ತುಂಗಭದ್ರಾ ಎಡದಂಡೆ ಕಾಲುವೆ 104 ಮೈಲ್ ಕೆಳಭಾಗದ ರೈತರಿಗೆ ನೀರೊದಗಿಸಲು ರಾಯಚೂರು ಆಡಳಿತ ವಿಫಲವಾಗಿರುವುದನ್ನು ಖಂಡಿಸಿ ರೈತರಿಂದ 7 ಮೈಲ್ ಕ್ರಾಸ್ ಬಳಿ ರಸ್ತೆ ತಡೆ ನಡೆಸಿ ಆಡಳಿತ ವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
“ರಾಯಚೂರು ಜಿಲ್ಲಾಡಳಿತ, ಉಸ್ತುವಾರಿ ಸಚಿವರು ನೀಡಿದ್ದ ಭರವಸೆ ಸುಳ್ಳಾಗಿದೆ. ಕಾಲುವೆ ವ್ಯಾಪ್ತಿಯಲ್ಲಿ ನೀರು ನಿರ್ವಹಣಾ ಲೋಪದಿಂದ ಲಕ್ಷಾಂತರ ಬೆಳೆ ಒಣಗಿ ಹೋಗಲು ಕಾರಣವಾಗಿದೆ” ಎಂದು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಆರೋಪಿಸಿದರು.
“ಕಾಲುವೆ ವ್ಯಾಪ್ತಿಗೆ ನೀರು ಬಾರದೇ ಇರುವಾಗ ರಸ್ತೆ ತಡೆ ಮಾಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಯವರ ಪ್ರಯತ್ನದ ಫಲವಾಗಿ ಕಾಲುವೆ ನೀರು ಹರಿದುಬಂದಿತ್ತು. ಮೂರು ದಿನ ಕಳೆಯುತ್ತಲೇ ಗೇಜ್ ನಿರ್ವಹಣೆಯಾಗದೇ ನೀರು ಹರಿವು ಪ್ರಮಾಣ ಕುಸಿದು ಹೋಯಿತು. ಆಡಳಿತದ ಭರವಸೆ ಮೇಲೆ ರೈತರು ಕಾದು ಕುಳಿತಿದ್ದರು. ಆದರೆ ನೀರು ನಿರ್ವಹಣೆಯಾಗದೇ ನೀರು ಬರುತ್ತಿಲ್ಲವಾದರೂ ನೀರಾವರಿ ನಿಗಮದ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ. ಜಿಲ್ಲಾಡಳಿತವೂ ಕ್ರಮಕ್ಕೆ ಮುಂದಾಗುತ್ತಿಲ್ಲ.ಈಗಲಾದರೂ ನೀರು ಹರಿಸದೇ ಹೋದರೆ ಹೋರಾಟವನ್ನು ತೀವ್ರಗೊಳಿಸುತ್ತೇವೆ” ಎಂದು ಎಚ್ಚರಿಸಿದರು.
ಶಾಸಕ ಡಾ ಶಿವರಾಜ ಪಾಟೀಲ್, ಮಾಜಿ ಶಾಸಕ ಎ ಪಾಪಾರೆಡ್ಡಿ, ರೈತ ಸಂಘದ ಚಾಮರಸ ಮಾಲಿ ಪಾಟೀಲ್, ರಾಘವೇಂದ್ರ ಕುಷ್ಟಗಿ, ನಾಗನಗೌಡ ಹರವಿ, ಮಹಾಂತೇಶ ಪಾಟೀಲ್ ಅತ್ತನೂರು, ಶರಣಪ್ಪ ಕಲ್ಮಲಾ, ಬೆಲ್ಲಂ ನರಸರೆಡ್ಡಿ, ಸಿದ್ದನಗೌಡ ನೆಲಹಾಳ, ವಿಶ್ವೇಶ್ವರ ಸೇರಿದಂತೆ ಹತ್ತಾರು ಗ್ರಾಮಗಳ ರೈತರು, ಮುಖಂಡರುಗಳು ಇದ್ದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಮೋಸ ಹೋಗಬೇಡಿ; ತೆಲಂಗಾಣದಲ್ಲಿ ಗಡಿಭಾಗದ ರೈತರ ಹೋರಾಟ
ದಾರಿ: ಮಂಗಳವಾರ ಬೆಳಿಗ್ಗೆಯಿಂದ ಪ್ರತಿಭಟನೆ ಪ್ರಾರಂಭವಾಗಿತ್ತು. ಈ ಮಧ್ಯೆ ಆರೋಗ್ಯ ಚಿಕಿತ್ಸೆಗೆ ತೆರಳುತ್ತಿದ್ದ ದಂಪತಿಗೆ ಅನುವು ಮಾಡಿಕೊಟ್ಟರು. ರೋಗಿಯಿಲ್ಲದೇ ತೆರಳುತ್ತಿದ್ದ ಆಂಬುಲೆನ್ಸ್ ವಾಹನವನ್ನು ತಡೆದರು. ಸಾವಿರಾರು ಜನರು ಪ್ರತಿಭಟನೆ ಬೆಂಬಲಿಸಿದರು. ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಹುಡುಕಿಕೊಂಡು ಹೋದರು.
ವರದಿ : ಹಫೀಜುಲ್ಲ