ಸಂಸದರು ಮತ್ತು ಶಾಸಕರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ತ್ವರಿತ ವಿಲೇವಾರಿಗಾಗಿ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನಗಳನ್ನು ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಸಂಸದರು/ಶಾಸಕರ ವಿರುದ್ಧ ಬಾಕಿ ಉಳಿದಿರುವ ಪ್ರಕರಣಗಳ ಮೇಲೆ ನಿಗಾ ಇಡಲು ಹಾಗೂ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ವಿಶೇಷ ಪೀಠ ಸ್ಥಾಪಿಸಬೇಕು ಎಂದು ಆದೇಶಿಸಿದೆ.
ಅಂತಹ ವಿಶೇಷ ಪೀಠವನ್ನು ಮುಖ್ಯ ನ್ಯಾಯಮೂರ್ತಿ ಅವರೇ ನೇತೃತ್ವ ವಹಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಸಂಸದರು/ಶಾಸಕರ ವಿರುದ್ಧ ಮರಣದಂಡನೆ ವಿಧಿಸಬಹುದಾದ ಪ್ರಕರಣಗಳಿಗೆ ಇತರ ಪ್ರಕರಣಗಳಿಗಿಂತ ಆದ್ಯತೆ ನೀಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.
ಸಂಬಂಧಪಟ್ಟ ಪ್ರಧಾನ ಸೆಷನ್ಸ್ ನ್ಯಾಯಾಧೀಶರು ಅಂತಹ ಪ್ರಕರಣಗಳ ವಿಚಾರಣೆಗೆ ಸಾಕಷ್ಟು ಮೂಲಸೌಕರ್ಯ ಸೌಲಭ್ಯಗಳು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳಲ್ಲಿ ತಿಳಿಸಿದೆ.
ಪ್ರಸ್ತುತ ಆರು ವರ್ಷಗಳ ನಿಷೇಧಕ್ಕೆ ವಿರುದ್ಧವಾಗಿ ಹಾಲಿ ಶಾಸಕರು ಸೇರಿದಂತೆ ಅಪರಾಧ ಹಿನ್ನಲೆ ಹೊಂದಿರುವ ರಾಜಕಾರಣಿಗಳನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಜೀವಮಾನದ ನಿಷೇಧವನ್ನು ಕೋರಿದ ಮನವಿಯಲ್ಲಿ ಈ ತೀರ್ಪು ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬೆಂಗಳೂರು ಮಳೆ: ಜನರಿಗೆ ನರಕದಿಂದ ಮುಕ್ತಿ ಸಿಗುವುದೆಂದು?
ಅಜೀವ ನಿಷೇಧದ ಕುರಿತ ಮನವಿಯನ್ನು ನಂತರ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿತು.
ಜನಪ್ರತಿನಿಧಿಗಳು ಸಾರ್ವಜನಿಕರ ಸೇವಕರು ಮತ್ತು ನ್ಯಾಯಾಂಗ ಸದಸ್ಯರಿಗೆ ಸಂಬಂಧಿಸಿದ ಕ್ರಿಮಿನಲ್ ಮೊಕದ್ದಮೆಯನ್ನು ಒಂದು ವರ್ಷದೊಳಗೆ ತೀರ್ಮಾನಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಸಾಕಷ್ಟು ಮೂಲಸೌಕರ್ಯಗಳನ್ನು ಒದಗಿಸುವ ಕುರಿತು ಮನವಿ ಮಾಡಲಾಗಿತ್ತು.
ಕ್ರಿಮಿನಲ್ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಸಾರ್ವಜನಿಕ ಪ್ರತಿನಿಧಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆಜೀವ ನಿಷೇಧದ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಕೋರ್ಟ್ ಹೇಳಿದೆ. ಆಜೀವ ನಿಷೇಧದ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪೀಠ ಹೇಳಿದೆ.
ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವೆಬ್ ಸೈಟ್ ಸಿದ್ಧಪಡಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ವೆಬ್ ಸೈಟ್ ಸ್ಥಾಪಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಗಂಭೀರ ಅಪರಾಧದ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಅಶ್ವಿನ್ ಕುಮಾರ್ ಉಪಾಧ್ಯಾಯ ಅವರು ಪ್ರಜಾಪ್ರತಿನಿಧಿ ಕಾಯ್ದೆ, 1951 (ಆರ್ಪಿ ಕಾಯ್ದೆ) ಸೆಕ್ಷನ್ 8(3) ಅಡಿಯಲ್ಲಿ ಆರು ವರ್ಷಗಳ ನಿಷೇಧವನ್ನು ತೆರವುಗೊಳಿಸಲು ಮತ್ತು ಜೀವಮಾನದ ನಿಷೇಧದೊಂದಿಗೆ ಅದನ್ನು ಬದಲಿಸಲು ಮನವಿ ಸಲ್ಲಿಸಿದ್ದಾರೆ.
ಪ್ರಜಾಪ್ರತಿನಿಧಿ ಕಾಯ್ದೆ ಸೆಕ್ಷನ್ 8(3) ಅನ್ವಯ, “ಯಾವುದೇ ಅಪರಾಧ ಮಾಡಿರುವ ಹಾಗೂ ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದಂತೆ ಜೈಲು ಶಿಕ್ಷೆಗೆ ಗುರಿಯಾದ ಜನಪ್ರತಿನಿಧಿಯನ್ನು ಅಪರಾಧದ ದಿನಾಂಕದಿಂದ ಅನರ್ಹಗೊಳಿಸಲಾಗುತ್ತದೆ ಮತ್ತು ಆತ ಬಿಡುಗಡೆಯಾದ ನಂತರ ಇನ್ನು ಆರು ವರ್ಷಗಳ ಅವಧಿಯವರೆಗೂ ಅನರ್ಹನಾಗಿರುತ್ತಾನೆ.”
ಅಶ್ವಿನ್ ಕುಮಾರ್ ಉಪಾಧ್ಯಾಯ ಅವರ ಮನವಿಯನ್ನು ಭಾರತದ ಚುನಾವಣಾ ಆಯೋಗವು ಬೆಂಬಲಿಸಿದೆ.