ರಾಹುಲ್ ದ್ರಾವಿಡ್ ಅವರನ್ನು ಭಾರತ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮುಂದುವರೆಸುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಣೆ ತಿಳಿಸಿದೆ.
ರಾಹುಲ್ ದ್ರಾವಿಡ್ ಜೊತೆಗೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಸೇರಿದಂತೆ ಭಾರತದ ಸಹಾಯಕ ಸಿಬ್ಬಂದಿಯ ಗುತ್ತಿಗೆಯನ್ನು ಬಿಸಿಸಿಐ ವಿಸ್ತರಿಸಿದೆ.
ಬಿಸಿಸಿಐ ಒಪ್ಪಂದದ ಅವಧಿಯನ್ನು ನಿರ್ದಿಷ್ಟಪಡಿಸಿಲ್ಲ, ಆದರೆ ದ್ರಾವಿಡ್ ಕನಿಷ್ಠ 2024ರ ಟಿ20 ವಿಶ್ವಕಪ್ ವರೆಗೆ ಮುಂದುವರಿಯುವ ನಿರೀಕ್ಷೆಯಿದೆ.
2023 ರ ಏಕದಿನ ವಿಶ್ವಕಪ್ ಮುಕ್ತಾಯದೊಂದಿಗೆ ಈ ತಿಂಗಳ ಆರಂಭದಲ್ಲಿ ಅವರ ಕೋಚ್ ಗುತ್ತಿಗೆಯ ಅವಧಿ ಎರಡು ವರ್ಷಕ್ಕೆ ಮುಕ್ತಾಯಗೊಂಡಿತ್ತು. ದ್ರಾವಿಡ್ ಅವರನ್ನು ನವೆಂಬರ್ 2021 ರಲ್ಲಿ ಮುಖ್ಯ ಕೋಚ್ ಆಗಿ ನೇಮಿಸಲಾಯಿತು. ದ್ರಾವಿಡ್ ಅವರ ಕೋಚಿಂಗ್ ಅವಧಿಯಲ್ಲಿ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಏಕದಿನ ವಿಶ್ವಕಪ್ ಎರಡರಲ್ಲೂ ರನ್ನರ್ ಅಪ್ ಸ್ಥಾನವನ್ನು ಗಳಿಸಿತ್ತು. ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ಟೀಂ ಇಂಡಿಯಾ ಉತ್ತಮ ದಾಖಲೆಯನ್ನು ಹೊಂದಿದೆ.
”ರಾಹುಲ್ ದ್ರಾವಿಡ್ ಅವರ ದೂರದೃಷ್ಟಿ, ವೃತ್ತಿಪರತೆ ಮತ್ತು ಪಟ್ಟುಬಿಡದ ಪ್ರಯತ್ನಗಳು ಟೀಮ್ ಇಂಡಿಯಾದ ಯಶಸ್ಸಿನಲ್ಲಿ ಪ್ರಮುಖ ಆಧಾರಸ್ತಂಭಗಳಾಗಿವೆ. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ, ನೀವು ಯಾವಾಗಲೂ ಅಪಾರ ಸೂಕ್ಷ್ಮ ಪರಿಶೀಲನೆಗೆ ಒಳಪಡುತ್ತೀರಿ ಮತ್ತು ಸವಾಲುಗಳನ್ನು ಸ್ವೀಕರಿಸುವುದು ಮಾತ್ರವಲ್ಲದೆ ತಂಡವನ್ನು ಪ್ರವರ್ಧಮಾನಗೊಳಿಸುವುದಕ್ಕೆ ನಾನು ಅವರಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ. ಭಾರತೀಯ ತಂಡದ ಪ್ರದರ್ಶನಗಳು ಅವರ ಕಾರ್ಯತಂತ್ರದ ಮಾರ್ಗದರ್ಶನಕ್ಕೆ ಸಾಕ್ಷಿಯಾಗಿದೆ. ಅವರು ಮುಖ್ಯ ಕೋಚ್ ಆಗಿ ಉಳಿಯುವ ಪ್ರಸ್ತಾಪವನ್ನು ಸ್ವೀಕರಿಸಿದ್ದಕ್ಕಾಗಿ ನನಗೆ ಸಂತೋಷವಾಗಿದೆ” ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆಸೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ: ಟೀಮ್ ಇಂಡಿಯಾ ಪರ ಮೂವರ ಅರ್ಧ ಶತಕ
ಕೋಚ್ ಆಗಿ ಮುಂದುವರೆಸಿರುವ ಬಗ್ಗೆ ಹೇಳಿಕೆ ನೀಡಿರುವ ರಾಹುಲ್ ದ್ರಾವಿಡ್, “ಕಳೆದ ಎರಡು ವರ್ಷಗಳು ಟೀಂ ಇಂಡಿಯಾ ಜೊತೆಗೆ ಕಳೆದ ಕ್ಷಣಗಳು ಸ್ಮರಣೀಯವಾಗಿದೆ. ಪ್ರಯಾಣದ ಉದ್ದಕ್ಕೂ ನಾವು ಒಟ್ಟಿಗೆ ಸೋಲು ಮತ್ತು ಗೆಲುವುಗಳಿಗೆ ಸಾಕ್ಷಿಯಾಗಿದ್ದೇವೆ. ತಂಡ ನೀಡಿರುವ ಬೆಂಬಲ ಮತ್ತು ಸೌಹಾರ್ದತೆಯು ಅಸಾಧಾರಣವಾಗಿದೆ. ಡ್ರೆಸ್ಸಿಂಗ್ ರೂಮಿನಲ್ಲಿ ಒಂದು ಶಿಸ್ತನ್ನು ಅಳವಡಿಸಿಕೊಂಡಿದ್ದಕ್ಕೆ ನನಗೆ ನಿಜವಾಗಿಯೂ ಹೆಮ್ಮೆಯಿದೆ. ಇದು ಗೆಲುವಿನ ಅಥವಾ ಪ್ರತಿಕೂಲದ ಕ್ಷಣಗಳಲ್ಲಿ ಚೇತರಿಸಿಕೊಳ್ಳುವ ಒಂದು ಸಂಸ್ಕೃತಿಯಾಗಿದೆ. ನಮ್ಮ ತಂಡ ಹೊಂದಿರುವ ಕೌಶಲ್ಯ ಮತ್ತು ಪ್ರತಿಭೆ ಅಸಾಧಾರಣವಾಗಿದೆ. ಸರಿಯಾದದನ್ನು ಅನುಸರಿಸುತ್ತೇವೆ ಎಂಬ ಪ್ರಕ್ರಿಯೆ ಮತ್ತು ನಮ್ಮ ಸಿದ್ಧತೆಗಳಿಗೆ ಅಂಟಿಕೊಳ್ಳುವುದು, ಒಟ್ಟಾರೆ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರುತ್ತದೆ” ಎಂದು ಹೇಳಿದರು.
“ಈ ಅವಧಿಯಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ, ನನ್ನ ದೃಷ್ಟಿಕೋನವನ್ನು ಅನುಮೋದಿಸಿ ಬೆಂಬಲ ನೀಡಿದಕ್ಕಾಗಿ ಬಿಸಿಸಿಐ ಮತ್ತು ಆಡಳಿತ ಮಂಡಳಿಗೆ ಧನ್ಯವಾದ ತಿಳಿಸುತ್ತೇನೆ. ಇದರ ಜೊತೆಗೆ ನನ್ನ ಕುಟುಂಬದ ತ್ಯಾಗ ಮತ್ತು ಬೆಂಬಲವನ್ನು ಕೂಡ ನಾನು ಪ್ರಶಂಸಿಸುತ್ತೇನೆ. ವಿಶ್ವಕಪ್ ನಂತರ ನಾವು ಹೊಸ ಸವಾಲುಗಳನ್ನು ಸ್ವೀಕರಿಸುತ್ತಿದ್ದಂತೆ, ಶ್ರೇಷ್ಠತೆಯ ಅನ್ವೇಷಣೆಗೂ ಬದ್ಧರಾಗಿರುತ್ತೇವೆ” ಎಂದು ದ್ರಾವಿಡ್ ತಿಳಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಪುರುಷರ ಏಕದಿನ ವಿಶ್ವಕಪ್ ನಂತರ ಅವರ ಒಪ್ಪಂದದ ಅವಧಿಯನ್ನು ಮುಂದುವರೆಸುವ ಬಗ್ಗೆ ಬಿಸಿಸಿಐ ನಿರಂತರ ಚರ್ಚೆಯಲ್ಲಿ ತೊಡಗಿ ಅಧಿಕಾರಾವಧಿಯನ್ನು ಮುಂದುವರಿಸಲು ಸರ್ವಾನುಮತದಿಂದ ಒಪ್ಪಿಕೊಂಡಿತು.
ಎರಡನೇ ಅವಧಿಯ ಭಾರತದ ಮುಖ್ಯ ತರಬೇತುದಾರರಾಗಿ ದ್ರಾವಿಡ್ ಅವರಿಗೆ ಡಿಸೆಂಬರ್‌ನಿಂದ ದಕ್ಷಿಣ ಆಫ್ರಿಕಾದ ಪ್ರವಾಸ ಶುರುವಾಗಲಿದೆ. ಇದು ಡಿಸೆಂಬರ್ 10 ರಿಂದ ಮೂರು ಟಿ20, ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಅದರ ನಂತರ, ಜೂನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮೊದಲು ಭಾರತ ತಂಡ ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್‌ಗಳ ಸರಣಿಯನ್ನು ಆಡಲಿದೆ.
NEWS 🚨 -BCCI announces extension of contracts for Head Coach and Support Staff, Team India (Senior Men)
More details here – https://t.co/rtLoyCIEmi #TeamIndia
— BCCI (@BCCI) November 29, 2023