ಇತರ ಧರ್ಮದವರು ದೇವಸ್ಥಾನಗಳಲ್ಲಿ ಉದ್ಯೋಗ ಪಡೆಯಲು ಅರ್ಹರಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ. ಹಿಂದೂ ಧರ್ಮವನ್ನು ಅನುಸರಿಸುವವರು ಮಾತ್ರ ದೇವಾಲಯಗಳಲ್ಲಿ ಕೆಲಸ ಮಾಡಲು ಅರ್ಹರು ಎಂದು ನ್ಯಾಯಾಲಯ ಹೇಳಿದೆ.
ಶ್ರೀಶೈಲ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯು ತನ್ನನ್ನು ಹುದ್ದೆಯಿಂದ ತೆಗೆದುಹಾಕಿರುವುದನ್ನು ಪ್ರಶ್ನಿಸಿ ಪಿ ಸುದರ್ಶನ್ ಬಾಬು ಎನ್ನುವವರು ಅರ್ಜಿ ಸಲ್ಲಿಸಿದ್ದರು. ಅವರು ತಮ್ಮ ಕ್ರಿಶ್ಚಿಯನ್ ಗುರುತನ್ನು ಮರೆಮಾಚಿ ದಾಖಲೆ ಸಂಗ್ರಹಕಾರ ಹುದ್ದೆಗೆ ಅನುಕಂಪದ ಮೇಲೆ ನೇಮಕಾತಿ ಪಡೆದಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹರಿನಾಥ್ ನೂನೆಪಲ್ಲಿ ಅವರು ಇತ್ತೀಚೆಗೆ ಈ ಆದೇಶ ನೀಡಿದ್ದಾರೆ.
2002 ರಲ್ಲಿ ಎಸ್‌ಸಿ (ಮಾಲ) ಸಮುದಾಯಕ್ಕೆ ಸೇರಿದ ಸುದರ್ಶನ್ ಬಾಬು ಅವರು ಹಿಂದೂ ಎಂದು ಹೇಳಿಕೊಂಡು ಅನುಕಂಪದ ನೇಮಕಾತಿಯನ್ನು ಪಡೆದಿದ್ದರು ಎನ್ನಲಾಗಿದೆ. 2010ರಲ್ಲಿ ಚರ್ಚ್‌ವೊಂದರಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಅವರು ವಿವಾಹವಾಗಿದ್ದರು. ನಂತರ ಅವರು ಹಿಂದೂ ಎಂದು ಸುಳ್ಳು ಹೇಳಿಕೊಂಡು ಕೆಲಸ ಪಡೆದಿದ್ದಾರೆ ಎಂದು ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು.
ಲೋಕಾಯುಕ್ತರ ನೋಟಿಸ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಸುದರ್ಶನ್ ಬಾಬು ಅವರು, ತಮ್ಮ ಧರ್ಮವನ್ನು ಮರೆಮಾಚಿಲ್ಲ. ತಾವು ತಮ್ಮ ಜಾತಿ ಮತ್ತು ಮಾಲ ಪ್ರಮಾಣ ಪತ್ರಗಳನ್ನು ಹಾಜರುಪಡಿಸಿರುವುದಾಗಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾರಿ ತಪ್ಪಿಸುವ ಜಾಹೀರಾತು ನಿಲ್ಲಿಸದಿದ್ದರೆ ಭಾರೀ ದಂಡ: ಬಾಬಾ ರಾಮ್‌ದೇವ್‌ಗೆ ಸುಪ್ರೀಂ ಎಚ್ಚರಿಕೆ
ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದ ಲೋಕಾಯುಕ್ತರು ಸುದರ್ಶನ್ ಬಾಬು ಅವರ ಧರ್ಮವನ್ನು ಮುಚ್ಚಿಟ್ಟು ಕೆಲಸ ಗಿಟ್ಟಿಸಿಕೊಂಡಿರುವುದು ಪತ್ತೆಯಾಗಿದೆ ಎಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.
2012ರಲ್ಲಿ ಸುದರ್ಶನ್ ಬಾಬು ಅವರು ತಮ್ಮನ್ನು ಸೇವೆಯಿಂದ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ವಿವಿಧ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಹರಿನಾಥ್ ಅವರು, ಹೋಲಿ ಕ್ರಾಸ್ ಚರ್ಚ್‌ನ ರಿಜಿಸ್ಟರ್‌ನಲ್ಲಿ ಅರ್ಜಿದಾರರ ಧರ್ಮವನ್ನು ಕ್ರಿಶ್ಚಿಯನ್ ಎಂದು ನಮೂದಿಸಲಾಗಿದೆ ಮತ್ತು ಅದರಲ್ಲಿ ಅರ್ಜಿದಾರರ ಸಹಿ ಇದೆ ಎಂದಿದ್ದಾರೆ.
ಸುದರ್ಶನ್ ಬಾಬು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳದೆ ಮಹಿಳೆಯನ್ನು ಮದುವೆಯಾಗಿದ್ದರೆ, ಅದನ್ನು ವಿಶೇಷ ವಿವಾಹ ಕಾಯ್ದೆ, 1954 ರ ಅಡಿಯಲ್ಲಿ ನೋಂದಾಯಿಸಬೇಕು ಮತ್ತು ಕಾಯಿದೆ ಪ್ರಕಾರ ವಿವಾಹ ಪ್ರಮಾಣ ಪತ್ರವನ್ನು ಸಹ ನೀಡಬೇಕು. ಆದರೆ ಸುದರ್ಶನ್ ಬಾಬು ಪ್ರಕರಣದಲ್ಲಿ ಈ ರೀತಿ ಆಗಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.