ರಾಜಸ್ಥಾನದಲ್ಲಿ ಇಂದು (ನ.25, ಶನಿವಾರ) ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7.00 ಗಂಟೆಗೆ ರಾಜ್ಯದ 51000 ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಮತದಾನ ಪ್ರಾರಂಭವಾಗಿದೆ. ವೃದ್ಧರು, ಮಹಿಳೆಯರು ಸೇರಿದಂತೆ ಜನ ಮತಗಟ್ಟೆಗಳಿಗೆ ಬರುತ್ತಿದ್ದಾರೆ. ಮೊದಲ ಎರಡು ಗಂಟೆಗಳಲ್ಲಿ ಸುಮಾರು 10% ಮತದಾರರು ಮತದಾನ ಮಾಡಿದರು ಎಂದು ಮೂಲಗಳು ತಿಳಿಸಿವೆ. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಾಜಿ ಸಿಎಂ ವಸುಂಧರಾ ರಾಜೆ, ಮಾಜಿ ಉಪ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ರಾಜ್ಯ ಬಿಜೆಪಿ ಮುಖ್ಯಸ್ಥ ಸಿಪಿ ಜೋಶಿ, ಕೇಂದ್ರ ಸಚಿವ ಗಜೇಂದ್ರ ಶೇಖಾವತ್, ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಸೇರಿದಂತೆ ಹಲವು ಪ್ರಮುಖ ನಾಯಕರು ಕಣದಲ್ಲಿದ್ದಾರೆ.
ರಾಜ್ಯದ ಒಟ್ಟು 200 ಸ್ಥಾನಗಳ ಪೈಕಿ 199 ಸ್ಥಾನಗಳಲ್ಲಿ 1,862 ಅಭ್ಯರ್ಥಿಗಳ ಭವಿಷ್ಯವನ್ನು 5.25 ಕೋಟಿಗೂ ಹೆಚ್ಚು ಮತದಾರರು ನಿರ್ಧರಿಸಲಿದ್ದಾರೆ. ಅಭ್ಯರ್ಥಿಯೊಬ್ಬರು ನಿಧನರಾದ ಕಾರಣ ಒಂದು ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದೆ.
ಏಳು ಜನ ಪಕ್ಷೇತರರು ಮತ್ತು ಬಿಜೆಪಿಯ ಒಬ್ಬರು ಸೇರಿದಂತೆ 97 ಹಾಲಿ ಶಾಸಕರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ, ಆದರೆ ಪ್ರತಿಪಕ್ಷ ಬಿಜೆಪಿ ಆರು ಲೋಕಸಭಾ ಸದಸ್ಯರು ಮತ್ತು ಒಬ್ಬ ರಾಜ್ಯಸಭಾ ಸದಸ್ಯ ಹಾಗೂ 59 ಶಾಸಕರಿಗೆ ಟಿಕೆಟ್ ನೀಡಿದೆ. ದಲಿತ ಇಂಜಿನಿಯರ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಕಾಂಗ್ರೆಸ್ ಪಕ್ಷಾಂತರಿ ಶಾಸಕ ಗಿರರಾಜ್ ಮಾಲಿಂಗ ಅವರನ್ನು ಕಣಕ್ಕಿಳಿಸುವ ಬಿಜೆಪಿ ನಿರ್ಧಾರ ವಿವಾದ ಸೃಷ್ಟಿಸಿತ್ತು.
ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವ ಮೂಲಕ ‘ದಾಖಲೆ ಸೃಷ್ಟಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಮತದಾರರಿಗೆ ಕರೆ ಕೊಟ್ಟಿದ್ದಾರೆ.
ಮರುಭೂಮಿ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ಆಡಳಿತಾರೂಢ ಪಕ್ಷಕ್ಕೆ ವಿರುದ್ಧವಾಗಿ ಮತ ಹಾಕುವ ಪ್ರವೃತ್ತಿಯನ್ನು ಮುರಿಯುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ, ಬಿಜೆಪಿಯು ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ರಾಜ್ಯದಲ್ಲಿ ಮರಳುವತ್ತ ಕಣ್ಣಿಟ್ಟಿದೆ.
ಕಾಂಗ್ರೆಸ್ ವಿರುದ್ಧ ಯಾವುದೇ ಆಡಳಿತ ವಿರೋಧಿ ನಿಲುವು ಇಲ್ಲ ಮತ್ತು ಪಕ್ಷವು ರಾಜ್ಯದಲ್ಲಿ ಮತ್ತೆ ಸರ್ಕಾರ ರಚಿಸಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶನಿವಾರ ಹೇಳಿದ್ದಾರೆ. ಅಂಡರ್ ಕರೆಂಟ್ ಇದ್ದಂತೆ ತೋರುತ್ತಿದ್ದು, ಕಾಂಗ್ರೆಸ್ ಸರ್ಕಾರ ಪುನಃ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕಿ ವಸುಂಧರಾ ರಾಜೇ, ‘ಕಾಂಗ್ರೆಸ್ ಪಕ್ಷದ ವಿರುದ್ಧದ ಅಂಡರ್ ಕರೆಂಟ್ ಡಿಸೆಂಬರ್ 3 ರ ಫಲಿತಾಂಶದಲ್ಲಿ ಪ್ರತಿಬಿಂಬಿಸಲಿದೆ’ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ: ಜಾತಿ ಆಧಾರಿತ ಸಮೀಕ್ಷಾ ವರದಿಗೆ ವಿರೋಧ ಯಾಕೆ?
ಕಾಂಗ್ರೆಸ್, ಬಿಜೆಪಿ ಅಲ್ಲದೇ ಆಮ್ ಆದ್ಮಿ ಪಾರ್ಟಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಭಾರತೀಯ ಟ್ರೈಬಲ್ ಪಾರ್ಟಿ, ಭಾರತ್ ಆದಿವಾಸಿ ಪಾರ್ಟಿ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷಗಳು ಕೂಡ ಚುನಾವಣಾ ಕಣದಲ್ಲಿವೆ.