ಶಿವಮೊಗ್ಗ ನಗರದ ಬಸ್‌ಸ್ಟಾಂಡ್‌ನಿಂದ 5 ಕಿ ಮೀ ವ್ಯಾಪ್ತಿಯ ಗೋಪಾಲಗೌಡ ಬಡಾವಣೆ ಮತ್ತು ಅನುಪಿನಕಟ್ಟೆಯ ನಂತರ ಇರುವ ಗೋವಿಂದಾಪುರದ ಬಾಬು ಲೇಔಟ್‌ನ ನಿವಾಸಿಗಳು ಮೂಲಸೌಕರ್ಯವಿಲ್ಲದೆ ನರಳುತ್ತಿದ್ದಾರೆ.
ಬಹುತೇಕರು ಬಡವರಿದ್ದು, ಮೂಲಸೌಕರ್ಯಗಳ ಕೊರತೆ ಹಾಗೂ ಸರ್ಕಾರದ ಸೌಲಭ್ಯದಿಂದ ವಂಚಿತರಗಿದ್ದಾರೆ. ಕಾರಣ ಇವರು ಹೊಂದಿರುವ ನಿವೇಶನಗಳು ಕಂದಾಯ ನಿವೇಶನ ಆಗಿರುವುದರಿಂದ ಸರ್ಕಾರದಿಂದ ಯಾವುದೇ ಮೂಲ ಸೌಕರ್ಯಗಳು ದೊರೆಯುತ್ತಿಲ್ಲ.
ಸ್ಥಳೀಯ ನಿವಾಸಿಯೊಬ್ಬರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮಳೆಗಾಲದಲ್ಲಿ ಸುತ್ತಮುತ್ತಲಿನ ಕೆರೆಗಳಿಂದ ರಸ್ತೆಗಳ ಮೇಲೆ ನೀರು ತುಂಬಿ ರಸ್ತೆಗಳು ಜಲಾವೃತವಾಗುತ್ತಿದ್ದು, ಅಲ್ಲಿಯ ಮನೆಗಳಿಗೆ ಹೋಗುವವರು ಬರುವವರಿಗೆ ರಸ್ತೆ ವ್ಯವಸ್ಥೆ ಇಲ್ಲ. ಚರಂಡಿ ವ್ಯವಸ್ಥೆ ಇಲ್ಲ, ಕುಡಿಯೋ ನೀರಿನ ವ್ಯವಸ್ಥೆಯೂ ಇಲ್ಲ. ಮಕ್ಕಳು ಶಾಲೆಗಳಿಗೆ ಹೋಗಿ ಬರಲು ತೊಂದರೆಯಾಗುತ್ತಿದೆ. ಮಳೆಗಾಲದಲ್ಲಂತೂ ಜನರ ಜೀವನ ಅಯೋಮಯವಾಗುತ್ತದೆ. ಜತೆಗೆ ಇಲ್ಲಿ ಜೀವನೋಪಾಯ ಅವ್ಯವಸ್ಥೆಯ ಆಗರವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೋವಿಂದಪುರ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಸದರಿ ಸ್ಥಳ ಮೂಲತಃ ಕೃಷಿ ಖುಷ್ಕಿ ಜಮೀನಾಗಿತ್ತು. ಈ ಜಮೀನು ನೀಲಪ್ಪ ಎಂಬುವವರ ಮಗ ಮಾಲತೇಶ್ ಅವರದ್ದು, ನಂತರ ಅವರಿಂದ ಮೆಹಬೂಬ್ ಅಲಿ ಎಂಬುವವರು ಕೊಂಡುಕೊಂಡರು. ಬಳಿಕ ಖುಷ್ಕಿ ಜಮೀನನ್ನು ನಿವೇಶನಗಳ ರೂಪದಲ್ಲಿ ಸ್ಥಳೀಯ ನಿವೇಶನ ಆಕಾಂಕ್ಷಿಗಳಿಗೆ ಮಾರಾಟ ಮಾಡಿದರು” ಎಂದು ತಿಳಿಸಿದರು.
“ಈ ನಿವೇಶನದಲ್ಲಿ ಕಟ್ಟಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟು ಪ್ರತಿ ತಿಂಗಳು ವಿದ್ಯುತ್ ಬಿಲ್ ಪಡೆಯುತ್ತಿದ್ದಾರೆ. ಮತ್ತೆ ಯಾವುದೇ ಮೂಲ ಸೌಕರ್ಯಗಳು ಸರ್ಕಾರದಿಂದ ದೊರೆಯುತ್ತಿಲ್ಲ. ಸ್ಥಳೀಯ ರಾಜಕೀಯ ನೇತಾರರು ಮತ್ತು ಸರ್ಕಾರಿ ಅಧಿಕಾರಿಗಳು ಇವರ ಕೂಗನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಕರ್ನಾಟಕ ಹಲವು ವೈಶಿಷ್ಟ್ಯಗಳ ಸಾಂಸ್ಕೃತಿಕ ಬೀಡಾಗಿದೆ: ಶಾಸಕ ಗಣೇಶ್ ಪ್ರಸಾದ್
“ಜನಪ್ರತಿನಿಧಿಗಳು ಮತ್ತು ಸರ್ಕಾರ ಈಗಲಾದರೂ ಇಲ್ಲಿಯ ನಿವಾಸಿಗಳ ಕಡೆ ಗಮನ ಹರಿಸಿ ನಮ್ಮ ಅಸಹಾಯಕ ಸ್ಥಿತಿಯನ್ನು ನಿವಾರಿಸಿ, ನಮಗೆ ಮೂಲ ಸೌಕರ್ಯ ದೊರಕಿಸಬೇಕು” ಎಂದು ಮನವಿ ಮಾಡಿದರು.
ಈ ಕುರಿತು ಈ ದಿನ.ಕಾಮ್ ಶಿವಮೊಗ್ಗ ತಹಶೀಲ್ದಾರರಿಗೆ ಸಂಪರ್ಕಿಸಿದೆಯಾದರೂ ಲಭ್ಯವಾಗಿಲ್ಲ.
ಭಾರಧ್ವಾಜ್ ಶಿವಮೊಗ್ಗ