ರಾಜ್ಯದ ರೈತರಿಗೆ ಉಚಿತ ಸೋಲಾರ್ ಪಂಪ್‌ಸೆಟ್ ವಿತರಣೆ ಮಾಡಲು ರಾಜ್ಯ ಸರ್ಕಾರ ಭರಿಸುತ್ತಿರುವಷ್ಟೇ ಮೊತ್ತವನ್ನು ಕೇಂದ್ರವೂ ಹಣ ಬಿಡುಗಡೆ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಒತ್ತಾಯಿಸಿದೆ.
ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಎಎಪಿ ಜಿಲ್ಲಾಧ್ಯಕ್ಷ ಶಿವಕುಮಾರ್ ಗೌಡ, “ರಾಜ್ಯದಲ್ಲಿ ಒಟ್ಟು 34 ಲಕ್ಷ ಪಂಪ್‌ಸೆಟ್‌ಗಳಿದ್ದು, ಅವುಗಳಿಗೆ ಸೋಲಾರ್ ಅಳವಡಿಸಲು ಒಟ್ಟು 13,800 ಕೋಟಿ ರೂ. ಖರ್ಚಾಗುತ್ತದೆ ಎಂಬ ಅಂದಾಜಿದೆ. ರಾಜ್ಯ ಸರ್ಕಾರ ಪ್ರತಿವರ್ಷ 6,900 ಕೋಟಿ ರೂ. ಖರ್ಚು ಮಾಡುತ್ತಿದೆ. ಇನ್ನುಳಿದ 6,900 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ಭರಿಸಬೇಕು. ರೈತರಿಗೆ ಸಂಪೂರ್ಣ ಉಚಿತವಾಗಿ ಸೋಲಾರ್ ಪಂಪ್ ವಿತರಣೆ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
“ಇಂಧನ ಇಲಾಖೆಯಲ್ಲಿ ದೊಡ್ಡ ಮಟ್ಟದ ಹಗರಣ ನಡೆಯುತ್ತಿದೆ ಎನ್ನುವ ಅನುಮಾನ ಇದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಮ ಪ್ರಮಾಣದಲ್ಲಿ ಜಿಎಸ್‌ಟಿ ಪಡೆಯುತ್ತಿವೆ. ಅಂತೆಯೇ, ರಾಜ್ಯದ ಅಭಿವೃದ್ಧಿಗೂ ಕೂಡ ಎರಡೂ ಸರ್ಕಾರಗಳು ಸಮನಾಗಿ ಬಂಡವಾಳ ಹಾಕಬೇಕು. ಸೋಲಾರ್ ಪಂಪ್‌ಸೆಟ್‌ಗೆ ಶೇಕಡಾ 30ರಷ್ಟು ಸಹಾಯ ಧನ ನಾವು ಕೊಡುತ್ತೇವೆ. ಶೇಕಡಾ 50ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಸಲಿ ಎಂದು ಕೇಂದ್ರ ಹೇಳುವುದು ಸರಿಯಲ್ಲ. ಹೀಗಾಗಿದರೆ, ಉಳಿದ ಹಣವನ್ನು ರೈತರೂ ಭರಸಬೇಕಾಗುತ್ತದೆ. ಇದು ನ್ಯಾಯಯುತವಲ್ಲ” ಎಂದು ಕಿಡಿಕಾರಿದ್ದಾರೆ.
“2013-2014ರಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದಾಗ ಡಿಕೆ ಶಿವಕುಮಾರ್ ಇಂಧನ ಸಚಿವರಾಗಿದ್ದರು. ಆಗ ರಾಜ್ಯದ ರೈತರಿಗೆ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲು ಸಹಾಯ ಮಾಡುತ್ತೇವೆ. ರೈತರಿಗೆ 24 ಗಂಟೆ ವಿದ್ಯುತ್ ಸಿಗುವಂತೆ ಮಾಡುತ್ತೇವೆ ಎಂದಿfದರು. ಅವರು ಆ ಭರವಸೆ ನೀಡಿ 10 ವರ್ಷಗಳಾಗಿವೆ. ಆದರೆ ಈ ವರೆಗೂ ರಾಜ್ಯದಲ್ಲಿ ಎಷ್ಟು ರೈತರಿಗೆ ಸೋಲಾರ್ ಪಂಪ್ ವಿತರಿಸಿದ್ದಾರೆ ಎಂಬುದನ್ನು ವಿವರಿಸಲಿ” ಎಂಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಎಎಪಿ ಜಿಲ್ಲಾ ಮಾಧ್ಯಮ ವಾಕ್ತರ ಸುರೇಶ್ ಕೌಟೆಕಾರ್, ಜಿಲ್ಲಾಧ್ಯಕ್ಷ ಶಿವಕುಮಾರ್ ಗೌಡ, ಜಿಲ್ಲಾ ಪ್ರಧಾನಾ ಕಾರ್ಯದರ್ಶಿ, ನಜೀರ್ ಅಹಮದ್ ಮತ್ತಿತರು ಉಪಸ್ಥಿತರಿದ್ದರು.