ಬಿಹಾರದ ಜಾತಿ ಸಮೀಕ್ಷೆಯಲ್ಲಿ ಮುಸ್ಲಿಂ ಹಾಗೂ ಯಾದವ ಸಮುದಾಯದ ಜನಸಂಖ್ಯೆಯನ್ನು ತುಷ್ಟೀಕರಣ ರಾಜಕೀಯದ ಭಾಗವಾಗಿ ಉದ್ದೇಶಪೂರ್ವಕವಾಗಿ ಹೆಚ್ಚಿಸಲಾಗಿದೆ ಎಂದು ಬಿಹಾರದ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ನಿತೀಶ್ ಕುಮಾರ್ ಅವರ ಜೆಡಿಯು ಎನ್‌ಡಿಎ ಅಂಗವಾಗಿದ್ದಾಗ ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದರು.
“ಜೆಡಿಯು, ಆರ್‌ಜೆಡಿ ಹಾಗೂ ಪ್ರತಿಪಕ್ಷ ಇಂಡಿಯಾ ಒಕ್ಕೂಟದ ಏಕೈಕ ಉದ್ದೇಶ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವುದಾಗಿದೆ. ನಿತೀಶ್ ಕುಮಾರ್ ಅವರು ಮುಂದಿನ ಪ್ರಧಾನಿಯಾಗುವ ಕನಸು ಕಾಣುವುದನ್ನು ಬಿಡಬೇಕು. ಇಂಡಿಯಾ ಒಕ್ಕೂಟ ಅವರನ್ನು ಅದರ ಸಂಚಾಲಕರನ್ನಾಗಿಯೂ ಮಾಡಲಿಲ್ಲ” ಎಂದು ಅಮಿತ್ ಶಾ ಹೇಳಿದರು.
ಈ ಸುದ್ದಿ ಓದಿದ್ದೀರಾ? ಒಮ್ಮೊಮ್ಮೆ ಗುಲಾಮಿತನ ಅನ್ನಿಸಿಬಿಡುತ್ತದೆ: ಬಿಜೆಪಿ ಸಂಸದ ಕರಡಿ ಸಂಗಣ್ಣ ಅಸಮಾಧಾನ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ಗೃಹ ಸಚಿವರು, ರಾಜ್ಯದಲ್ಲಿ ‘ಗೂಂಡಾ ರಾಜ್’ಗೆ ಜೆಡಿಯು ನಾಯಕರೇ ಕಾರಣ’ ಎಂದು ಹೇಳಿದರು.
“ನಿತೀಶ್ ಕುಮಾರ್ ಮತ್ತು ಲಾಲೂ ಯಾದವ್ ಅವರು ಕುಟುಂಬದ ಅಂಗಡಿಗಳನ್ನು ನಡೆಸುವವರು. ಒಬ್ಬರು ಪ್ರಧಾನಿಯಾಗಲು ಬಯಸುತ್ತಾರೆ ಮತ್ತು ಇನ್ನೊಬ್ಬರು ತಮ್ಮ ಮಗನನ್ನು ಮುಖ್ಯಮಂತ್ರಿ ಮಾಡಲು ಬಯಸುತ್ತಾರೆ” ಎಂದು ಅಮಿತ್ ಶಾ ಹೇಳಿದರು.
ಅಮಿತ್ ಶಾಗೆ ತೇಜಶ್ವಿ ಯಾದವ್ ತಿರುಗೇಟು
ಯಾದವರು ಮತ್ತು ಮುಸ್ಲಿಮರ ಜನಸಂಖ್ಯೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ಬಿಹಾರದ ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ.
“ಅಮಿತ್ ಶಾ ಹೇಳಿಕೆಯನ್ನು ಕೇಳಿದ್ದೇನೆ. ಜಾತಿವಾರು ಸಮೀಕ್ಷೆಯಲ್ಲಿ ಯಾದವರು, ಮುಸ್ಲಿಮರ ಜನಸಂಖ್ಯೆ ಹೆಚ್ಚಿದ್ದು, ಇತರೆ ಸಮುದಾಯಗಳ ಜನಸಂಖ್ಯೆ ಕಡಿಮೆಯಾಗಿದೆ ಎಂದಿದ್ದಾರೆ. ಸಮೀಕ್ಷೆ ತಪ್ಪಾಗಿದ್ದರೆ ದೇಶಾದ್ಯಂತ ಜಾತಿ ಗಣತಿ ನಡೆಸಿ ಎಂದು ಹೇಳಲು ಬಯಸುತ್ತೇನೆ. ನಿಮ್ಮನ್ನು ತಡೆದವರ್ಯಾರು? ನೀವು ಯಾಕೆ ಹಾಗೆ ಮಾಡುತ್ತಿಲ್ಲ?” ಎಂದು ಅವರು ತಿರುಗೇಟು ನೀಡಿದ್ದಾರೆ.