ಜಮೀನು, ನಿವೇಶನ ಮಾರಾಟ, ಖರೀದಿಗೆ ಸರ್ಕಾರ ವಿಧಿಸಿರುವ ಶುಲ್ಕ ಅವೈಜ್ಞಾನಿಕವಾಗಿದ್ದು, ಕೂಡಲೇ ಹಿಂಪಡೆಯಬೇಕೆಂದು ಎಡೆದೊರೆ ನಾಡಿನ ಕ್ಷೇಮಾಭಿವೃದ್ದಿ ವೇದಿಕೆ ಸಂಚಾಲಕ ವಿಜಯಾನಂದ ಪಾಟೀಲ್ ಒತ್ತಾಯಿಸಿದರು.
ರಾಯಚೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “2018-19ನೇ ಸಾಲಿನಲ್ಲಿದ್ದ ಸ್ಟಾಂಪ್ ಡ್ಯೂಟಿ ಶುಲ್ಕವನ್ನು ಶೇ.800ರಷ್ಟು ಹೆಚ್ಚಳ ಮಾಡಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಸರ್ಕಾರದ ಕ್ರಮದಿಂದಾಗಿ ಬಡವರು, ಮಧ್ಯಮ ವರ್ಗದವರು ಸೇರಿ ಯಾರೂ ಕೂಡ ನಿವೇಶನ, ಭೂಮಿ ಖರೀದಿ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಆರೋಪಿಸಿದರು.
“ಸ್ಥಿರಾಸ್ತಿಗಳ ಪರಿಷ್ಕೃತ ದರ ನಿಗದಿ ಮಾಡುವಾಗ ಕನಿಷ್ಠ ನಿಯಮಗಳನ್ನು ಪಾಲಿಸದೇ ಇರುವುದರಿಂದಾಗಿ ಮನಸೋ ಇಚ್ಛೆ ಶುಲ್ಕ ನಿಗದಿಪಡಿಸಿದಂತಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಭೂಮಿ ಖರೀದಿ ಮಾರಾಟಕ್ಕೆ ಮುಂದಾದರೆ ಜನರು ದುಬಾರಿ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಸರ್ಕಾರ ಹೇಳಿಕೊಂಡಿರುವಂತೆ ಶುಲ್ಕ ಹೆಚ್ಚಳ ಶೇ.40ರ ಬದಲು ₹800 ಹೆಚ್ಚಳವಾಗಿದೆ. ಅಸಂಬದ್ಧವಾಗಿ ನಿಗದಿಪಡಿಸಿರುವ ದರಗಳಿಂದ ಜನರು ತತ್ತರಿಸಿ ಹೋಗುವಂತಾಗಿದೆ” ಎಂದರು.
“ನೋಂದಣಿ ಕಚೇರಿಗಳು ಭ್ರಷ್ಟಾಚಾರದ ಕೇಂದ್ರಗಳಾಗಿರುವಾಗ ಜನರ ಖರೀದಿ ಮತ್ತು ಮಾರಾಟವನ್ನು ಸರ್ಕಾರವೇ ಪರೋಕ್ಷವಾಗಿ ತಡೆಯುತ್ತಿದೆ. ಸರ್ಕಾರಿ ಕಚೇರಿಗಳಿಂದ ಜನರು ಕೆಲಸ ಕಾರ್ಯಗಳನ್ನು ಪಡೆಯಲಾಗುತ್ತಿಲ್ಲ. ನಗರಸಭೆ, ಜಿಲ್ಲಾಧಿಕಾರಿಗಳ ಕಚೇರಿ ಒಳಗೊಂಡಂತೆ ಬಹುತೇಕ ಸರ್ಕಾರಿ ಕಚೇರಿಗಳಿಂದ ಕಾಲಮಿತಿಯಲ್ಲಿ ಕೆಲಸವಾಗುತ್ತಿಲ್ಲ. ಸಂಕೀರ್ಣ ಪರಿಸ್ಥಿತಿಯಲ್ಲಿರುವ ಜನರಿಗೆ ಮಾರಾಟ ಶುಲ್ಕ ಹೆಚ್ಚಳ ಮಾಡಿ ಮತ್ತೊಂದು ಹೊರೆ ಜನರ ಮೇಲೆರಿದಂತಾಗಿದೆ. ಸರ್ಕಾರ ಕೂಡಲೇ ನಿಯಮಬದ್ಧವಾದ ಶುಲ್ಕ ವಿಧಿಸಲು ಮುಂದಾಗಬೇಕು. ಇಲ್ಲದೇ ಹೋದಲ್ಲಿ ನ್ಯಾಯಾಲಯದ ಮೊರೆ ಹೋಗುಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಗ್ರಾಮ ಪಂಚಾಯತಿ ಕರ್ತವ್ಯಕ್ಕೆ ಅಡ್ಡಿ ಆರೋಪ; ಸದಸ್ಯರ ವಿರುದ್ಧ ದೂರು
“ನಗರದ ಸ್ಟೇಷನ್ ರಸ್ತೆಯಲ್ಲಿ ಬೀದಿ ಅಂಗಡಿಗಳನ್ನು ಜಿಲ್ಲಾಧಿಕಾರಿಗಳು ತೆರವುಗೊಳಿಸಿರುವುದು ಸ್ವಾಗತಾರ್ಹ. ಆದರೆ, ಜಿಲ್ಲಾಧಿಕಾರಿಗಳ ನಿವಾಸದಿಂದ ಹಿಡಿದು ನಗರದ ವಿವಿಧಡೆ ಪಾದಾಚಾರಿ ರಸ್ತೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನಿಗದಿತ ಸ್ಥಳ ಗುರುತಿಸಿ ಸಂಚಾರ, ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬೇಕು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಲು ಜಿಲ್ಲಾಡಳಿತ ಮುಂದಾಗಬೇಕು” ಎಂದರು.
ಈ ಸಂದರ್ಭದಲ್ಲಿ ಈರಣ್ಣ ಮುದುಗಲ್, ಲಕ್ಷ್ಮೀಕಾಂತ, ಬೋಳಬಂಡಿ, ರಾಜಶೇಖರ ಸ್ವಾಮಿ ಇದ್ದರು.
ವರದಿ: ಹಫೀಜುಲ್ಲ