ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆದಿದೆ. ರಾಜ್ಯದಲ್ಲಿ ಒಟ್ಟು 71.64ರಷ್ಟು ಮತದಾನ ನಡೆದಿದೆ.
ಆದಾಗ್ಯೂ, ಸಿಕಾರ್ ಮತ್ತು ದೀಗ್ ಜಿಲ್ಲೆಗಳಲ್ಲಿ ಕಲ್ಲು ತೂರಾಟದ ಘಟನೆಗಳು ವರದಿಯಾಗಿದ್ದು, ಧೋಲ್ಪುರದಲ್ಲಿ ಹಿಂಸಾಚಾರ ವರದಿಯಾಗಿದೆ.
ರಾಜ್ಯದ ಒಟ್ಟು 200 ಸ್ಥಾನಗಳ ಪೈಕಿ 199 ಸ್ಥಾನಗಳಲ್ಲಿ 1,862 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವರ ಆಯ್ಕೆಗಾಗಿ ಮತದಾನ ನಡೆದಿದೆ. ಏಳು ಜನ ಪಕ್ಷೇತರರು ಮತ್ತು ಬಿಜೆಪಿಯಿಂದ ಬಂದ ಒಬ್ಬರು ಸೇರಿದಂತೆ 97 ಹಾಲಿ ಶಾಸಕರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಆದರೆ ಪ್ರತಿಪಕ್ಷ ಬಿಜೆಪಿ ಆರು ಲೋಕಸಭಾ ಸದಸ್ಯರು ಮತ್ತು ಒಬ್ಬ ರಾಜ್ಯಸಭಾ ಸದಸ್ಯ ಹಾಗೂ 59 ಶಾಸಕರಿಗೆ ಟಿಕೆಟ್ ನೀಡಿದೆ.
ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ, ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ, ಶಾಂತಿ ಧರಿವಾಲ್, ಬಿಡಿ ಕಲ್ಲ, ಭನ್ವರ್ ಸಿಂಗ್ ಭಾಟಿ, ಸಲೇಹ್ ಮೊಹಮ್ಮದ್, ಮಮತಾ ಭೂಪೇಶ್, ಪ್ರತಾಪ್ ಸಿಂಗ್ ಖಚರಿಯಾವಾಸ್, ರಾಜೇಂದ್ರ ಸೇರಿದಂತೆ ಹಲವು ಸಚಿವರು ಕಣದಲ್ಲಿದ್ದಾರೆ.
ಬಿಜೆಪಿಯಲ್ಲಿ ಪ್ರತಿಪಕ್ಷದ ನಾಯಕ ರಾಜೇಂದ್ರ ರಾಥೋಡ್, ವಿರೋಧ ಪಕ್ಷದ ಉಪನಾಯಕ ಹಾಗೂ ಮಾಜಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ, ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಸಂಸದರಾದ ದಿಯಾ ಕುಮಾರಿ, ರಾಜ್ಯವರ್ಧನ್ ರಾಥೋಡ್, ಬಾಬಾ ಬಾಲಕನಾಥ್ ಮತ್ತು ಕಿರೋಡಿ ಲಾಲ್ ಮೀನಾ ಕಣದಲ್ಲಿದ್ದಾರೆ.
ಈ ಸುದ್ದಿ ಓದಿದ್ದೀರಾ: ಪ್ರಶ್ನೆಗಾಗಿ ಲಂಚ ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಸಿಬಿಐ
ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್, ಬಿಜೆಪಿ ಅಲ್ಲದೇ ಆಮ್ ಆದ್ಮಿ ಪಾರ್ಟಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಭಾರತೀಯ ಟ್ರೈಬಲ್ ಪಾರ್ಟಿ, ಭಾರತ್ ಆದಿವಾಸಿ ಪಾರ್ಟಿ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷಗಳು ಕೂಡ ಚುನಾವಣಾ ಕಣದಲ್ಲಿವೆ.
ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.