- ಮಂತ್ರಿ ಆಗಬೇಕು ಎಂದು ಎಲ್ಲ ಶಾಸಕರು ಬಯಸುವುದು ಒಳ್ಳೆಯದು
- ಬಿಜೆಪಿಯವರಿಗೆ ನಮ್ಮ ಪಕ್ಷದ ಮೇಲೆ ಹೆಚ್ಚು ಆಸಕ್ತಿ ಇದ್ದಂತೆ ಇದೆ
ಹೈಕಮಾಂಡ್ ಯಾರಿಗೆ ಸಚಿವ ಸ್ಥಾನ ಬಿಟ್ಟುಕೊಡಬೇಕು ಅನ್ನುತ್ತೋ ಅವರಿಗೆ ಬಿಟ್ಟು ಕೊಡುತ್ತೇನೆ. ಒಟ್ಟಿನಲ್ಲಿ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದರು.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಂತ್ರಿಸ್ಥಾನಕ್ಕೆ ಅನೇಕ ಶಾಸಕರು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಪ್ರತಿಕ್ರಿಯಿಸಿದರು.
“ಮಂತ್ರಿ ಆಗಬೇಕು ಎಂದು ಎಲ್ಲ ಶಾಸಕರು ಬಯಸುವುದು ಒಳ್ಳೆಯದೇ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಇಂತವರಿಗೆ ಸಚಿವ ಸ್ಥಾನ ಬಿಟ್ಕೊಡಿ ಎಂದು ಹೈಕಮಾಂಡ್ ಹೇಳಿದರೆ ಬಿಟ್ಟುಕೊಡುವೆ” ಎಂದರು.
“ಬಿಜೆಪಿಯವರಿಗೆ ನಮ್ಮ ಪಕ್ಷದ ಮೇಲೆ ಹೆಚ್ಚು ಆಸಕ್ತಿ ಇದ್ದಂತೆ ಇದೆ. ನಮ್ಮ ಬಗ್ಗೆ ಮಾತ್ರ ಮಾತಾಡುತ್ತಾರೆ. ಅವರ ಪಕ್ಷದ ವಿಚಾರವಾಗಿ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಅವರಿಗೆಲ್ಲ ನಮ್ಮ ಪಕ್ಷಕ್ಕೆ ಬರುವ ವಿಚಾರ ಇರಬೇಕು. ಅದಕ್ಕಾಗಿ ನಮ್ಮ ಪಕ್ಷದ ಬಗ್ಗೆ ಹೆಚ್ಚು ಚರ್ಚೆ ನಡೆಸಿದ್ದಾರೆ” ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲು ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿ, “ಗಲಭೆಯಿಂದ ಗಡಿಯಲ್ಲಿ ಆತಂಕ ವಿಚಾರವಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಭದ್ರತೆ ಹೆಚ್ಚಳ ಮಾಡಲಾಗಿದೆ. ಎಲ್ಲೆಲ್ಲಿ ಸೂಕ್ಷ್ಮ ವಾತಾವರಣ ಇದೆಯೋ ಅಲ್ಲಿ ಕೆಎಸ್ಆರ್ ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ. ಬೆಳಗಾವಿಯಲ್ಲಿ ಎಂಇಎಸ್ ಕೂಡ ಕರಾಳ ದಿನ ಅಂತ ಮಾಡಲು ಮುಂದಾದರೆ ಅದನ್ನು ತಡೆಯುವ ಕೆಲಸ ಮಾಡುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಮತ್ತೆ ತಮಿಳುನಾಡಿಗೆ ನೀರು; ನೀರಿಗಿಳಿದು ರೈತರ ಪ್ರತಿಭಟನೆ
ಕಾಂಗ್ರೆಸ್‍ನಲ್ಲಿ ಇನ್ನೆರಡು ಡಿಸಿಎಂ ಸ್ಥಾನಗಳ ಸೃಷ್ಟಿಗೆ ಆಗ್ರಹ ವಿಚಾರವಾಗಿ ಮಾತನಾಡಿ, “ಮೂರು ಡಿಸಿಎಂ ಚರ್ಚೆ ಹಳೆಯದು. ಯಾರಿಗೆ ಯಾವ ಹುದ್ದೆ ಕೊಡಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಯಾವ ಸಂದರ್ಭದಲ್ಲಿ ಹುದ್ದೆ ಕೊಡಬೇಕು ಎಂಬುದು ಹೈಕಮಾಂಡ್‌ಗೆ ಗೊತ್ತಿದೆ” ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಬಣದ ದುಬೈ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿ, “ಯಾರೆಲ್ಲ ಹೋಗ್ತಿದ್ದಾರೆ, ಯಾಕೆ ಹೋಗ್ತಿದ್ದಾರೆ ಗೊತ್ತಿಲ್ಲ, ಸುತ್ತಾಡೋಕ್ಕೆ ಹೋಗ್ತಿದ್ದಾರೋ ಏನೋ? ಅಲ್ಲಿ ನಮ್ಮ ಕನ್ನಡ ಸಂಘಗಳಿವೆ, ಅವರೇನಾದರೂ ಕರೆದಿದ್ದಾರಾ? ನೋಡಬೇಕು” ಎಂದರು.