ಆರ್‌ಬಿಐ 2 ಸಾವಿರ ನೋಟುಗಳ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದು, 2023ರ ಮೇ 19ರವರೆಗೆ ವಿತರಣೆಗೊಂಡಿರುವ 3.56 ಲಕ್ಷ ಕೋಟಿ ರೂ. 2 ಸಾವಿರ ನೋಟುಗಳಲ್ಲಿ 9,760 ಕೋಟಿ ರೂ. ಮೊತ್ತದ ನೋಟುಗಳು ಬ್ಯಾಂಕಿಗೆ ಠೇವಣಿಯೂ ಆಗಿಲ್ಲ ಅಥವಾ ವಿನಿಮಯವೂ ಆಗಿಲ್ಲ ಎಂದು ತಿಳಿಸಿದೆ.
2023ರ ಮೇ 19ರವರೆಗೆ ಶೇ.97.26 ಎರಡು ಸಾವಿರ ನೋಟುಗಳು ಬ್ಯಾಂಕುಗಳಿಗೆ ವಾಪಸ್ ಆಗಿವೆ ಅಥವಾ ವಿನಿಮಯಗೊಂಡಿವೆ ಎಂದು ಆರ್‌ಬಿಐ ಮಾಹಿತಿ ನೀಡಿದೆ.
ಹಿಂಪಡಿಕೆಯ ಹೊರತಾಗಿಯೂ ಎರಡು ಸಾವಿರ ರೂ. ಮೌಲ್ಯದ ನೋಟುಗಳು ಕಾನೂನುಬದ್ಧವಾಗಿ ಚಲಾವಣೆಯಲ್ಲಿ ಮುಂದುವರೆಯಲಿವೆ.
ಈ ಸುದ್ದಿ ಓದಿದ್ದೀರಾ? ಪಂಚ ರಾಜ್ಯಗಳ ಎಕ್ಸಿಟ್ ಪೋಲ್: ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಾಧ್ಯತೆ
ಈ ಮೊದಲು ಎರಡು ಸಾವಿರ ನೋಟುಗಳ ಠೇವಣಿ ಅಥವಾ ವಿನಿಮಯಗೊಳಿಸಲು ದೇಶಾದ್ಯಂತವಿರುವ ಎಲ್ಲ ಬ್ಯಾಂಕುಗಳ ಶಾಖೆಯಲ್ಲಿ ಸೆಪ್ಟೆಂಬರ್ 30, 2023ರವರೆಗೂ ಅನುಮತಿ ನೀಡಲಾಗಿತ್ತು. ನಂತರ ಗಡುವನ್ನು ಅಕ್ಟೋಬರ್ 7, 2023ರವರೆಗೆ ವಿಸ್ತರಿಸಲಾಗಿತ್ತು.
ಆದಾಗ್ಯೂ, ಮೇ 19, 2023 ರಿಂದ, ದೇಶದ ರಿಸರ್ವ್ ಬ್ಯಾಂಕ್‌ನ 19 ವಿತರಣ ಕಚೇರಿಗಳಲ್ಲಿ 2 ಸಾವಿರ ಬ್ಯಾಂಕ್ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ಸಾರ್ವಜನಿಕರಿಗೆ ಒದಗಿಸಲಾಗಿದೆ.
ಈ ಕಚೇರಿಗಳಲ್ಲಿನ ಕೌಂಟರ್‌ಗಳಲ್ಲಿ ರೂ 2,000 ಮುಖಬೆಲೆಯ ಬ್ಯಾಂಕ್ ನೋಟುಗಳ ವಿನಿಮಯವನ್ನು ಸ್ವೀಕರಿಸುವುದಲ್ಲದೆ, ವೈಯಕ್ತಿಕ ಅಥವಾ ಸಂಸ್ಥೆಗಳಡಿಯಲ್ಲಿ ತಮ್ಮ ಬ್ಯಾಂಕ್ ಖಾತೆಯ ಮೂಲಕ ಠೇವಣಿ ಕೂಡ ಸ್ವೀಕರಿಸಲಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್, ನವದೆಹಲಿ, ಮುಂಬೈ ಸೇರಿದಂತೆ ದೇಶದ ವಿವಿಧ ನಗರಗಳ ಆರ್‌ಬಿಐನ 19 ಶಾಖಾ ಕಚೇರಿಗಳಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.