ತಾಜ್‌ಪುರ ಆಳ ಸಮುದ್ರ ಬಂದರನ್ನು ಅಭಿವೃದ್ಧಿಪಡಿಸಲು ಕಳೆದ ವರ್ಷ ಅದಾನಿ ಬಂದರುಗಳಿಗೆ ಹಸ್ತಾಂತರಿಸಲಾಗಿದ್ದ ಒಪ್ಪಿಗೆ ಪತ್ರವನ್ನು (ಎಲ್‌ಒಐ) ವಿಸರ್ಜಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರ್ಧರಿಸಿದೆ ಎಂದು ಮಧ್ಯಮಗಳು ವರದಿ ಮಾಡಿವೆ.
ಎಲ್‌ಒಐ ಪತ್ರವು ಔಪಚಾರಿಕ ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು ಎರಡು ಅಥವಾ ಹೆಚ್ಚಿನ ವ್ಯಕ್ತಿಗಳ ನಡುವೆ ಏರ್ಪಡುವ ಪ್ರಾಥಮಿಕ ಹಂತದ ಸಮ್ಮತಿಸುವ ದಾಖಲೆಯಾಗಿದೆ.
ಮಂಗಳವಾರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯಲ್ಲಿ ಈ ಘೋಷಣೆ ಮಾಡಿದರು. ತಮ್ಮ ಸರ್ಕಾರವು 25,000 ಕೋಟಿ ರೂ. ಗಳ ತಾಜ್‌ಪುರ ಆಳ ಸಮುದ್ರ ಬಂದರು ಯೋಜನೆಗೆ ಹೊಸ ಬಿಡ್‌ಗಳನ್ನು ಕೋರುವ ಟೆಂಡರ್ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಮರುಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ.
“ತಾಜ್‌ಪುರದಲ್ಲಿ ಪ್ರಸ್ತಾವಿತ ಆಳ ಸಮುದ್ರ ಬಂದರು ಸಿದ್ಧವಾಗಿದೆ. ನೀವೆಲ್ಲರೂ ಟೆಂಡರ್‌ನಲ್ಲಿ ಭಾಗವಹಿಸಬಹುದು. ಇದು ಸುಮಾರು 25,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸುತ್ತದೆ” ಎಂದು ಬ್ಯಾನರ್ಜಿ ಹೇಳಿದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೋಲ್ಕತ್ತಾದಲ್ಲಿ ಬ್ಯಾನರ್ಜಿ ಅವರು ಅದಾನಿ ಪೋರ್ಟ್ಸ್ ಸಿಇಒ ಕರಣ್ ಅವರಿಗೆ ಎಲ್‌ಒಐಅನ್ನು ಹಸ್ತಾಂತರಿಸಿದ್ದರು. ಕೈಗಾರಿಕೋದ್ಯಮಿ ಗೌತಮ್ ಅದಾನಿ ಬೆಂಗಾಲ್ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆ 2022 ರಲ್ಲಿ ಭಾಗವಹಿಸಿ 10,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಘೋಷಿಸಿದ ಎರಡು ತಿಂಗಳ ನಂತರ ಸಮ್ಮತಿ ಪತ್ರವನ್ನು ಹಸ್ತಾಂತರಿಸಲಾಯಿತು.
ಈ ಸುದ್ದಿ ಓದಿದ್ದೀರಾ? ದೇವಸ್ಥಾನಗಳಲ್ಲಿ ಅನ್ಯ ಧರ್ಮದವರಿಗೆ ಉದ್ಯೋಗಾವಕಾಶವಿಲ್ಲ: ಆಂಧ್ರ ಹೈಕೋರ್ಟ್
ಆದಾಗ್ಯೂ, ಈ ವರ್ಷ, ಪಶ್ಚಿಮ ಬಂಗಾಳ ಸರ್ಕಾರದ ಶೋಪೀಸ್ ಔದ್ಯಮಿಕ ಸಮಾರಂಭದಲ್ಲಿ ಅದಾನಿ ಸಮೂಹದಿಂದ ಯಾವುದೇ ಪ್ರಾತಿನಿಧ್ಯ ಇರಲಿಲ್ಲ.
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಕಾಸಿಗಾಗಿ ಪ್ರಶ್ನೆ ವಿವಾದಕ್ಕೆ ಸಿಲುಕಿಸಿದ ನಂತರ ಅದಾನಿ ಒಪ್ಪಂದ ನಿರಾಕರಿಸುವ ನಿರ್ಧಾರವನ್ನು ಟಿಎಂಸಿ ಸರ್ಕಾರ ಕೈಗೊಂಡಿದೆ.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಅದಾನಿ ಸಮೂಹ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆದೇಶದ ಮೇರೆಗೆ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ವಕೀಲ ಜೈ ಅನಂತ್ ದೇಹದ್ರಾಯ್ ಅವರು ಮೊಯಿತ್ರಾ ವಿರುದ್ಧ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದರು.
ಮೊಯಿತ್ರಾ ಅವರು ಈ ಆರೋಪವನ್ನು ಕಟುವಾಗಿ ನಿರಾಕರಿಸಿದ್ದು, ಲೋಕಸಭೆಯ ನೀತಿಸಂಹಿತೆ ಸಮಿತಿ ಪ್ರಕರಣದ ವಿಚಾರಣೆ ನಡೆಸುತ್ತಿದೆ.