(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)
“ನಾನು ಮನೆಗೆಲಸ ಮಾಡುವುದು ಸಾಧ್ಯ ಎಂದಾದರೆ, ಯಾವುದೇ ಪುರುಷನಿಂದಲೂ ಸಾಧ್ಯ. ಯಾಕೆಂದರೆ, ನಾನು ಮನೆಗೆಲಸ ಮಾಡುವುದು ನನ್ನ ಗರ್ಭಕೋಶದಿಂದ ಅಲ್ಲ…” – ಇಂತಹ ರಾಶಿ ಜೋಕುಗಳ ಆಗರ ‘ಲಾಫಿಂಗ್ ಮ್ಯಾಟರ್ಸ್’ ಎಂಬ ಪುಸ್ತಕ. ಪುರುಷರ ಅಹಂ ಜೊತೆಗೆ ಸ್ತ್ರೀವಾದದ ಎಡವಟ್ಟುಗಳ ಕುರಿತೂ ಹಾಸ್ಯ ಚಟಾಕಿಗಳು ಇರುವುದು ಈ ಪುಸ್ತಕದ ಸೊಗಸು
ಮಂದಿ ಹೀಗೆಯೇ ಸಾವಕಾಶವಾಗಿ ಕಾಲ ಕಳೆಯುವಾಗ ಅಥವಾ ಅದೂ ಇದೂ ಪಾರ್ಟಿಗಳಲ್ಲಿ ಸೇರಿದಾಗ, ಸಭೆ-ಸಮಾರಂಭಗಳಲ್ಲಿ ಹಗುರವಾಗಿ ಮಾತಾಡುವಾಗ – ಹಾಸ್ಯಕ್ಕಾಗಿ, ಒಮ್ಮೆ ನಕ್ಕುಬಿಡುವುದಕ್ಕಾಗಿ ಜೋಕುಗಳನ್ನು ಹೇಳುತ್ತಾರೆ. ಕೆಲವೊಮ್ಮೆ ಘನಗಂಭೀರ ಸಭೆಗಳಲ್ಲೂ ನಡುವೆ ಹಗುರವಾಗಿ ನಕ್ಕುಬಿಡುವ ಆಸೆ. ಇವುಗಳಲ್ಲಿ ಒಂದಷ್ಟು ಜೋಕುಗಳು ಹೆಣ್ಣುಮಕ್ಕಳ ಮೇಲೆಯೇ ಇರುತ್ತವೆ.
“ಹೆಂಡತಿಯರು ಮಾಫಿಯಾಗಿಂತಲೂ ಅಪಾಯಕಾರಿ ಯಾಕೆ? ಮಾಫಿಯಾಗೆ ಒಂದೋ ಹಣ ಬೇಕು, ಇಲ್ಲವೇ ಜೀವ ಬೇಕು. ಹೆಂಡತಿಯರಿಗೆ ಇವೆರಡೂ ಬೇಕು…”
ಔಷಧಿ ಅಂಗಡಿಯಲ್ಲಿ ಒಬ್ಬಾತ ಹೋಗಿ ‘ವಿಷ’ ಕೇಳುತ್ತಾನೆ, “ಡಾಕ್ಟರಿನ ಚೀಟಿ ಇಲ್ಲದೆ ಕೊಡಲಾಗುವುದಿಲ್ಲ,” ಅನ್ನುತ್ತಾರೆ ಅಂಗಡಿಯವರು. ಈತ ತಕ್ಷಣ ತನ್ನ ಮದುವೆ ಪ್ರಮಾಣ ಪತ್ರ ತೋರಿಸುತ್ತಾನೆ; ಅಂಗಡಿಯವನು ಎರಡು ಮಾತಿಲ್ಲದೆ ‘ವಿಷ’ ಕಟ್ಟಿ ಕೊಡುತ್ತಾನೆ.
ಹೆಂಡತಿಯನ್ನು ನಿಭಾಯಿಸುವುದು ಹೇಗೆ ಅಂತ ಯಾರೋ ಗೂಗಲ್‍ನಲ್ಲಿ ಹುಡುಕುತ್ತಿದ್ದರಂತೆ. ಆಗ ಗೂಗಲ್ ಹೇಳಿದ್ದು – “ನಿಮಗೆ ಒಳಿತಾಗಲಿ… ನಾವೂ ಇನ್ನೂ ಹುಡುಕುತ್ತ ಇದ್ದೇವೆ.”
…ಎಲ್ಲ ತಮಾಷೆಯೇ; ಮಹಿಳೆಯರ ಹರಟೆ, ಅಲಂಕಾರ, ಉಡುಗೆ-ತೊಡುಗೆ, ಹೊಸ ರುಚಿ, ಒನಪು-ವೈಯ್ಯಾರ, ಡ್ರೈವಿಂಗ್… ಎಲ್ಲದಕ್ಕೂ ಜೋಕುಗಳು ಇವೆ. ಅಷ್ಟೇ ಅಲ್ಲ, ಹೆಣ್ಣುಮಕ್ಕಳ ಕಣ್ಣೀರು ಕೂಡ ತಮಾಷೆಯ ವಸ್ತುವೇ. ಹಗಲೆಲ್ಲ ಹೆಂಡತಿಗೆ ಬಡೀತಾರೆ, ಲಟ್ಟಣಿಗೆ ಹಿಡಿದು ಬಡಿವ ಹೆಣ್ಣಿನ ಕತೆ ಕಟ್ಟಿ ನಗುತ್ತಾರೆ. ಇವನ್ನು ಕೇಳಿಸಿಕೊಳ್ಳುವ ಮಹಾನ್ ಪ್ರೇಕ್ಷಕರು ‘ಹಹ್ಹಾ… ಹೊಹ್ಹೋ’ ಅಂತ ಎದ್ದು ಬಿದ್ದು ನಗುತ್ತಾರೆ. ಮಹಿಳೆಯರಿಗೆ ಕಸಿವಿಸಿಯಾದರೂ ತೋರಿಸಿಕೊಳ್ಳದೆ ಆ ಹೊತ್ತಿನ ಅಗತ್ಯಕ್ಕೆ ತಕ್ಕಂತೆ ಇದ್ದುಬಿಡುತ್ತಾರೆ. ಸಂಕೋಚ, ಅವಮಾನಗಳನ್ನೂ ಮಂದಹಾಸದ ಒಳಗೆ ಅಡಗಿಸಿಬಿಡುತ್ತಾರೆ. “ಇರಲಿ ಬಿಡಿ… ಇದಕ್ಕೆ ಪ್ರತಿಭಟನೆ ಕೊಟ್ಟು ವಾತಾವರಣ ಕಲಕುವುದು ಸರಿಯಲ್ಲ,” ಅಂತ ಅಸಹಾಯಕತೆಯನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಕೆಲವೊಮ್ಮೆ ಅರ್ಥವೇ ಆಗದಂತೆ ಸುಮ್ಮನಿದ್ದು ನಗುವವರ ಸಂತೋಷವನ್ನು ಹೆಚ್ಚಿಸುವುದೂ ಇದೆ. ಇಂತಹ ಜೋಕುಗಳಿಗೆ ‘ಹಹ್ಹಾ’ ಅಂತ ನಗುವ ಮಹಿಳೆಯರಂತೂ ಕಡಿಮೆ ಅಂತ ಅಂದುಕೊಂಡಿದ್ದೇನೆ.
ಇರಲಿ, ಈಗ ಇದಕ್ಕೆ ವ್ಯತಿರಿಕ್ತವಾದ ಕೆಲವು ಸಂಗತಿಗಳನ್ನು ನೋಡಬೇಕು. “ಯಾವುದಾದರೂ ಗುಟ್ಟು ಎಲ್ಲ ಕಡೆ ಡಂಗುರ ಸಾರಬೇಕಾದರೆ ಹೆಣ್ಣುಮಕ್ಕಳ ಕಿವಿಗೆ ಬಿತ್ತಿದರೆ ಸಾಕು…” ಎಂಬುದು ಒಂದು ವ್ಯಂಗ್ಯಭರಿತ ಹಾಸ್ಯ. ಆದರೆ, ಹೆಣ್ಣುಮಕ್ಕಳ ಒಡಲೊಳಗೆ ಬಚ್ಚಿಟ್ಟಿರುವ ರಹಸ್ಯಗಳು ಇವರಿಗೆ ಗೊತ್ತಾದರೆ ತಡೆದುಕೊಳ್ಳಬಲ್ಲರೇ…? ಹಾರ್ಟ್ ಪಂಕ್ಚರ್ ಅಷ್ಟೇ!
ದೆಹಲಿಯ ‘ಜಾಗೋರಿ’ ಎಂಬ ಸಂಸ್ಥೆ ಹೊರತಂದ ‘ಲಾಫಿಂಗ್ ಮ್ಯಾಟರ್ಸ್’ ಎಂಬ ಪುಸ್ತಕ ಕೈಗೆ ಸಿಕ್ಕಿದ್ದೇ, ಪುರುಷ ಅಹಂಗೆ ಸವಾಲು ಒಡ್ಡಲು ಸರಿಯಾದ ಪರಿಕರ ಸಿಕ್ಕ ಹಾಗೆ ಅನಿಸಿತ್ತು. ಈ ಪುಸ್ತಕದ ಸೊಗಸು ಏನೆಂದರೆ, ಇದರಲ್ಲಿ ಪುರುಷ ಅಹಂಗೆ ಮಾತ್ರವಲ್ಲ, ಸ್ತ್ರೀವಾದದ ಎಡವಟ್ಟುಗಳಿಗೂ ಸಂಬಂಧಿಸಿದಂತೆ ಹಾಸ್ಯ ಚಟಾಕಿಗಳು ಇವೆ. ಉದಾಹರಣೆಗೆ, “ನಾವು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಬೇಕು ಅಂತ ಹೊರಟವರು, ಆದರೆ ನಾವು ಸಾಧಿಸಿದ್ದು ಸಾಮೂಹಿಕ ನಿಷ್ಕ್ರಿಯತೆಯನ್ನು…” ಅಂತ ತಮಗೆ ತಾವೇ ಹೇಳಿಕೊಳ್ಳುತ್ತಾರೆ. ಏನೇ ಇರಲಿ, ಈ ಪುಸ್ತಕದಲ್ಲಿ ಇರುವ ಹಾಸ್ಯ ಚಟಾಕಿಗಳನ್ನು ಓದುವಾಗ ಒಂದಷ್ಟು ಹೆಣ್ಣುಮಕ್ಕಳು ಸೇರಿಕೊಂಡು ಮಸ್ತ್ ಮಜಾ ಮಾಡಿದ ಹಾಗೆ ಕಾಣುತ್ತದೆ. ಹೊಸತಾಗಿ ಸಿಕ್ಕ ಈ ಪರಿಕರವನ್ನು ಬತ್ತಳಿಕೆಯಲ್ಲಿ ಸಿಗಿಸಿಕೊಂಡು ಒಂದು ತರಬೇತಿಯಲ್ಲಿ ಮಸ್ತಾಗಿ ಪ್ರಯೋಗ ಮಾಡಿದೆ.
ಪುರುಷರೇ ಹೆಚ್ಚು ಸಂಖ್ಯೆಯಲ್ಲಿದ್ದ ತರಬೇತಿ ಅದು. ಮಹಿಳೆಯರಿಗೆ ತಾವು ‘ಸ್ವಾತಂತ್ರ್ಯ ಕೊಡಬೇಕು’ ಎಂಬ ನಂಬಿಕೆ ಇದ್ದವರೂ ಹೌದು, ಈ ಹಿಂದೆ ಸೂಚಿಸಿದ ಚಿಕ್ಕ-ಪುಟ್ಟ ಜೋಕುಗಳಿಗೆ ತಲೆಕೆಡಿಸಿಕೊಳ್ಳದೆ ನಗುವವರೂ ಹೌದು. ಪುಸ್ತಕದಲ್ಲಿ ಇದ್ದ ಹಾಸ್ಯ ಚಟಾಕಿಗಳನ್ನು ಚೀಟಿಗಳಲ್ಲಿ ಬರೆದು, ಪ್ರತಿಯೊಬ್ಬರ ಕೈಗೂ ಒಂದೊಂದು ವಿತರಿಸಿದೆ. ಅನಿಸಿಕೆ ಹೇಳುವಂತೆ ಮೊದಲೇ ತಿಳಿಸಿದ್ದೆ. ಓದಿದ ಮೇಲೆ ಘನಘೋರ ಮೌನ. ಹೆಚ್ಚಿನವರ ಮುಖದಲ್ಲಿ ಅರ್ಥವಾಗದ ಚಡಪಡಿಕೆ, ಒಪ್ಪಿಕೊಳ್ಳಲಾರದ ತಳಮಳ, ಸಣ್ಣಕ್ಕೆ ಶಾಕ್ ಹೊಡೆದಂತಹ ಮುಖಭಾವ ಕಾಣುತ್ತಿತ್ತು. ಕೆಲವೇ ಕೆಲವು ತುಟಿಗಳಂಚಿನಲ್ಲಿ ಸಣ್ಣಕ್ಕೆ ನಗು ಮಿಂಚಿದ್ದೂ ಇತ್ತು. ರೂಢಿಗೆ ಹೊರತಾದ ಒಂದೊಂದು ಮಾತುಗಳನ್ನೂ ಗಹನವಾಗಿ ಗ್ರಹಿಸಬೇಕಾಗಿತ್ತು… ಸುಲಭವಿರಲಿಲ್ಲ; ನನ್ನೊಳಗೆ ನಿಜಕ್ಕೂ ತುಂಟತನ ಕುಣಿದಾಡುತ್ತಿತ್ತು.
“ಪುರುಷನಿಲ್ಲದ ಒಬ್ಬ ಮಹಿಳೆಯ ಜೀವನ ಹೇಗಿರುತ್ತದೆ?” …ಬೈಸಿಕಲ್ ಇಲ್ಲದ ಒಂದು ಮೀನಿನಂತೆ… (ತಾಳ-ಮೇಳ ಇಲ್ಲದ ಹಾಗೆ ಕಾಣುತ್ತದೆ ಅಲ್ಲವೇ? ಬೈಸಿಕಲ್ ಇಲ್ಲವಾದರೆ ಮೀನಿಗೇನು ತೊಂದರೆ!)
ಗಂಡ ಸತ್ತ ಸುದ್ದಿ ತಿಳಿದ ತಕ್ಷಣ ಮಹಿಳೆಯೊಬ್ಬಳು, “ಅಬ್ಬಾ… ಸದ್ಯ, ಸತ್ತದ್ದು ನನ್ನ ಹಸು ಅಲ್ಲವಲ್ಲ…” ಅಂತ ಸಮಾಧಾನದ ಉಸಿರು ಎಳೆದಳು. (ಶಾಂತಂ ಪಾಪಂ… ಗಂಡನ ಬಗ್ಗೆ ಹೀಗೆ ಯೋಚಿಸುವುದೇ!)
“ಒಳ್ಳೆಯ ಹುಡುಗಿಯರು ಸ್ವರ್ಗಕ್ಕೆ ಹೋಗುತ್ತಾರೆ; ಹಾಗಾದರೆ ಉಳಿದವರು? ತಮಗೆ ಎಲ್ಲಿ ಹೋಗಬೇಕು ಅನಿಸುತ್ತದೋ ಅಲ್ಲಿಗೆ ಹೋಗುತ್ತಾರೆ. (ಛೇ… ಏನು ಕತೆ, ಸ್ವರ್ಗಕ್ಕೇ ಸವಾಲೇ!)
“ನಾನು ಮನೆಗೆಲಸ ಮಾಡುವುದು ಸಾಧ್ಯ ಎಂದಾದರೆ, ಯಾವುದೇ ಪುರುಷನಿಂದಲೂ ಸಾಧ್ಯ. ಯಾಕೆಂದರೆ, ನಾನು ಮನೆಗೆಲಸ ಮಾಡುವುದು ನನ್ನ ಗರ್ಭಕೋಶದಿಂದ ಅಲ್ಲ…” (ಅರೆರೆ… ಎಂತಹ ಸರಳ ಸತ್ಯ; ಇಂದಿನವರೆಗೂ ಯೋಚಿಸಿರಲಿಲ್ಲವಲ್ಲ!)
“ದೇವರು ಪುರುಷನನ್ನು ಮೊದಲು ಸೃಷ್ಟಿಸಿದ. ಯಾಕೆಂದರೆ ಮೇರು ಕಲಾಕೃತಿಯನ್ನು ರೂಪಿಸುವ ಮೊದಲು ಒಂದು ಕರಡು ಬೇಕಲ್ಲವೇ, ಅದಕ್ಕೆ…” (ಓಹ್, ತಾನು ಬರೇ ಕರಡೇ…!)
“ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಸೋತು ಸುಣ್ಣವಾದ ಮಹಿಳೆ ಇರುತ್ತಾಳೆ… ಪ್ರತಿಯೊಬ್ಬ ಮಹಾ ಪುರುಷನ ಹಿಂದೆ ಒಬ್ಬ ಆಶ್ಚರ್ಯಚಕಿತ ಮಹಿಳೆ ಇರುತ್ತಾಳೆ. ಪ್ರತಿಭೆ ಇದ್ದು ಮೇಲೆ ಬರದೇ ಉಳಿದ ಪ್ರತಿಯೊಬ್ಬ ಮಹಿಳೆಯ ಹಿಂದೆ ಒಬ್ಬ ಪುರುಷ ಇರುತ್ತಾನೆ.” (ಇಷ್ಟು ಸಮಯ ಬೇರೆಯೇ ವರಸೆ ಇತ್ತಲ್ಲ… ಇದು ಹೀಗಾ?)
ಗಂಡ ಹೇಳುತ್ತಾನೆ, “ಶುಭರಾತ್ರಿ ನನ್ನ ಹೆಂಡತಿಯೇ ಹಾಗೂ ಮೂವರು ಮಕ್ಕಳ ತಾಯಿಯೇ…” ಅದಕ್ಕೆ ಹೆಂಡತಿಯ ಉತ್ತರ – “ಶುಭರಾತ್ರಿ ನನ್ನ ಗಂಡನೇ ಹಾಗೂ ಒಂದು ಮಗುವಿನ ತಂದೆಯೇ…” (ಅಯ್ಯಯ್ಯೋ… ಅವನಿಗಿನ್ನು ರಾತ್ರಿ ಶುಭವಾಗಿರಲು ಹೇಗೆ ಸಾಧ್ಯ? ಅಬ್ಬಾ ಕೆಟ್ಟ ಹೆಂಗಸೇ…)
“ಪುರುಷರಿಗೆ ಸಮಾನರೆನಿಸಿಕೊಳ್ಳಬೇಕೆಂದರೆ ಮಹಿಳೆಯರು ಅವರ ಎರಡು ಪಟ್ಟು ಸಾಧನೆ ಮಾಡಿ ತೋರಿಸಬೇಕಾಗುತ್ತದೆ, ಅದೃಷ್ಟವಶಾತ್ ಅದೇನೂ ಕಷ್ಟವಲ್ಲ…” (ಅದಕ್ಕೇ ಅಲ್ಲವೇ ಅವಕಾಶವನ್ನೇ ಕೊಡದಿರುವುದು…)
…ಇಂತಹ ಮತ್ತೂ ಒಂದಷ್ಟು ಇದ್ದವು. ಮಹಿಳೆಯರನ್ನು ಲೇವಡಿ ಮಾಡುವ ಜೋಕುಗಳಿಗೆ ಧಾರಾಳವಾಗಿ ನಗುವವರಿಗೆ ಈ ಹೇಳಿಕೆಗಳು ನಗು ತರಿಸಲಿಲ್ಲ. ಒಂದು ಮಂದಹಾಸವೂ ಮೂಡಲಿಲ್ಲ. ವಾತಾವರಣ ಗಂಭೀರವಾಗಿತ್ತು. ಖಂಡಿತವಾಗಿ ಪುರುಷರನ್ನು ಅವಹೇಳನ ಮಾಡುವುದು ಇದರ ಉದ್ದೇಶವಾಗಿರಲಿಲ್ಲ. ಮುಖದ ಎದುರು ಕನ್ನಡಿ ಹಿಡಿಯಬೇಕಾಗಿತ್ತು. ಇತರರ ಬಗ್ಗೆ… ಅಯ್ಯೋ ಇತರರು ಯಾಕೆ, ತಮ್ಮದೇ ಅಕ್ಕ, ತಂಗಿ, ಹೆಂಡತಿ, ತಾಯಿ, ಸ್ನೇಹಿತರ ಬಗ್ಗೆ ಮಂದಿ ಎದುರು ನಿತ್ಯವೂ ಅವಹೇಳನಕಾರಿ ಜೋಕುಗಳನ್ನು ಆರಾಮವಾಗಿ ಹರಿಯಬಿಡುತ್ತಾರಲ್ಲ, ಆವಾಗ ಏನೂ ಅನಿಸುವುದಿಲ್ಲವಲ್ಲ – ಅದು ಉಲ್ಟಾ ಹೊಡೆದಾಗ ಹೇಗಿರುತ್ತದೆ ಅನ್ನುವುದನ್ನು ತೋರಿಸಿಕೊಡಬೇಕಾಗಿತ್ತು. ಆದರೆ ಒಂದು ವಿಷಯ, ಈ ಅನಿರೀಕ್ಷಿತ ಶಾಕನ್ನು ಎದುರಿಸಿ ಸತ್ಯ ಅರಗಿಸಿಕೊಳ್ಳುವುದಕ್ಕೂ ಒಂದು ತಾಕತ್ತು ಬೇಕು. ಇಲ್ಲವಾದರೆ ಒಮ್ಮೆ ಪೆಚ್ಚುಪೆಚ್ಚಾಗಿ ಆಮೇಲೆ, ಕೆಳಗೆ ಬಿದ್ದರೂ ಮೀಸೆ ಮೇಲೆ ಅಂತಾರಲ್ಲ ಹಾಗೆ ಸಮರ್ಥನೆಗಳನ್ನು ಕಟ್ಟತೊಡಗುತ್ತಾರೆ. ಇಂತಹ ಸ್ಥಿತಿಯೊಳಗೂ ಎದೆಯಾಳದಲ್ಲಿ ಸತ್ಯ ಕಾಡದೆ ಇರುವುದಿಲ್ಲ.
ಇವೆಲ್ಲದರ ನಡುವೆ ಮುಕ್ತ ಮನಸ್ಸಿನ ಕೆಲವು ಪುರುಷ ಸಂಗಾತಿಗಳು ಶಾಕ್ ಅನುಭವಿಸಿ, ತಾವು ಕಂಡಿರದ ಸತ್ಯವನ್ನು ದಿಟ್ಟತನದಿಂದ ನೋಡಿ, ತಮ್ಮೊಳಗಿನ ವಿಪರ್ಯಾಸಗಳನ್ನು ಮಿಂಚಿನಂತೆ ಕಂಡುಕೊಂಡು, “ಹೋ…” ಅಂತ ನಕ್ಕು ಹಗುರಾಗುವುದು ಚಂದ ಕಂಡಿತ್ತು. ಅಪರೂಪಕ್ಕೊಮ್ಮೆ ಸಣ್ಣ ಶಾಕ್ ಟ್ರೀಟ್‍ಮೆಂಟ್ ಕೆಲಸ ಮಾಡುತ್ತದೆ ಅನಿಸಿತ್ತು.
ಒಂದಂತೂ ನಿಜ… ಇವೇ ಜೋಕುಗಳನ್ನು ಮಹಿಳಾ ಗುಂಪುಗಳ ನಡುವೆ ಹಂಚಿಕೊಂಡಾಗ ನಗುವಿನ ಹುಚ್ಚುಹೊಳೆ ಹರಿದಿತ್ತು. ವೈಷಮ್ಯ ಕಾರುವ ಭಾವವಿರಲಿಲ್ಲ; ಅನುಭವಿಸಿದ ಅವಮಾನಗಳು ಕೊಚ್ಚಿಹೋಗಿ ಮನ ಹಗುರಾಗಿ ತೇಲುವಂತಾಗಿತ್ತು.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ