ಕರ್ನಾಟಕದ ಪ್ರಮುಖ ಸಾಹಿತಿಗಳು, ಸಾಧಕರು, ಸಮಾಜ ಸೇವಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರತಿ ವರ್ಷ ನೀಡಲಾಗುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿ ಇಸ್ರೋ ಮುಖ್ಯಸ್ಥ ಸೋಮನಾಥ್, ಹಿರಿಯ ಪತ್ರಕರ್ತರಾದ ದಿನೇಶ್ ಅಮೀನ್ ಮಟ್ಟು, ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ಲೇಖಕಿ ಕೆ. ಷರೀಫಾ ಸಹಿತ 68 ಜನರು ಆಯ್ಕೆಯಾಗಿದ್ದಾರೆ.
2023ನೇ ಸಾಲಿನಲ್ಲಿ 68 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿಯ ಆಯ್ಕೆಯಲ್ಲಿ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ. ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
100 ವರ್ಷ ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಒಬ್ಬರು ದಾವಣಗೆರೆ ಹಾಗೂ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರು. 13 ಮಹಿಳೆಯರು ಮತ್ತು 54 ಪುರುಷರು ಹಾಗೂ ಒಬ್ಬರು ಮಂಗಳಮುಖಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಗೆ ಆಯ್ಕೆಯಾದವರಿಗೆ ರೂ. 5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕ ವಿತರಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದರು.
ಪತ್ರಿಕಾ ವಿತರಕರ ಶ್ರಮ ಗುರುತಿಸಿ ಗೌರವಿಸಿದ ರಾಜ್ಯ ಸರ್ಕಾರ ಮತ್ತು ಆಯ್ಕೆ ಸಮಿತಿ
ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತ್ರಿಕಾ ವಿತರಕರನ್ನೂ ರಾಜ್ಯೋತ್ಸವ ಪ್ರಶಸ್ತಿಗಾಗಿ ಪರಿಗಣಿಸಿ ಗೌರವಿಸಲಾಗಿದೆ. ಮಾಧ್ಯಮ ಕ್ಷೇತ್ರದ ಅವಿಭಾಜ್ಯ ಅಂಗವಾಗಿರುವ ಪತ್ರಿಕಾ ವಿತರಕಾ ಸಮುದಾಯದ ಪ್ರತಿನಿಧಿ, ಮೈಸೂರಿನ ಜವರಪ್ಪ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿ, ವಿತರಕ ಸಮುದಾಯವನ್ನು, ಈ ಸಮುದಾಯದ ಕಾರ್ಯಕ್ಷಮತೆ ಮತ್ತು ಶ್ರಮವನ್ನು ರಾಜ್ಯ ಸರ್ಕಾರ ಮತ್ತು ಆಯ್ಕೆ ಸಮಿತಿ ಗುರುತಿಸಿ, ಗೌರವಿಸಿದೆ.
ಜವರಪ್ಪ, ಮೈಸೂರು