ನಾಡಿನ ಪ್ರಸಿದ್ಧ ಕಲಾವಿದರಿಗೆ ಸಾರ್ವಜನಿಕ ಸಮಾರಂಭಗಳಲ್ಲಿ ನೀಡುವ ಶಿಳ್ಳೆ, ಚಪ್ಪಾಳೆ, ಪ್ರೋತ್ಸಾಹವು ಸ್ಥಳೀಯ ಯುವ ಕಲಾವಿದರಿಗೂ ನೀಡುವ ಮೂಲಕ ಪ್ರೋತ್ಸಾಹಿಸುವ ಕಾರ್ಯವಾಗಲಿ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಕೆ ಪಾಟಿಲ್ ಹೇಳಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸಂಘಗಳ ಒಕ್ಕೂಟ, ಆದರ್ಶ ಶಿಕ್ಷಣ ಸಮಿತಿಯ ಡಿ.ಎಸ್.ಕುರ್ತಕೋಟಿ ಮೆಮೋರಿಯಲ್ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ನಗರದ ಆದರ್ಶ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವ ಭವನದಲ್ಲಿ ಶನಿವಾರ ಜರಗಿದ ಗದಗ ಜಿಲ್ಲಾ ಮಟ್ಟದ ಪ್ರಸಕ್ತ ಸಾಲಿನ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
“ಗದಗ ಜಿಲ್ಲೆ ವ್ಯಾಪ್ತಿಯ ಪ್ರತಿ 15 ಕಿಮೀ ಅಂತರದಲ್ಲಿ ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಂಪ್ರದಾಯ, ಕ್ರೀಡೆ ಸೇರಿದಂತೆ ಹಲವು ರಂಗಗಳಲ್ಲಿ ಸಾಧನೆಗೈದ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಮಹನೀಯರನ್ನು ಕಾಣಬಹುದಾಗಿದೆ. ಈ ಸಾಧನೆ ಗದಗ ಜಿಲ್ಲೆಯ ಹೆಮ್ಮೆಯ ವಿಷಯ. ಸಂಗೀತ ಕ್ಷೇತ್ರದಲ್ಲಿ ಭಾರತ ರತ್ನ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯವರಾದ ಪಂಡಿತ ಭೀಮಸೇನ ಜೋಶಿಯವರು ಒಬ್ಬರೇ ಈವರೆಗೂ ಸಂಗೀತ ಕ್ಷೇತ್ರಕ್ಕೆ ಭಾರತ ರತ್ನ ಪಡೆದವರಾಗಿದ್ದಾರೆ” ಎಂದು ಪ್ರಶಂಸೆ ವ್ಯಕ್ತಪಡಿಸಿದರು.
“ಯುವಜನೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡುವುದಕ್ಕೆ ತುಂಬಾ ಸಂತೋಷವೆನಿಸುತ್ತದೆ. ಮೊನ್ನೆ ನವೆಂಬರ್ 1 ರಿಂದ 3 ರವರೆಗೆ ನಗರದಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ ಮುಖ್ಯವಾಗಿತ್ತು. ಅಲ್ಲದೆ ಮೂರು ದಿನಗಳ ಕಾಲ ಸಾಯಂಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಕಲಾವಿದರು ಕಲಾಪ್ರಕಾರಗಳಿಂದ ಅದ್ಭುತ ಕಾರ್ಯಕ್ರಮ ಮೂಡಿಬಂದಿತು. ಕಾರ್ಯಕ್ರಮ ಯಶಸ್ವಿಗೆ ಯುವಜನರ ಪಾಲ್ಗೊಳ್ಳುವಿಕೆ ಪ್ರಮುಖವಾಗಿತ್ತು” ಎಂದರು.
ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ ಮಾತನಾಡಿ, “ಜಗತ್ತಿನಲ್ಲಿ ಹೆಚ್ಚು ಯುವಜನರನ್ನು ಹೊಂದಿದ ರಾಷ್ಟ್ರ ಭಾರತ. ಯುವಜನರು ಮನಸ್ಸು ಮಾಡಿದರೆ ಅಸಾಧ್ಯವೆಂಬುದು ಯಾವುದೂ ಇಲ್ಲ. ಸ್ವಾಮಿ ವಿವೇಕಾನಂದರು ಹೇಳಿದಂತೆ ಯುವಕರಲ್ಲಿ ಅದಮ್ಯ ಶಕ್ತಿ ಇದೆ. ಬದಲಾವಣೆ ಆಗಬೇಕಾದರೆ ಅದು ಯುವಜನರಿಂದ ಸಾಧ್ಯ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದೇಶದ ಸಂಪತ್ತು ರಕ್ಷಿಸುವಂತೆ ಆಗ್ರಹ; ನ.26ರಿಂದ 28ರವರೆಗೆ ಧರಣಿ
“ಯುವಜನತೆಗೆ ಸಾಧನೆಗೈಯಲು ಅಗತ್ಯ ಪ್ರೋತ್ಸಾಹ, ಸಹಕಾರ ನೀಡಬೇಕು. ಶಿಕ್ಷಣವೆಂದರೆ ಕೇವಲ ಪಠ್ಯಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಿಗೂ ವಿಕಸನ ಹೊಂದಬೇಕು. ದೇಶದ ಸಂಪತ್ತು ಯಾವುದೆಂದರೆ ಖನಿಜ ಸಂಪತ್ತು, ಅರಣ್ಯ ಸಂಪತ್ತು, ನೈಸರ್ಗಿಕ ಸಂಪತ್ತು ಎಂದು ಹೇಳುತ್ತೇವೆ. ಅದರೊಟ್ಟಿಗೆ ಯುವಜನರೂ ಸಹ ದೇಶದ ಸಂಪತ್ತೆಂದು ನೋಡುವ ಮನೋಭಾವ ನಮ್ಮದಾಗಬೇಕಿದೆ. ಇತ್ತೀಚೆಗೆ ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವ ಮಿತಿಮೀರುತ್ತಿದೆ. ದೇಶಿಯ ಸಾಹಿತ್ಯ, ಸಂಸ್ಕೃತಿ ಬೆಳೆಸುವ ಹಾಗೂ ಉಳಿಸುವ ಮನೋಭಾವನೆ ಮೈಗೂಡಿಸಿಕೊಳ್ಳಬೇಕಿದೆ” ಎಂದರು.
ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ರವಿಕಾಂತ ಅಂಗಡಿ, ಆದರ್ಶ ಶಿಕ್ಷಣ ಸಮಿತಿ ಕಾರ್ಯದರ್ಶಿ ಗೋಡಖಿಂಡಿ, ಡಿ ಎಸ್ ಕುರ್ತಕೋಟಿ ಮೆಮೋರಿಯಲ್ ಪದವಿಪೂರ್ವ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ರವೀಂದ್ರ ಕುಲಕರ್ಣಿ, ಜಿ.ಪಂ. ಮಾಜಿ ಅಧ್ಯಕ್ಷ ಸಿದ್ಧು ಪಾಟೀಲ ಇದ್ದರು.