ಈ ದಿನ ಸಂಪಾದಕೀಯ | ಕೇಂದ್ರದ ಏಜೆಂಟರಾಗಿರುವ ರಾಜ್ಯಪಾಲರುಗಳಿಗೆ ಸುಪ್ರೀಮ್ ಚಾವಟಿ!

Date:

Advertisements

ಇಂದಿರಾಗಾಂಧೀ ಕಾಲದಲ್ಲೂ ಹೀಗೆಯೇ ರಾಜ್ಯಪಾಲರನ್ನು ಬಳಸಿಕೊಳ್ಳಲಾಗುತ್ತಿತ್ತು ಎಂಬ ವಾದ ಮುಂದೆ ಮಾಡಬಹುದು. ಆದರೆ ಒಂದು ತಪ್ಪನ್ನು ಉಲ್ಲೇಖಿಸಿ ಮತ್ತೊಂದು ತಪ್ಪನ್ನು ಸಮರ್ಥಿಸಿಕೊಳ್ಳಲು ಬರುವುದಿಲ್ಲ.

“ನೀವು ಬೆಂಕಿಯೊಂದಿಗೆ ಸರಸವಾಡುತ್ತಿದ್ದೀರಿ” ಎಂದು ಸುಪ್ರೀಮ್ ಕೋರ್ಟು ಹತ್ತು ದಿನಗಳ ಹಿಂದೆ ಪಂಜಾಬಿನ ರಾಜ್ಯಪಾಲರಿಗೆ  ಬೀಸಿದ್ದ ಚಾವಟಿಯ ಪೆಟ್ಟು ತಗುಲಬೇಕಾದದ್ದು ವಾಸ್ತವವಾಗಿ ಮೋದಿ ಸರ್ಕಾರಕ್ಕೆ. ಚರಣಚುಂಬಕ ಮಾಧ್ಯಮಗಳು ಈ ಸುದ್ದಿಯನ್ನು ಚರ್ಚಿಸಲೇ ಇಲ್ಲ.

ಸುಪ್ರೀಮ್ ಕೋರ್ಟು ನೆನ್ನೆ ಪುನಃ ಚಾವಟಿ ಬೀಸಿದೆ. ಈ ಸಲ ಕಟಕಟೆಯಲ್ಲಿ ನಿಂತಿದ್ದವರು ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ. ರಾಜ್ಯ ವಿಧಾನಸಭೆ ಅಂಗೀಕರಿಸಿ ಕಳಿಸಿದ್ದ ವಿಧೇಯಕಗಳನ್ನು ಮೂರು ವರ್ಷಗಳ ಕಾಲ ಬಾಕಿ ಉಳಿಸಿಕೊಂಡು ಕುಳಿತಿದ್ದರು ರವಿ.

Advertisements

ರಾಜ್ಯಪಾಲರ ಪಕ್ಷಪಾತ, ಪೂರ್ವಗ್ರಹದ ನಡೆಗಳ ಕುರಿತು ಸರ್ವೋಚ್ಚ ನ್ಯಾಯಾಲಯ ಬಿರುನುಡಿಗಳನ್ನು ಆಡಿರುವುದು ಇದೇ ಮೊದಲಲ್ಲ. ಆದರೆ ಈ ನೆಲದ ಅತ್ಯುನ್ನತ ನ್ಯಾಯಾಲಯವನ್ನೂ ಯಾಮಾರಿಸುವ ಭಂಡತನವನ್ನು ಆಳುವವರು ಇತ್ತೀಚಿನ ವರ್ಷಗಳಲ್ಲಿ ತೋರುತ್ತ ಬಂದಿದ್ದಾರೆ. ಚುನಾಯಿತ ಸರ್ಕಾರಗಳನ್ನು ಕೆಡವುವ ರಾಜಕಾರಣದಲ್ಲಿ ರಾಜ್ಯಪಾಲರು ಸಕ್ರಿಯವಾಗಿ ತೊಡಗಿದ್ದಾರೆಂದು ಸುಪ್ರೀಮ್ ಕೋರ್ಟು ಕಳವಳ ವ್ಯಕ್ತಪಡಿಸಿತ್ತು. ಮಹಾರಾಷ್ಟ್ರದ ಉದ್ಧವಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಕೆಡುವುವ ಬಿಜೆಪಿ  ಕೃತ್ಯದಲ್ಲಿ ಅಲ್ಲಿನ ರಾಜ್ಯಪಾಲ ಶಾಮೀಲಾಗಿದ್ದನ್ನು ಉಲ್ಲೇಖಿಸಿತ್ತು. ಶಿವಸೇನೆಯಲ್ಲಿ ಬಂಡಾಯದ ನೆಪವೊಡ್ಡಿ ಸದನದಲ್ಲಿ ವಿಶ್ವಾಸಮತ ಯಾಚಿಸುವಂತೆ ರಾಜ್ಯಪಾಲರು ನೀಡಿದ ಆದೇಶ ನ್ಯಾಯಬಾಹಿರ ಎಂದು ಸಾರಿತ್ತು.

ಹತ್ತು ದಿನಗಳ ಹಿಂದೆ ಸುಪ್ರೀಮ್ ಕೋರ್ಟ್ ಕೆಂಗಣ್ಣು ಬೀರಿದ್ದು ಪಂಜಾಬಿನ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರತ್ತ. ಪಂಜಾಬ್ ವಿಧಾನಸಭೆ ಜೂನ್ ತಿಂಗಳಲ್ಲಿ ಅಂಗೀಕರಿಸಿ ಕಳಿಸಿದ್ದ ನಾಲ್ಕು ವಿಧೇಯಕಗಳನ್ನು ಅಕ್ರಮವಾಗಿ ತಡೆಹಿಡಿದಿರುವ ಆರೋಪ ಪುರೋಹಿತ್ ಮೇಲಿದೆ. ನಿಮ್ಮ ಅಧಿಕಾರ ವ್ಯಾಪ್ತಿ ಮೀರಿ, ಸ್ಪೀಕರ್ ಅಧಿಕಾರ ಕ್ಷೇತ್ರವನ್ನು ಅತಿಕ್ರಮಿಸಿದ್ದೀರಿ, ನೀವು ಮಾಡಿರುವ ಕೃತ್ಯದ ಗಾಂಭೀರ್ಯದ ಅರಿವಿದೆಯೇ? ವಿಧೇಯಕಗಳು ಸಂವಿಧಾನಬಾಹಿರ ಎಂಬುದು ನಿಮ್ಮ ನಿಲುವಾದರೆ ಅವುಗಳನ್ನು ರಾಷ್ಟ್ರಪತಿಯವರ ಪರಿಶೀಲನೆಗೆ ಕಳಿಸುವ, ವಿಧಾನಮಂಡಲಕ್ಕೆ ಹಿಂತಿರುಗಿಸುವ ಸಂವಿಧಾನಬದ್ಧ ಅಧಿಕಾರ ನಿಮಗಿದೆ. ಅದನ್ನು ಬಿಟ್ಟು ವಿಧಾನಮಂಡಲ ಅಧಿವೇಶನವೇ ಅಸಿಂಧು ಎಂದು ತೀರ್ಮಾನಿಸುವ ಅಧಿಕಾರ ನಿಮಗೆ ಇಲ್ಲ. ಇಂತಹ ಅಧಿಕಾರವನ್ನು ನಿಮಗೆ (ರಾಜ್ಯಪಾಲರಿಗೆ) ನೀಡಿದರೆ ಸಂಸದೀಯ ಪ್ರಜಾಪ್ರಭುತ್ವಕ್ಕೇನು ಅರ್ಥ ಉಳಿಯಿತು ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತ್ತು.

ತಮಿಳುನಾಡು, ಕೇರಳ, ತೆಲಂಗಾಣ, ಪಶ್ಚಿಮ ಬಂಗಾಳ ಹೀಗೆ ಹಲವು ರಾಜ್ಯಗಳ ರಾಜ್ಯಪಾಲರು ಪಕ್ಷ ರಾಜಕಾರಣದಲ್ಲಿ ತೊಡಗಿದ್ದಾರೆಂದು ಆರೋಪಿಸಿ ಸುಪ್ರೀಮ್ ಕೋರ್ಟ್ ಕದ ಬಡಿದಿವೆ. ಸಂವಿಧಾನದ ಅಡಿಪಾಯವನ್ನೇ ಅಲುಗಿಸುವ ಕೃತ್ಯಗಳಲ್ಲಿ ರಾಜ್ಯಪಾಲರು ತೊಡಗಿದ್ದಾರೆಂಬ ಆರೋಪ ಕಳೆದ ಏಳೆಂಟು ವರ್ಷಗಳಲ್ಲಿ ಅತ್ಯಧಿಕವಾಗಿ ಕೇಳಿಬರುತ್ತಿದೆ.

ಈ ಅಸಹನೆ, ಅಸಹಕಾರ ವಿಶೇಷವಾಗಿ ಪ್ರತಿಪಕ್ಷಗಳ ಸರ್ಕಾರಗಳಿಗೆ ಮೀಸಲು. ರಾಜ್ಯಪಾಲರು ರಬ್ಬರ್ ಸ್ಟ್ಯಾಂಪುಗಳಲ್ಲ, ರಾಜ್ಯ ಸರ್ಕಾರಗಳ ತಲೆಯ ಮೇಲೆ ಕುಳಿತುಕೊಂಡು ಕಾರುಬಾರು ನಡೆಸುವ ‘ಸೂಪರ್ ಸರ್ಕಾರ’ಗಳೂ ಅಲ್ಲ. ರಾಜ್ಯಪಾಲರು ರಾಜ್ಯಗಳಲ್ಲಿ ರಾಷ್ಟ್ರಪತಿಯವರ ಪ್ರತಿನಿಧಿಗಳೇ ವಿನಾ ಕೇಂದ್ರ ಸರ್ಕಾರದ ರಾಜಕೀಯ ಏಜೆಂಟರಲ್ಲ. ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ವಿಧೇಯಕಗಳನ್ನು ಅನಿರ್ದಿಷ್ಟಕಾಲ ತಡೆಹಿಡಿಯುತ್ತಿರುವುದು ಇತ್ತೀಚಿನ ದುಷ್ಟ ತಂತ್ರ. ಅಂಕಿತ ನೀಡುವ ಈ ಅಧಿಕಾರವನ್ನು ರಾಜ್ಯಪಾಲರು ಅಸ್ತ್ರವನ್ನಾಗಿ ಬಳಸತೊಡಗಿದ್ದಾರೆ. ಈ ತಂತ್ರವನ್ನು ಅಕ್ರಮ, ಸಂವಿಧಾನಬಾಹಿರವೆಂದು ಸಾರುವಂತೆ ಹಲವು ರಾಜ್ಯ ಸರ್ಕಾರಗಳ ಅಹವಾಲುಗಳನ್ನು ಸುಪ್ರೀಮ್ ಕೋರ್ಟ್ ಆಲಿಸತೊಡಗಿದೆ.

ಕೇರಳ ವಿಧಾನಸಭೆ ಅಂಗೀಕರಿಸಿದ ಕೆಲ ವಿಧೇಯಕಗಳು ಎರಡು ವರ್ಷಗಳಿಗೂ ಮೀರಿ ತಿರುವನಂತಪುರದ ರಾಜಭವನದಲ್ಲಿ ಧೂಳು ಹಿಡಿಯುತ್ತಿವೆ. ಇಷ್ಟು ದೀರ್ಘಕಾಲ ಅಂಗೀಕಾರ ನೀಡದೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವುಗಳನ್ನು ಬಾಕಿ ಇರಿಸಿಕೊಳ್ಳಲು ಕಾರಣಗಳೇ ಇಲ್ಲ. ಅಗತ್ಯವಿದ್ದರೆ ಸ್ಪಷ್ಟೀಕರಣಗಳನ್ನು ಕೇಳಬಹುದು, ವಿಧಾನಸಭೆಗೆ ವಾಪಸು ಕಳಿಸಬಹುದು ಇಲ್ಲವೇ ರಾಷ್ಟ್ರಪತಿಯವರ ಅಂಕಿತಕ್ಕೆ ರವಾನಿಸಬಹುದು. ನ್ಯಾಯಬದ್ಧ ಕಾರಣವಿಲ್ಲದೆ ಅವುಗಳನ್ನು ತಡೆದು ಇರಿಸಿಕೊಳ್ಳುವುದು ಮತದಾರರ ಆಯ್ಕೆಗೆ ಮಾಡುವ ಅವಹೇಳನ.

ಸಂವಿಧಾನದ 200ನೆಯ ಪರಿಚ್ಛೇದವು ರಾಜ್ಯಪಾಲರಿಗೆ ಮೂರು ಆಯ್ಕೆಗಳನ್ನು ನೀಡಿದೆ. ಅಂಕಿತ ಹಾಕುವುದು, ರಾಷ್ಟ್ರಪತಿಯವರಿಗೆ ಕಳಿಸುವುದು ಹಾಗೂ ಮೂರನೆಯದಾಗಿ ಒಪ್ಪಿಗೆಯನ್ನು ತಡೆಹಿಡಿದು ಟೀಕೆ ಟಿಪ್ಪಣಿಗಳ ಸಹಿತ ವಿಧಾನಮಂಡಲಕ್ಕೆ ಆದಷ್ಟೂ ಶೀಘ್ರವಾಗಿ ವಾಪಸು ಕಳಿಸುವುದು. ಹೀಗೆ ವಾಪಸು ಕಳಿಸಿದ ವಿಧೇಯಕವನ್ನು ವಿಧಾನಮಂಡಲ ಮತ್ತೊಮ್ಮೆ ಅಂಗೀಕರಿಸಿ ಕಳಿಸಿದರೆ ಅದಕ್ಕೆ ಅಂಕಿತ ಹಾಕದೆ ರಾಜ್ಯಪಾಲರಿಗೆ ಬೇರೆ ದಾರಿಯೇ ಇಲ್ಲ. ಶಾಸನಗಳನ್ನು ರೂಪಿಸುವ ಅಥವಾ ತಿರಸ್ಕರಿಸುವ ಅಧಿಕಾರ ಶಾಸನಸಭೆಗಳಿಗೇ ಮೀಸಲು. ಈ ಮಾತನ್ನು ಸುಪ್ರೀಮ್ ಕೋರ್ಟ್ ಹಲವು ಸಲ ಹೇಳಿದೆ.

ಆದರೂ ಇಂದಿನ ಬಹುತೇಕ ರಾಜ್ಯಪಾಲರು ರಾಜ್ಯದ ಹಿತಕ್ಕಿಂತ ತಮ್ಮನ್ನು ನೇಮಕ ಮಾಡಿದ ರಾಜಕೀಯ ಪಕ್ಷದ ಹಿತವನ್ನೇ ಕಾಯುತ್ತಿರುವುದು, ಪ್ರತಿಪಕ್ಷಗಳ ಸರ್ಕಾರಗಳ ಪಾಲಿಗೆ ಅಡ್ಡಗಲ್ಲಾಗಿ ನಿಲ್ಲುವ ಧೋರಣೆ ಅಂತ್ಯಗೊಳ್ಳಬೇಕು. ಇಂದಿರಾಗಾಂಧೀ ಕಾಲದಲ್ಲೂ ಹೀಗೆಯೇ ರಾಜ್ಯಪಾಲರನ್ನು ಬಳಸಿಕೊಳ್ಳಲಾಗುತ್ತಿತ್ತು ಎಂಬ ವಾದ ಮುಂದೆ ಮಾಡಬಹುದು. ಆದರೆ ಒಂದು ತಪ್ಪನ್ನು ಉಲ್ಲೇಖಿಸಿ ಮತ್ತೊಂದು ತಪ್ಪನ್ನು ಸಮರ್ಥಿಸಿಕೊಳ್ಳಲು ಬರುವುದಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

Download Eedina App Android / iOS

X