- ಯತೀಂದ್ರ ಅವರಿಗೆ ಕಾಲ್ ಮಾಡಿ ಮಾತನಾಡಿರುವ ಸಂಗತಿ ಯಾವುದು?
- ಸಿಎಂಗೆ ಯತೀಂದ್ರ ಅವರ ವಿಡಿಯೋಗಿಂತ ದೊಡ್ಡ ಸಾಕ್ಷಿ ಬೇಕಾ?
ಸಿಎಂ ಸಿದ್ದರಾಮಯ್ಯ ಅವರು ದೊಡ್ಡ ಪ್ರಾಮಾಣಿಕರಲ್ವಾ? ತಾವು ಯತೀಂದ್ರ ಅವರಿಗೆ ಕಾಲ್ ಮಾಡಿ ಮಾತನಾಡಿರುವ ಸಂಗತಿ ಯಾವುದು? ಆ ಮಹಾದೇವ ಅಧಿಕಾರಿ ಯಾರು? ನಾನು ಹೇಳಿದ್ದು ಅಷ್ಟೇ ಮಾಡಿ ಎನ್ನುವ ಯತೀಂದ್ರ ಅವರ ವಿಡಿಯೋಗಿಂತ ದೊಡ್ಡ ಸಾಕ್ಷಿ ಬೇಕಾ? ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ಯತೀಂದ್ರ ಅವರು ಫೋನ್ ಕಾಲ್ ವಿಡಿಯೋ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಈ ಸರ್ಕಾರ ರಚನೆ ಆದಾಗಿನಿಂದ ಹಲವಾರು ವಿಚಾರ ಪ್ರಸ್ತಾಪ ಮಾಡಿದ್ದೇನೆ. ಕುಮಾರಸ್ವಾಮಿ ಹತಾಶೆಯಿಂದ ಮಾತನಾಡುತ್ತಿದ್ದಾನೆ ಎಂದು ಲಘುವಾಗಿ ಪ್ರತಿಕ್ರಿಯಿಸಿದರು. ಈಗ ಏನು ಹೇಳಬೇಕು?” ಎಂದರು.
ಇದೇ ಸಿದ್ದರಾಮಯ್ಯನವರು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಒಂದು ಹೇಳಿಕೆ ನೀಡಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ ವಿಜಯೇಂದ್ರ ಅವರದೇ ಅಧಿಕಾರ. ಯಡಿಯೂರಪ್ಪ ಅವರು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಚೆಕ್ ನಲ್ಲಿ ಹಣ ತೆಗೆದುಕೊಳ್ಳುತ್ತಿದ್ದರು. ಆದರೆ ವಿಜಯೇಂದ್ರ ಆರ್‌ಟಿಜಿಎಸ್ ನಲ್ಲಿ ಹಣ ತೆಗೆದುಕೊಳ್ಳುತ್ತಿದಾರೆ. ಅನ್‌ಅಫೀಶಿಯಲಿ ವಿಜಯೇಂದ್ರ ಅವರೇ ಸಿಎಂ ಆಗಿದ್ದಾರೆ ಎಂದಿದ್ದರು. ಈಗ ಯತೀಂದ್ರ ಏನು ಆಗಿದ್ದಾರೆ. ದೊಡ್ಡ ಪ್ರಾಮಾಣಿಕರಂತೆ ಸಿದ್ದರಾಮಯ್ಯ ಪೋಸು ಕೊಡುತ್ತಾರೆ ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ‘ನಾನು ಹೇಳಿದವರಷ್ಟನ್ನೇ ಮಾಡಿ’ ಎನ್ನುವ ವ್ಯಕ್ತಿ ಸಿಎಂ ಮಗನೋ ಅಥವಾ ಸೂಪರ್ ಸಿಎಮ್ಮೋ?: ಎಚ್‌ಡಿಕೆ ಕಿಡಿ
ಕೆರೆಗಳನ್ನು ನುಂಗಿಹಾಕಿದವರಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ. ವಿದ್ಯುತ್ ಕಳ್ಳತನ ಮಾಡಿದ್ದಾರೆ ಎಂದು ಕಾಂಗ್ರೆಸ್‌ನ ಮಹಾನ್ ನಾಯಕರು ನನ್ನ ವಿರುದ್ಧ ಆರೋಪ ಮಾಡಿದರು. ನಮ್ಮ ಕಚೇರಿ ಮುಂದೆ ಪೋಸ್ಟರ್ ಹಂಚಿದರು. ಕಾಂಗ್ರೆಸ್‌ಗೆ ಇದು ಚಾಳಿ ಆಗಿದೆ. ಹಿಂದಿನ ಸರ್ಕಾರದ ವಿರುದ್ಧ ಪೇ ಸಿಎಂ ಅಂತ ಹಿಂದೆ ಪೋಸ್ಟರ್ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಒಳ್ಳೆ ನೀರನ್ನು ತೆಗೆದುಕೊಳ್ಳುವುದಿಲ್ಲ. ಚರಂಡಿ ನೀರನ್ನೇ ತೆಗೆದುಕೊಳ್ಳುವುದು. ಈ ಮಾತನ್ನು ಅವರದ್ದೇ ಪಕ್ಷದ ಕೆ ಎನ್ ರಾಜಣ್ಣ ಹೇಳಿದ್ದಾರೆ ಎಂದು ಜೆಡಿಎಸ್ ನಾಯಕರ ಕಾಂಗ್ರೆಸ್ ಸೇರ್ಪಡೆಗೆ ಲೇವಡಿ ಮಾಡಿದರು.