ಅಂತಾರಾಷ್ಟ್ರೀಯ ಖ್ಯಾತ ಫುಟ್‌ಬಾಲ್ ತಾರೆ ಬ್ರೆಜಿಲ್‌ನ ನೇಮರ್ ಮಂಡಿ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಕನಿಷ್ಠ 6 ತಿಂಗಳ ಕಾಲ ಫುಟ್‌ಬಾಲ್ ಆಟದಿಂದ ದೂರ ಉಳಿಯುವ ಸಾಧ್ಯತೆಯಿದೆ.
ಅಕ್ಟೋಬರ್ 17 ರಂದು ನಡೆದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಉರುಗ್ವೆ ವಿರುದ್ಧ ಬ್ರೆಜಿಲ್ 2-0 ಗೋಲುಗಳಿಂದ ಸೋತಿತ್ತು. ಈ ಪಂದ್ಯದಲ್ಲಿ ಎದುರಾಳಿ ಮಿಡ್‌ಫೀಲ್ಡರ್ ನಿಕೋಲಸ್ ಡಿ ಲಾ ಕ್ರೂಜ್ ಅವರಿಗೆ ಡಿಕ್ಕಿ ಹೊಡೆದ ನಂತರ 31 ವರ್ಷ ವಯಸ್ಸಿನ ನೇಮರ್ ಗಾಯಗೊಂಡಿದ್ದರು.
ಪರೀಕ್ಷೆಯಲ್ಲಿ ಎಡಗಾಲಿನ ಮಂಡಿಯ ಅಸ್ಥಿರಜ್ಜು ಬಿರುಕುಬಿಟ್ಟಿದೆ ಎಂದು ಕಂಡು ಬಂದಿತ್ತು. ತಮ್ಮ ಸ್ಥಳೀಯ ಬ್ರೆಜಿಲ್‌ನ ಆಸ್ಪತ್ರೆಯಲ್ಲಿ ಗುರುವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಫಲಿತಾಂಶದಿಂದ ನಾವು ತುಂಬಾ ತೃಪ್ತಿ ಹೊಂದಿದ್ದೇವೆ ಎಂದು ಶಸ್ತ್ರಚಿಕಿತ್ಸೆ ನಡೆಸಿದ ಬ್ರೆಜಿಲ್ ತಂಡದ ವೈದ್ಯ ರೋಡ್ರಿಗೋ ಲಾಸ್ಮಾರ್ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಇನ್ನೂ ಕನಿಷ್ಠ 24 ರಿಂದ 28 ಗಂಟೆಗಳ ಕಾಲ ಇರಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ನೇಮರ್ ಈ ಹಿಂದೆ 2018 ರಲ್ಲಿ ಸಹ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಈ ಸುದ್ದಿ ಓದಿದ್ದೀರಾ? ವಿಶ್ವಕಪ್ | ಶಮಿ, ಸಿರಾಜ್ ದಾಳಿಗೆ ಶ್ರೀಲಂಕಾ ಧೂಳೀಪಟ; ದಾಖಲೆ ಜಯದೊಂದಿಗೆ ಭಾರತ ಸೆಮಿಫೈನಲ್ ಪ್ರವೇಶ
6 ತಿಂಗಳು ವಿಶ್ರಾಂತಿ ಪಡೆಯುವ ಕಾರಣ 2026ರ ವಿಶ್ವಕಪ್ ಫುಟ್‌ಬಾಲ್ ಆಯ್ಕೆಗೆ ನಡೆಯುವ ಅರ್ಹತಾ ಸುತ್ತಿನ ಪಂದ್ಯಗಳು ಸೇರಿದಂತೆ ಹಲವು ಪ್ರಮುಖ ಪಂದ್ಯಗಳಲ್ಲಿ ಹೊರಗುಳಿಯಲಿದ್ದಾರೆ.
ನೇಮರ್ ಅವರು ಹಲವು ಗಾಯದ ಸಮಸ್ಯೆಗಳ ಹೊರತಾಗಿಯೂ, ಫುಟ್‌ಬಾಲ್‌ನಲ್ಲಿ ಹೊಸ ದಾಖಲೆಗಳನ್ನು ಬರೆದಿದ್ದಾರೆ. ಸೆಪ್ಟೆಂಬರ್‌ನಲ್ಲಿ ಬ್ರೆಜಿಲ್ ಪರ 79ನೇ ಗೋಲ್ ಬಾರಿಸುವ ಮೂಲಕ ಫುಟ್‌ಬಾಲ್ ದಂತಕತೆ ಪೀಲೆ ದಾಖಲೆಯನ್ನು ಸರಿಗಟ್ಟಿದ್ದಾರೆ.
ಮುಂದಿನ ಜೂನ್, ಜುಲೈನಲ್ಲಿ ಆಯೋಜನೆಯಾಗಿರುವ ಕೊಪಾ ಅಮೆರಿಕ ಫುಟ್‌ಬಾಲ್ ಟೂರ್ನಿಯಲ್ಲಿ ನೇಮರ್ ಭಾಗವಹಿಸುವುದು ಸಂದೇಹವಿದೆ ಎಂದು ಫುಟ್‌ಬಾಲ್ ತಜ್ಞರು ತಿಳಿಸಿದ್ದಾರೆ.