ವಿಶ್ವಸಂಸ್ಥೆ ಹಾಗೂ ಹಲವು ದೇಶಗಳ ಮನವಿಯ ಹೊರತಾಗಿಯೂ ಗಾಝಾ ಪಟ್ಟಣದಲ್ಲಿ ಕದನ ವಿರಾಮ ಘೋಷಿಸಲು ಇಸ್ರೇಲ್ ನಿರಾಕರಿಸಿದೆ. ಆದರೆ ನಿತ್ಯ 4 ಗಂಟೆಗಳ ಕಾಲ ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸುವುದಾಗಿ ಅಮೆರಿಕ ತಿಳಿಸಿದೆ.
ಮಾನವೀಯ ನೆರವಿಗಾಗಿ ಗಾಝಾ ಮೇಲಿನ ಮಿಲಿಟರಿ ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ನೀಡಬೇಕು ಎಂಬ ವಿಶ್ವದ ಒಕ್ಕೊರಲ ಒತ್ತಡಕ್ಕೆ ಮಣಿದಿರುವ ಇಸ್ರೇಲ್ ಕೊನೆಗೂ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆಗೆ ತಾತ್ಕಾಲಿಕ ತಡೆ ನೀಡುವ ಭರವಸೆ ನೀಡಿದೆ. ಈ ಮೂಲಕ ನಾಗರಿಕರು ಈ ಪ್ರದೇಶದಿಂದ ಓಡಿಹೋಗಲು ಅವಕಾಶ ನೀಡುವುದಾಗಿ ಇಸ್ರೇಲ್ ಹೇಳಿದೆ.
ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯ ಬಳಿಕ ಪ್ರತಿದಾಳಿ ನಡೆಸುತ್ತಿರುವ ಇಸ್ರೇಲ್ ಮೇಲೆ ಅಮೆರಿಕ ಒತ್ತಡ ತರುತ್ತಿದ್ದು, ಧೀರ್ಘ ಅವಧಿಯ ಯುದ್ಧ ವಿರಾಮ ಘೋಷಿಸುವಂತೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರನ್ನು ಜೋ ಬೈಡನ್ ಒತ್ತಾಯಿಸುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಗಾಝಾ ಪಟ್ಟಿಯ ಉತ್ತರ ಭಾಗದಲ್ಲಿ ಇಸ್ರೇಲಿ ಪಡೆಗಳು ಮತ್ತು ಹಮಾಸ್ ನಡುವೆ ಭೀಕರ ಕಾಳಗ ಮುಂದುವರಿದಿದೆ.
ಈ ಸುದ್ದಿ ಓದಿದ್ದೀರಾ? ಗಾಜಾ | ಮಕ್ಕಳ ಪಾಲಿನ ಮಸಣ, ಮಹಿಳೆಯರ ಅಗ್ನಿಕುಂಡ
“ಗಾಝಾ ಪ್ರದೇಶದಲ್ಲಿ ಪ್ರತಿದಿನ ನಾಲ್ಕು ಗಂಟೆಗಳ ತಾತ್ಕಾಲಿಕ ವಿರಾಮವನ್ನು ಅನುಷ್ಠಾನಕ್ಕೆ ತರುವುದನ್ನು ಇಸ್ರೇಲ್ ಆರಂಭಿಸಲಿದೆ. ಮೂರು ಗಂಟೆ ಮುನ್ನ ಈ ಬಗ್ಗೆ ಪ್ರಕಟಣೆ ನೀಡಲಾಗುತ್ತದೆ” ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬೆ ವಿವರಿಸಿದ್ದಾರೆ.
ಈ ಅವಧಿಯಲ್ಲಿ ಯಾವುದೇ ಮಿಲಿಟರಿ ಕಾರ್ಯಾಚರಣೆ ಇರುವುದಿಲ್ಲ ಹಾಗೂ ಈ ಪ್ರಕ್ರಿಯೆ ಇಂದಿನಿಂದಲೇ ಆರಂಭವಾಗಲಿದೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಗಾಝಾದಲ್ಲಿ ಇಲ್ಲಿಯವರೆಗೂ 4,324 ಮಕ್ಕಳು ಸೇರಿದಂತೆ 10,569 ಜನರು ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯ ಹೇಳಿದೆ.
ಗಾಝಾದಲ್ಲಿ ಯುದ್ಧದಿಂದ ಅತಿ ಹೆಚ್ಚು ತೊಂದರೆ ಅನುಭವಿಸುತ್ತಿರುವವರು ಮಹಿಳೆಯರು ಮತ್ತು ಮಕ್ಕಳು. ಯುದ್ಧ ಆರಂಭವಾದ ಕಳೆದ 35 ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಮಹಿಳೆಯರು ವಿಧವೆಯರಾಗಿದ್ದಾರೆ. 7 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮನೆ ತೊರೆದಿದ್ದಾರೆ. ಅಲ್ಲಿ ಉಳಿದು ಕೊಂಡಿರುವ ಜನರ ಬದುಕು ಚಿಂತಾಜನಕವಾಗಿದೆ.