ಕ್ರಿಕೆಟ್ ವಿಶ್ವಕಪ್ 2023ರ ಲೀಗ್ ಹಂತದ ಕೊನೆಯ ಪಂದ್ಯ ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯದಲ್ಲಿ ಆತಿಥೇಯ ಭಾರತವು ನೆದರ್ಲೆಂಡ್ಸ್ ತಂಡದ ವಿರುದ್ಧ ಸೆಣಸಲಿದೆ
ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಭಾರತವು ಇದುವರೆಗೆ ಒಂದು ಪಂದ್ಯವನ್ನೂ ಸೋತಿಲ್ಲ. ಆಡಿರುವ ಎಲ್ಲ 8 ಪಂದ್ಯಗಳನ್ನು ಗೆದ್ದು ಅಜೇಯವಾಗುಳಿದಿದ್ದು, 16 ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನು ಆಡಿರುವ 8 ಪಂದ್ಯಗಳಲ್ಲಿ 2 ಪಂದ್ಯಗಳನ್ನಷ್ಟೇ ಗೆದ್ದಿರುವ ನೆದರ್ಲೆಂಡ್ಸ್ ತಂಡವು, 4 ಪಾಯಿಂಟ್‌ಗಳನ್ನು ಮಾತ್ರ ಗಳಿಸಿ ಕೊನೆಯ ಸ್ಥಾನದಲ್ಲಿದೆ.
ಮೊದಲ ಸ್ಥಾನ ಹಾಗೂ ಕೊನೆಯ ಸ್ಥಾನ ಪಡೆದಿರುವ ತಂಡಗಳ ನಡುವೆ ನಡೆಯುವ ಪಂದ್ಯ ಇದಾಗಿದ್ದರೂ ಬೆಂಗಳೂರಿನಲ್ಲಿ ನಡೆಯುತ್ತಿರುವುದರಿಂದ ಸಹಜವಾಗಿಯೇ ಕ್ರಿಕೆಟ್ ಅಭಿಮಾನಿಗಳು ಕಿಕ್ಕಿರಿದು ತುಂಬಲಿದ್ದಾರೆ.
ಈಗಾಗಲೇ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ವಿರಾಟ್ ಕೊಹ್ಲಿಯ ಕಟೌಟ್‌ಗಳನ್ನು ಹಾಕಲಾಗಿದೆ. ಅವರು ಈ ಪಂದ್ಯದಲ್ಲಿ ಶತಕಗಳ ಅರ್ಧಶತಕ ಪೂರೈಸಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯುವರೇ ಎನ್ನುವ ಕಾತರ ಕ್ರಿಕೆಟ್ ಪ್ರಿಯರಲ್ಲಿದೆ.
ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕ್ರಿಕೆಟ್ ಆಟದಿಂದ ಯಾವುದೇ ಸಂಚಾರ ದಟ್ಟಣೆ ಆಗದಂತೆಯೂ ಎಚ್ಚರ ವಹಿಸಲಾಗಿದೆ. ವಾರಾಂತ್ಯ ಆಗಿರುವುದರಿಂದ ಸಾರ್ವಜನಿಕರು ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚರಿಸುವುದನ್ನು ಆದಷ್ಟು ಕಡಿಮೆ ಮಾಡಿದರೆ ಉತ್ತಮ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ ಎನ್ ಅನುಚೇತ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ: ವಿಪಕ್ಷ ನಾಯಕನ ಸ್ಥಾನಕ್ಕೆ ನಾನೂ ಆಕಾಂಕ್ಷಿ: ಡಾ ಅಶ್ವತ್ಥನಾರಾಯಣ
ಗಾಯದ ಸಮಸ್ಯೆಯಿಂದ ಹಾರ್ದಿಕ್ ಪಾಂಡ್ಯ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ಕನ್ನಡಿಗ ಪ್ರಸಿದ್ಧ ಕೃಷ್ಣ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂದು ಬೆಂಗಳೂರಿನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಬೆಂಗಳೂರಿನವರೇ ಆದ ಪ್ರಸಿದ್ಧ್ ಕೃಷ್ಣ ಕ್ರೀಡಾಂಗಕ್ಕೆ ಇಳಿಯುತ್ತಾರಾ ಎನ್ನುವ ಕುತೂಹಲವೂ ರಾಜ್ಯದ ಕ್ರಿಕೆಟ್ ಪ್ರಿಯರಲ್ಲಿದೆ.