುಕೊಳ್ಳುವುದೂ ಸಾಧ್ಯವಾಗುತ್ತದೆ.
ಈ ಕಾರಣಕ್ಕಾಗಿಯೇ ಮಹಿಳೆಯರು ಸೇರುತ್ತಾರೆ. ಅಲ್ಲಿ ಇಲ್ಲಿ, ಚಿಕ್ಕ-ಚಿಕ್ಕ ಗುಂಪುಗಳಲ್ಲಿ, ನೂರಾರು ಮಂದಿಯ ಸಮೂಹವಾಗಿ, ಸಾವಿರ ಸಾವಿರವಾಗಿ, ಜಾಗತಿಕವಾಗಿ ಸೇರಿಕೊಳ್ಳುತ್ತಾರೆ. ಸೇರಿಕೊಳ್ಳುವ ಈ ಹೊತ್ತಿನಲ್ಲಿ ತಮ್ಮನ್ನು ತಾವು ಕಂಡುಕೊಳ್ಳುವುದು ಸಹಜವಾಗಿ ನಡೆಯತೊಡಗುತ್ತದೆ. ಹರಟೆ ಹೊಡೆಯುತ್ತಲೇ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ. ಇದು ನಿಜವಾದರೂ, ಇಂತಹ ಸೇರುವಿಕೆಯನ್ನು ಬರೀ ವೈಭವೀಕರಿಸುವುದು ಇಲ್ಲಿಯ ಉದ್ದೇಶವಲ್ಲ. ಹರಟೆ ವೇಳೆ ಒಟ್ಟಾದವರ ನಡುವೆ ಭಿನ್ನಾಭಿಪ್ರಾಯಗಳು ಬರುವುದೂ ಇದೆ, ಬೇರೆ ಬೇರೆಯಾಗುವ ಸಂದರ್ಭಗಳೂ ಇವೆ. ಎಲ್ಲವೂ ಸಹಜ ಎಂಬುದನ್ನು ಮರೆಯಬಾರದು. ಏನೇ ಇರಲಿ, ಮಹಿಳೆಯರು ಹಾಳು ಹರಟೆಗೆ ಸೀಮಿತರಾಗಿಲ್ಲ. ಅದೆಷ್ಟೋ ಬದಲಾವಣೆಗಳ ಹರಿಕಾರರಾಗಿದ್ದಾರೆ ಎಂಬುದು ಕೂಡ ಸತ್ಯ. ಬದಲಾವಣೆಗಳು ಕೆಲವೊಮ್ಮೆ ಗಂಭೀರ ಚಿಂತನೆಗಳ ಜೊತೆಗೆ ಬಂದರೆ, ಕೆಲವೊಮ್ಮೆ ತಿಳಿಯಾದ-ತೆಳುವಾದ ಮಾತುಕತೆಗಳ, ಅನುಭವಗಳ ಜೊತೆಗೆ ಅರಳಿಕೊಳ್ಳುತ್ತವೆ. ಪುಟ್ಟ ಹುಡುಗಿಯೊಬ್ಬಳು ಕೇಳುತ್ತಾಳೆ, “ನನ್ನ ಅಂಗಿಗೇಕೆ ಜೇಬಿಲ್ಲ?” ಅದು ಹೇಗೋ ಹಠ ಹಿಡಿದು ಪಡೆದುಕೊಳ್ಳುತ್ತಾಳೆ. ಅದೇ ಪ್ರಶ್ನಿಸುವ, ಪಡೆಯುವ ಛಲ ಬೆಳೆಸುತ್ತದೆ. “ಅಬ್ಬಾ… ಈ ದುಪಟ್ಟಾ ಇಲ್ಲದೆ ಒಂದು ದಿನವೂ ಹೊರಗೆ ನಡೆದಿಲ್ಲ, ಇವತ್ತು ದುಪಟ್ಟಾ ಬೇಡ,” ಅಂತ ಹೊರನಡೆಯುವುದು ಬಿಡುಗಡೆಯ ಭಾವ ಕೊಡುತ್ತದೆ. ಸೈಕಲ್ ಓಡಿಸುವ ಅವಕಾಶವೇ ಸಿಗದಿದ್ದು ಕಲಿತಾಗ, ಕಾರಿನ ಸ್ಟಿಯರಿಂಗ್ ಹಿಡಿದು ತಾನೂ ಓಡಿಸಬಲ್ಲೆ ಅಂತ ಆತ್ಮವಿಶ್ವಾಸ ಅನುಭವಿಸಿದಾಗ, ಬದುಕಿನ ಹೊಸ ಆಯಾಮ ತೆರೆದುಕೊಳ್ಳುವುದೂ ಇದೆ. ಒಂದು ನೆನಪಿರಬೇಕು… ಇವೆಲ್ಲ ಎಲ್ಲರಿಗೂ ಒಂದೇ ರೀತಿ ಇರಬೇಕಾಗಿಲ್ಲ. ಕಾರು ಓಡಿಸುವ ಹೆಣ್ಣುಮಕ್ಕಳೆಲ್ಲ ಸ್ವತಂತ್ರರು ಅಂತ ಇದರ ಅರ್ಥ ಅಲ್ಲ. ಯಾರ್ಯಾರಿಗೋ ಯಾವ್ಯಾವುದೋ ಅನುಭವಗಳು ಹೊಸತನದ ದಾರಿ ತೆರೆಯುತ್ತವೆ.
ಮಹಿಳಾ ಚಳವಳಿಗಳ ಮೊದಮೊದಲ ಹರಟೆಯಲ್ಲಿ ವ್ಯಾಪಕವಾಗಿ ಹೊರಹೊಮ್ಮಿದ್ದು ದೇಹದ ಬಗೆಗಿನ ಅನಿಸಿಕೆಗಳು. ‘ದೇಹ’ದ ಬಗ್ಗೆ ಅರಿವಿಲ್ಲದೆ ಬೆಳೆದ ನಿರಾಕರಣೆಯನ್ನು ಆಚೆ ಹಾಕುವ ಮಾತುಕತೆಗಳು. ‘ಮುಟ್ಟು’ ಕುರಿತು ಮುಕ್ತವಾಗಿ ಮಾತಾಡುವುದೇ ದೊಡ್ಡ ವಿಷಯವಾಗಿತ್ತು. ಮೊದಲ ಬಾರಿ ಆದಾಗಿನ ಅನುಭವ ಹೇಗಿತ್ತು, ಆಗುವ ಮೊದಲೇ ಗೊತ್ತಿತ್ತಾ? – ಇತ್ಯಾದಿ ವಿಷಯಗಳನ್ನು ಸಂಕೋಚಪಡುತ್ತ ಹೇಳಿಕೊಳ್ಳುವುದು; ಮುಟ್ಟಿನ ಅಸ್ಪೃಶ್ಯತೆಯ ಕಿರಿಕಿರಿಯನ್ನು ಹೇಳಿಕೊಳ್ಳುತ್ತ ಅದರ ಹಿಂದಿನ ರಾಜಕೀಯವನ್ನು ಗುರುತಿಸಿಕೊಳ್ಳುವುದು, ಎದೆಯೊಳಗೆ ಹೆಪ್ಪುಗಟ್ಟಿ ಕುಳಿತ ಲೈಂಗಿಕ ಕಿರುಕುಳಗಳ ಬಗ್ಗೆ-ಲೈಂಗಿಕತೆ ಬಗ್ಗೆ ಇರುವ ಭಯ, ಆತಂಕಗಳ ಬಗ್ಗೆ ಬಾಯಿಬಿಡುವುದು ನಿಜಕ್ಕೂ ದೇಹ-ಮನಸ್ಸು ಹಗುರವಾಗುವಂತೆ ಮಾಡುತ್ತಿತ್ತು. ಇವೆಲ್ಲವೂ ತಮ್ಮ ದೇಹವನ್ನು ಅರ್ಥ ಮಾಡಿಕೊಳ್ಳಲು, ತಮ್ಮ ದೇಹವನ್ನು ಗೌರವಿಸಲು ಕಲಿಸಿತ್ತು. ದೇಹದ, ದೈಹಿಕ ಆಗುಹೋಗುಗಳ ಬಗ್ಗೆ ತಾನೂ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಮಹಾ ಅರಿವೇ ಮಹಿಳೆಯರ ಪಾಲಿಗೆ ಹೊಸ ಜಗತ್ತು ತೆರೆದಿತ್ತು. ‘ನನ್ನ ದೇಹ ನನ್ನ ಹಕ್ಕು’ ಎಂಬ ಅರಿವು ಸಿಕ್ಕಿರುವುದು/ಸಿಗುವುದು ಇಂತಹ ಮುಕ್ತ ಮಾತುಕತೆಗಳಿಂದ. ಈ ವಿಚಾರ ಇಂದಿಗೂ ಸತ್ಯವೇ. ಇಂದಿಗೂ ಮಹಿಳೆಯರ ಜೊತೆ ಕೆಲಸ ಮಾಡುವಾಗ ಈ ರೀತಿಯ ಆಪ್ತ ಮಾತುಕತೆಗಳು ಹೊಸ ಹುಮ್ಮಸ್ಸು ನೀಡುತ್ತವೆ.
ಅನೇಕರಿಗೆ ದೇಹದ ನಿರಾಳತೆಯನ್ನು ಪಡೆಯುವಲ್ಲಿ ಸಹಕರಿಸಿದ್ದು ರಂಗಭೂಮಿಯ ಒಡನಾಟ. ರಂಗಭೂಮಿಯು ದೇಹ-ಮನಸ್ಸು ಎರಡಕ್ಕೂ ವಿಶೇಷವಾದ ತಾಲೀಮು ಕೊಡುತ್ತದೆ. ದೈಹಿಕ ಚಲನವಲನಗಳು ನಿರಾಳವಾಗುತ್ತವೆ. ರಂಗಭೂಮಿಯಲ್ಲಿ ತೊಡಗಿಸಿಕೊಂಡ ಹೆಣ್ಣುಮಕ್ಕಳ ನಡೆಗಳಲ್ಲಿ ಒಂದು ರೀತಿಯ ದೃಢತೆಯನ್ನು, ದಿಟ್ಟತನವನ್ನು ಕಾಣಬಹುದು. ಕ್ರೀಡೆಗಳಲ್ಲಿ ಮುಕ್ತವಾಗಿ ತೊಡಗಿಸಿಕೊಂಡಿರುವ ಹೆಣ್ಣುಮಕ್ಕಳೂ ಇಂತಹ ದೈಹಿಕ ಮುಜುಗರದಿಂದ ಹೊರಬಂದಿರುವುದು ಕಾಣುತ್ತದೆ. ಇಲ್ಲೂ ಅಷ್ಟೇ, ಹೀಗೆ ದೈಹಿಕವಾಗಿ ನಿರಾಳವಾಗಿರುವ ಹೆಣ್ಣುಮಕ್ಕಳು ಶೋಷಣೆಗೆ ಒಳಗಾಗಿ ಮುದುಡುವ ಸಾಧ್ಯತೆಯೂ ಇದೆ ಎಂಬುದನ್ನು ಮರೆಯಬಾರದು. ದೈಹಿಕ ಬಿಗುಮಾನ ಕಳಚಿಕೊಳ್ಳುತ್ತ ಬಿಡುಗಡೆ ಪಡೆವ ದಾರಿಯಲ್ಲಿ ರಂಗಭೂಮಿ, ಕ್ರೀಡೆ, ನೃತ್ಯ, ಯಕ್ಷಗಾನ ಇತ್ಯಾದಿಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅನೇಕ ಮಹಿಳೆಯರು ಹೇಳಿಕೊಳ್ಳುತ್ತಾರೆ.
ಒಂಟಿ-ಒಂಟಿಯಾಗಿ ಆರಾಮವಾಗಿ ಅಡ್ಡಾಡುವ, ಪಯಣಿಸುವ ಅವಕಾಶ ಮಹಿಳೆಯರಿಗೆ ಸಿಗುವುದು ಬಹಳ ಕಡಿಮೆ. ಸದಾ ಯಾರಿಗೋ ಅವಲಂಬಿತರಾಗಿ ಓಡಾಡುವುದು ರೂಢಿಯಾಗಿರುತ್ತದೆ. ಅದಕ್ಕಾಗಿ ಒಂಟಿಯಾಗಿ ಅಥವಾ ಗೆಳತಿಯರ ಬಳಗ ಕಟ್ಟಿಕೊಂಡು ಓಡಾಡುವುದು, ಪ್ರವಾಸ ಹೋಗುವುದು, ತಮಗಿಷ್ಟವಾದ ಉಡುಪು ಧರಿಸುವುದು, ತಮಗಿಷ್ಟವಾದ ಜಾಗಗಳಲ್ಲಿ ಸಮಯ ಕಳೆಯುವುದು ಎಲ್ಲವೂ ವಿಶೇಷ ಅನುಭವಗಳಾಗಿಬಿಡುತ್ತವೆ. ಒಬ್ಬರೇ ಹೋಟೇಲಿಗೆ ಹೋಗಿ ಉಂಡು ತಿಂದು ಮಾಡುವುದು, ಸಿನಿಮಾ ನೋಡಲು ಹೋಗುವುದು ವಿಶೇಷ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ. ಬದುಕಿನ ಗೋಡೆಗಳಿಗೆ ಚಿಕ್ಕ-ಚಿಕ್ಕ ಕಿಟಿಕಿಗಳನ್ನು ತೆರೆದು, ಹೊಸ ಗಾಳಿ ಅಡ್ಡಾಡುವಂತೆ ಮಾಡುತ್ತದೆ. ಇಲ್ಲಿಂದ ಮುಂದಿನ ಜಿಗಿತ ಹೆಚ್ಚು ಸುಲಭವಾಗುತ್ತದೆ.
ಬಿಡುಗಡೆಯ ದಾರಿಯಲ್ಲಿ ಒಂಟಿ ಪಯಣಗಳಿರಬಹುದು, ಸಾಮೂಹಿಕ ಪಯಣಗಳಿರಬಹುದು – ಹರಿತವಾದ ಚಿಂತನೆಯೊಂದಿಗೆ ಹೊಸ ದಾರಿಯಲ್ಲಿ ಸಾಗುತ್ತ, ಪುರುಷಪ್ರಧಾನ ವ್ಯವಸ್ಥೆಯ ಬೇರುಗಳನ್ನು ಅಲ್ಲಾಡಿಸುವುದು ಸಾಧ್ಯ. ಒಂಟಿ-ಒಂಟಿ ಪಯಣಗಳು ಒಂದಷ್ಟು ಬದಲಾವಣೆಗಳನ್ನು ತರುತ್ತವೆ. ಆದರೆ, ಸಮೂಹವಾಗಿ ಆಗುವ ಬದಲಾವಣೆ ಹೆಚ್ಚು ಪರಿಣಾಮಕಾರಿಯಾಗಿ ಇರುತ್ತದೆ; ಅವು ಸಾಮಾಜಿಕವಾಗಿ ಹೊಸ ವ್ಯವಸ್ಥೆಗಳನ್ನೂ ಸಂಸ್ಕೃತಿಯನ್ನೂ ಹುಟ್ಟುಹಾಕುತ್ತವೆ. ದೂರ ನಡಿಗೆ ಸಾಗಬೇಕಾದರೆ ಹೆಚ್ಚೆಚ್ಚು ಮಂದಿ ಜೊತೆಜೊತೆಗೆ ಹೆಜ್ಜೆ ಹಾಕಬೇಕು.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ