ರಾಜ್ಯ ರಾಜಧಾನಿ ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿರುವ ಕಂಠೀರವ ಸ್ಟುಡಿಯೋ ವೃತ್ತದಲ್ಲಿ ಕೊನೆಗೂ ಅಂಡರ್‌ಪಾಸ್ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದೆ. ಎಂಟು ವರ್ಷಗಳ ಹಿಂದೆ ನಿರ್ಮಾಣ ಕಾಮಗಾರಿ ಆರಂಭವಾಬೇಕಿತ್ತು. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಅಂತಿಮವಾಗಿ ಇದೀಗ ಬಿಡಿಎ ಕಾಮಗಾರಿ ಪ್ರಾರಂಭಿಸಿದೆ.
ಪೀಣ್ಯ ಕಡೆಗೆ ಹೋಗುವ ಅಂಡರ್‌ಪಾಸ್‌ನ ಒಂದು ಭಾಗದಲ್ಲಿ ಅರ್ಧದಷ್ಟು ಕಾಮಗಾರಿ ಹಲವು ವರ್ಷಗಳ ಹಿಂದೆಯೇ ನಡೆದಿತ್ತು. ಭೂಸ್ವಾಧೀನ ಪ್ರಕ್ರಿಯೆಯ ಸಮಸ್ಯೆಯಿಂದಾಗಿ ಇನ್ನರ್ಧ ಭಾಗದ ಕಾಮಗಾರಿ ವಿಂಳಬವಾಗಿ ಸ್ಥಗಿತಗೊಂಡಿತತು. ಹೀಗಾಗಿ, ಅಂಡರ್‌ಪಾಸ್ ಪೂರ್ಣಗೊಳ್ಳದೆ, ಸಾರ್ವಜನಿಕ ಬಳಕೆಗೂ ಸಿಗದೆ ಉಳಿದಿತ್ತು.
ಇದೀಗ, ಕಾಮಗಾರಿ ಆರಂಭವಾಗಿವೆ. ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಳ್ಳುವುದರಿಂದ ರಾಜಾಜಿನಗರ, ನಂದಿನಿ ಲೇಔಟ್, ಮಹಾಲಕ್ಷ್ಮಿ ಲೇಔಟ್ ಮತ್ತು ಕುರುಬರಹಳ್ಳಿಯ ನಿವಾಸಿಗಳಿಗೆ ಸಂಚಾರ ದಟ್ಟಣೆ ಅಥವಾ ಸಂಚಾರದ ಸಮಸ್ಯೆಯಿಂದ ಕೊಂಚವಾದರೂ ಮುಕ್ತಿ ಸಿಗಲಿದೆ. ತುಮಕೂರಿನತ್ತ ಸಾಗುವ ಈ ರಸ್ತೆಯು ಹೆಚ್ಚು ವಾಹನ ಸಂಚಾರದ ರಸ್ತೆಗಳಲ್ಲಿ ಒಂದಾಗಿದೆ.
“ಭೂಸ್ವಾಧೀನ ಸಮಸ್ಯೆಯಿಂದಾಗಿ ಯೋಜನೆ ಸ್ಥಗಿತಗೊಂಡಿತ್ತು. ಸಮಸ್ಯೆಗಳನ್ನು ಪರಿಹರಿಸಿ, ಅಂತಿಮವಾಗಿ ಕಾಮಗಾರಿ ಆರಂಭಿಸಿದ್ದೇವೆ. ಕಳೆದ ಒಂದು ಎರಡು ದಿನಗಳಿಂದ ಅಂಡರ್‌ಪಾಸ್ ನಿರ್ಮಾಣವಾಗುವ ಸ್ಥಳಗಳಲ್ಲಿರುವ ಕಟ್ಟಡಗಳನ್ನು ಕೆಡವಲು ಪ್ರಾರಂಭಿಸಿದ್ದೇವೆ. ಅಂಡರ್‌ಪಾಸ್ ಮತ್ತು ಸರ್ವಿಸ್ ರಸ್ತೆಗಳನ್ನು ನಿರ್ಮಿಸಲು ಇಲ್ಲಿನ 31 ಕಟ್ಟಡಗಳನ್ನು ಕೆಡವುತ್ತಿದ್ದೇವೆ. ಸಹಜವಾಗಿಯೇ ಸಂಚಾರ ವ್ಯತ್ಯಯವನ್ನು ಹಂತಹಂತವಾಗಿ ಪರಿಹರಿಸಬೇಕಾಗುತ್ತದೆ. ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ” ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.
“ಭೂಸ್ವಾಧೀನದ ಒಟ್ಟಾರೆ ವೆಚ್ಚ ಮತ್ತು ಈಗಾಗಲೇ ನಿರ್ಮಾಣ ಹಂತದಲ್ಲಿರುವ ರಸ್ತೆಗಳು ಮತ್ತು ಮೇಲುಸೇತುವೆಗಳು ಒಂದೇ ಯೋಜನೆಯ ಭಾಗವಾಗಿದ್ದು, ಅಂಡರ್‌ಪಾಸ್‌ಗಾಗಿ ಒಟ್ಟಾರೆಯಾಗಿ ₹136 ಕೋಟಿ ವೆಚ್ಚವಾಗಲಿದೆ. ಅಂಡರ್ ಪಾಸ್ ಭೂಸ್ವಾಧೀನಕ್ಕೆ ಸುಮಾರು ₹26 ಕೋಟಿ ಆಗಿದೆ” ಎಂದರು.
ನಗರದಲ್ಲಿ ಪೀಕ್ ಅವರ್‌ಗಳಲ್ಲಿ ಎಲ್ಲ ಕಡೆಯಿಂದ ಬರುವ ವಾಹನಗಳಿಂದ ವೃತ್ತವು ಭಾರೀ ದಟ್ಟಣೆಯನ್ನು ಹೊಂದಿರುತ್ತದೆ. ವಿಶೇಷವಾಗಿ ದೊಡ್ಡ ಟ್ರಕ್‌ಗಳು ಎಲ್ಲೆಡೆಯಿಂದ ಜೋರಾಗಿ ಹಾರ್ನ್ ಮಾಡುವುದರಿಂದ ಕಿರಿಕಿರಿ ಉಂಟಾಗುತ್ತದೆ. ಪಾದಚಾರಿಗಳು ಭಾರೀ ದಟ್ಟಣೆಯಲ್ಲಿ ಅಡ್ಡಾಡುವುದು ಕಷ್ಟಕರವಾಗಿದೆ.
ಈ ಸುದ್ದಿ ಓದಿದ್ದೀರಾ? ಉಚಿತ ಆಟೋ | ಕೆಇಎ ಪರೀಕ್ಷಾರ್ಥಿಗಳಿಗೆ ಎಎಪಿಯಿಂದ ಸೌಲಭ್ಯ
“ಯಾವುದೇ ಮೂಲಸೌಕರ್ಯ ಕಾಮಗಾರಿಗಳನ್ನು ಆರಂಭಿಸುವುದು ಸ್ವಾಗತಾರ್ಹ. ಏಕೆಂದರೆ, ಅದು ನಿಜವಾಗಿಯೂ ಜನರಿಗೆ ಅನುಕೂಲ ಮಾಡಿಕೊಡುತ್ತದೆ. ಆ ಪ್ರದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತದೆ. ಅಂಡರ್‌ಪಾಸ್ ಸಿದ್ಧವಾದಾಗ ಲಗ್ಗೆರೆ ಮತ್ತು ಪೀಣ್ಯ ಕಡೆಗೆ ಪ್ರಯಾಣಿಸುವವರಿಗೂ ಹೆಚ್ಚು ಪ್ರಯೋಜನವಾಗಲಿದೆ” ಎಂದು ರಿಯಲ್ ಎಸ್ಟೇಟ್ ಉದ್ಯಮಿ, ನಂದಿನಿ ಲೇಔಟ್ ನಿವಾಸಿ ಎನ್ ರಾಘವೇಂದ್ರ ಹೇಳಿದ್ದಾರೆ.
“ತುಮಕೂರು ಕಡೆಗೆ ಕೆಲಸಕ್ಕಾಗಿ ಹೋಗುವ ಎಲ್ಲ ವಾಹನ ಸವಾರರಿಗೆ ಇದು ನಿಜವಾಗಿಯೂ ಸಹಾಯ ಮಾಡುತ್ತದೆ. ಕೆಲಸ ಪೂರ್ಣಗೊಳಿಸಲು ಬಿಡಿಎ ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಮಹಾಲಕ್ಷ್ಮಿ ಲೇಔಟ್ ನಿವಾಸಿ ಮಂಜು ಹೇಳಿದ್ದಾರೆ.