ಬೆಳಗಾವಿ | ಸಣ್ಣ ನೀರಾವರಿ ಅಧಿಕಾರಿಗಳಿಗೆ ತಲೆನೋವಾದ ಬ್ಯಾರೇಜ್ ಗೇಟ್ ಕಳ್ಳರು

0
183

ಬೆಳಗಾವಿ ಜಿಲ್ಲೆಯೊಂದರಲ್ಲೇ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ದೂದ್ ಗಂಗಾ, ವೇದಗಂಗಾ ಹೀಗೆ ಏಳು ನದಿಗಳು ಹರಿಯುತ್ತವೆ. ಮಳೆಗಾಲದ ತುಂಬಿಹರಿಯುವ ಈ ನದಿಗಳಿಗೆ ಅಡ್ಡಲಾಗಿ ಅಲ್ಲಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್ ಹಾಗೂ ಬ್ಯಾರೇಜ್‌ಗಳನ್ನು ನಿರ್ಮಿಸಲಾಗಿದೆ.

ಹೀಗೆ ನಿರ್ಮಿಸಿದ ಬ್ಯಾರೇಜ್‌ಗಳಿಗೆ 170 ಕೆಜಿಗೂ ಅಧಿಕ ತೂಕದ ಬೃಹದಾಕಾರದ ಕಬ್ಬಿಣದ ಗೇಟ್‌ಗಳನ್ನು ಅಳವಡಿಸಲಾಗಿದೆ. ಆದರೆ, ಬ್ಯಾರೇಜ್ ಗೇಟ್ ಕಳ್ಳರ ಹಾವಳಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಹೈರಾಣಾಗಿಸಿದೆ. ಈವರೆಗೂ ಬೆಳಗಾವಿ ಜಿಲ್ಲೆ ಚಿಕ್ಕೋಡಿ ಉಪವಿಭಾಗವೊಂದರಲ್ಲೇ ಸುಮಾರು 14 ಲಕ್ಷ ಮೌಲ್ಯದ 130ಕ್ಕೂ ಹೆಚ್ಚು ಬ್ಯಾರೇಜ್ ಗೇಟ್‌ಗಳು ಕಳ್ಳತನವಾಗಿವೆ.

ಮಳೆಗಾಲದಲ್ಲಿ ಗೇಟ್‌ಗಳನ್ನು ತೆಗೆದು ಹತ್ತಿರದಲ್ಲಿಯೇ ಇಡಲು ವ್ಯವಸ್ಥೆ ಮಾಡಲಾಗಿರುತ್ತೆ. ಬಹುತೇಕ ಕಡೆ ಈ ಬ್ಯಾರೇಜ್ ಗೇಟ್‌ಗಳನ್ನು ಇಡಲು ಸೂಕ್ತ ವ್ಯವಸ್ಥೆ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು 170 ಕೆಜಿಗೂ ಅಧಿಕ ತೂಕದ ಬೃಹದಾಕಾರದ ಕಬ್ಬಿಣದ ಗೇಟ್‌ಗಳನ್ನು ಕಳ್ಳತನ ಮಾಡುತ್ತಿದ್ದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಹುಕ್ಕೇರಿ ತಾಲೂಕಿನ ದಡ್ಡಿ, ಸಲಾಮವಾಡಿ, ಶೆಟ್ಟಿಹಳ್ಳಿ ಭಾಗದಲ್ಲಿ 62 ಬ್ಯಾರೇಜ್ ಗೇಟ್‌ಗಳು ಹಾಗೂ ಬಸಾಪುರ, ಮಲ್ಲಾಪುರ ಬ್ರಿಡ್ಜ್ ಕಮ್ ಬ್ಯಾರೇಜ್ ನ 65 ಗೇಟ್‌ಗಳ ಕಳ್ಳತನವಾಗಿದ್ದು, ಈ ಕುರಿತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಮೀಪದ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಇಡೀ ಬೆಳಗಾವಿ ಜಿಲ್ಲೆಯಲ್ಲಿ ಬ್ಯಾರೇಜ್ ಗೇಟ್‌ಗಳ ಕಳ್ಳತನ ಮಾಡುತ್ತಿದ್ದಾರೆ. ಕಳ್ಳರ ಪತ್ತೆಗೆ ಹಾಗೂ ಕಳ್ಳತನ ತಡೆಯಲು ಪೊಲೀಸರಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

ಕೇವಲ ಬೆಳಗಾವಿ ಅಷ್ಟೇ ಅಲ್ಲ ಪಕ್ಕದ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟದಲ್ಲೂ ಬ್ಯಾರೇಜ್ ಗೇಟ್ ಕಳ್ಳರ ಹಾವಳಿ ಹೆಚ್ಚಾಗಿದೆ. ಬರಗಾಲದ ಮಧ್ಯೆ ಬ್ಯಾರೇಜ್‌ಗಳ ಬಳಿ ನೀರು ತಡೆಯಲು ಸಹ ತೊಂದರೆ ಆಗುತ್ತಿದೆ. ಹೀಗಾಗಿ ಬ್ರಿಡ್ಜ್ ಕಮ್ ಬ್ಯಾರೇಜ್‌ಗಳ ಬಳಿ ಮಿನಿ ಗೋದಾಮು ನಿರ್ಮಿಸಿ ಗೇಟ್‌ಗಳನ್ನು ಸುರಕ್ಷಿತವಾಗಿಡಲಿ ಎಂಬುದು ಸಾರ್ವಜನಿಕರ ಆಗ್ರಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here