ಜಮೀನಿಗೆ ತೆರಳುವ ದಾರಿಯ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದ್ದು, ಗುಂಪೊಂದು ಮೂವರು ಮಹಿಳೆಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಶೀಳನೆರೆ ಹೋಬಳಿಯ ಬ್ಯಾಲದಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಹಿಳೆಯರ ಮೇಲೆ ಹಲ್ಲೆ ನಡೆಸಿರುವ ಗುಂಪು, ಮಹಿಳೆಯರ ಬಳಿಯಿದ್ದ ಚಿನ್ನದ ಸರ ಮತ್ತು ಓಲೆಯನ್ನು ಕಸಿದುಕೊಂಡು ಪರಾರಿಯಾಗಿದೆ.
ಘಟನೆಯಲ್ಲಿ ನಾಗಮ್ಮ, ಮಾಲಮ್ಮ, ಮಂಜಮ್ಮ ಎಂಬ ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬ್ಯಾಲದಕೆರೆಯ ಸರ್ಕಾರಿ ಗೋಮಾಳದಲ್ಲಿ ತಿಮ್ಮಮ್ಮ ಎಂಬವರು ಮನೆ ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ಅವರ ಮನೆಗೆ ತೆರಳಲು ರಸ್ತೆ ಇರಲಿಲ್ಲ. ಮನೆಗೆ ದಾರಿಯ ವಿಚಾರದಲ್ಲಿ ತಿಮ್ಮಮ್ಮ ಮತ್ತು ಕೇದಾಳೆಗೌಡ ಕುಟುಂಬಸ್ಥರ ನಡುವೆ ಜಗಳ ನಡೆದಿತ್ತು. ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಎರಡೂ ಕುಟುಂಬದವರಿಗೂ ಬುದ್ಧಿ ಹೇಳಿದ್ದರು.
ಆದರೆ, ಸೋಮವಾರ ಎರಡೂ ಕುಟುಂಬಗಳ ನಡುವೆ ಮತ್ತೆ ಜಗಳ ನಡೆದಿದೆ. ಈ ವೇಳೆ, ಆರೋಪಿಗಳು ಮೂವರು ಮಹಿಳೆಯರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಘಟನೆ ಸಂಬಂಧ ಹಲ್ಲೆಗೊಳಗಾದ ನಾಗಮ್ಮ ಅವರ ಪುತ್ರ ಮಂಜೇಗೌಡ ಕೆ.ಆರ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಹರೀಶ್, ಚಂದ್ರೇಗೌಡ, ಮಂಜೇಗೌಡ, ಮಮತಾ, ಶೈಲಜಾ, ಯಶವಂತ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.