ನಮ್ ಜನ | ಜನರೇ ಅಭಿಮಾನಿಗಳು, ಅನ್ನದಾತರು ಎನ್ನುವ ಶಿಲ್ಪಿ ಶಿವಕುಮಾರ್

Date:

Advertisements


(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌) 

ಶಿವಕುಮಾರ್ ಮನೆಯ ಆರ್ಥಿಕ ಸ್ಥಿತಿ ಸುಧಾರಿಸಿದ್ದು ರಾಜಕುಮಾರ್ ಪ್ರತಿಮೆಗಳಿಂದ. ರಾಜಕುಮಾರ್ ಅವರ ಚಿತ್ರಗಳ ಪಾತ್ರಗಳನ್ನಾಧರಿಸಿದ ಸುಮಾರು ಹನ್ನೆರಡು ರೀತಿಯ ಶಿಲ್ಪಗಳನ್ನು ಶಿವಕುಮಾರ್ ರಚಿಸಿದ್ದಾರೆ. ‘ಮಯೂರ’ ಚಿತ್ರದ ಪಾತ್ರದ ರಾಜಕುಮಾರ್ ಪ್ರತಿಮೆ ನೋಡಿ ಪಾರ್ವತಮ್ಮನವರು, ‘ನಮ್ಮವರು ಕಣ್ಮುಂದೆ ನಿಂತಂತಾಯಿತು’ ಎಂದಿದ್ದರು!

ಬಯಲುಸೀಮೆಯ ಬರಡು ಬೇಸಾಯದ ಬಡಿದಾಟದ ಬದುಕಲ್ಲಿ ಬಿದ್ದು ಒದ್ದಾಡಬೇಕಿದ್ದ ಹಳ್ಳಿಹೈದನೊಬ್ಬ ಸೃಜನಶೀಲ ಕಲಾವಿದನಾಗಿ ಅರಳಿನಿಂತ ಕತೆ ಇದು. ಮಣ್ಣಿನೊಂದಿಗೆ ಬದುಕು ಬೆಸೆದುಕೊಂಡು ಬೇಸಾಯದಲ್ಲಿ ಬೇಯಬೇಕಿದ್ದ ‍ಇವರು, ಇವತ್ತು ಆ ಮಣ್ಣು ಬಿಟ್ಟು, ಈ ಮಣ್ಣು ತುಳಿಯುತ್ತ, ಈ ಮಣ್ಣಿಗೆ ಮೂರ್ತರೂಪ ಕೊಡುತ್ತ, ಭಾವ-ಜೀವ ತುಂಬುತ್ತ, ನೋಡಿದವರನ್ನು ನಿಬ್ಬೆರಗಾಗಿಸುವ ಶಿಲ್ಪಗಳನ್ನು‌ ನಿರ್ಮಿಸುತ್ತ ನಾಡಿನ ನಿಜಕಲಾವಿದರಾಗಿ ಮೈದಳೆದು ನಿಂತಿದ್ದಾರೆ. ಅವರೇ ಕಲಾವಿದ ಬಿ ಸಿ ಶಿವಕುಮಾರ್.

ಶಿವಕುಮಾರ್ ಪೋಷಕರು ನಾಗಮಂಗಲ ತಾಲೂಕಿನ ಬೇಗಮಂಗಲದವರು. ಬದುಕು ಅರಸಿ ಬೆಂಗಳೂರಿಗೆ ವಲಸೆ ಬಂದವರು. ಅಪ್ಪ ಎಲ್ಐಸಿಯಲ್ಲಿ ಕ್ಲರ್ಕ್ ಆದರು; ಅಮ್ಮ ಹಸು ಸಾಕಿ ಹಾಲು ಕರೆದು, ಸಂಸಾರ ಸರಿದೂಗಿಸಿದರು. ಇವರ ಆರು ಮಕ್ಕಳಲ್ಲಿ ಒಬ್ಬರಾದ ಶಿವಕುಮಾರ್ ಹುಟ್ಟಿ ಬೆಳೆದದ್ದು ಶ್ರೀನಗರದಲ್ಲಿ. ಚಿಕ್ಕಂದಿನಿಂದಲೂ ಚಿತ್ರ ಬಿಡಿಸುವುದು ಗೀಳಾಗಿತ್ತು. “ನಾಲ್ಕನೇ ಕ್ಲಾಸಿನಲ್ಲಿರುವಾಗ ಚಿತ್ರ ಬರೀಲಿಕ್ಕೆ ಶುರು ಮಾಡಿದೆ. ಮೊದಲಿಗೆ ಸಿನೆಮಾ ಟೈಟಲ್ ಬರೆದೆ, ಸಿನೆಮಾ ನಟರ ಚಿತ್ರ ಬಿಡಿಸಿದೆ. ಸ್ನೇಹಿತರು ಬೆನ್ನು ತಟ್ಟಿದರು. ಅದೇ ವಿಶ್ವಾಸ ನನ್ನನ್ನು ಇಲ್ಲಿಯವರೆಗೂ ಕರೆದುಕೊಂಡು ಬಂದಿದೆ,” ಎನ್ನುತ್ತಾರೆ ಶಿವಕುಮಾರ್.

Advertisements

ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಶಿವಕುಮಾರ್, ಎಸ್ಸೆಸೆಲ್ಸಿ ಆದಮೇಲೆ ಚಿತ್ರಕಲೆ ಕಲಿಯಬೇಕೆಂದು ಆಸೆಪಟ್ಟರು. ಆದರೆ ಅಪ್ಪ, “ಬಡವರು ಕಣಪ್ಪ… ಅನ್ನ ಸಿಗೋದ್ ಓದಪ್ಪ,” ಅಂದರು. ಹಾಗಾಗಿ ಬಿ.ಕಾಂ ಮಾಡಿದರು. ಕೆಲಕಾಲ ಹನುಮಂತನಗರ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ ಕ್ಲರ್ಕ್ ಕಮ್ ಟೈಪಿಸ್ಟ್ ಆಗಿ ದುಡಿದರು. ಬಿಡುವಿನ ವೇಳೆಯಲ್ಲಿ ಸ್ನೇಹಿತರ ಆಟೋಗಳ ಹಿಂದೆ ಸಿನೆಮಾ ನಟರ ಚಿತ್ರ ಬಿಡಿಸಿದರು. ಜೊತೆಗೆ ಮದುವೆ ಮನೆಯ ಡೆಕೋರೇಷನ್, ಬ್ಯಾಕ್‌ಡ್ರಾಪ್ ರಚನೆಗಿಳಿದು ಸಂಪಾದನೆಯ ದಾರಿ ಹುಡುಕಿಕೊಂಡರು.

“ಸ್ನೇಹಿತರ ಆಟೋಗಳಿಗೆ ಚಿತ್ರ ಬಿಡಿಸ್ತಿದ್ದೆ. ಆದರೆ ಅವು ಚಿತ್ರಗಳಾಗಿರಲಿಲ್ಲ. ಅವರೇ ಕರೆದುಕೊಂಡು ಹೋಗಿ ಕಲಾಸಿಪಾಳ್ಯಂ ಕಲಾವಿದರಾದ ಕಮ್ಮಾರ್-ಹಬೀಬ್ ಮುಂದೆ ನಿಲ್ಲಿಸಿ, ಅವರು ಮಾಡೋದು ನೋಡಿ ಕಲಿ ಅಂದರು. ಎಷ್ಟೊತ್ತು ಕಾದರೂ, ಅವತ್ತು ಆ ಕಲಾವಿದರು ಚಿತ್ರ ಬಿಡಿಸಲಿಲ್ಲ. ಅದೇ ನನ್ನ ಚಾಲೆಂಜಿಂಗ್ ಪಾಯಿಂಟ್ ಆಯ್ತು. ಏನು ಓದಬೇಕು ಅಂತ ಗೊತ್ತಿಲ್ಲದ ದಿನಗಳವು. ಅದೇನನ್ನಿಸಿತೋ, ಕೆನ್ ಕಲಾಶಾಲೆಗೆ ಹೋಗಿ ಹಡಪದ್ ಅವರ ಮುಂದೆ ನಿಂತೆ, ಅವರು ತಾಯಿಯಂತೆ ತಬ್ಬಿಕೊಂಡರು. ನನ್ನ ಚಿತ್ರಾಸಕ್ತಿಗೆ ನೀರು-ಗೊಬ್ಬರ ಎರೆದರು. ಐದು ವರ್ಷ ಅಕ್ಯಾಡಮಿಕ್ಕಾಗಿ ಚಿತ್ರಕಲೆ ಕಲಿಸಿದರು. ಅವರು ಸಿಗದೆಹೋಗಿದ್ದರೆ ನನ್ನ ಜೀವನವೇ ವ್ಯರ್ಥವಾಗುತ್ತಿತ್ತು. ಅಲ್ಲಿಂದ ಮುಂದಕ್ಕೆ ಸಮಯ ವ್ಯರ್ಥ ಮಾಡದೆ ಚಿತ್ರಕಲೆಯಲ್ಲಿ ಮುಳುಗಿಹೋದೆ,” ಎಂದು ತಮ್ಮ ಆಸಕ್ತಿ ಮತ್ತು ಆಸೆಯ ಕ್ಷೇತ್ರವನ್ನು ಬಿಡಿಸಿಟ್ಟರು.

PIC 1

ಹಡಪದರ ಬಳಿ ಹೋದವರಿಗೆ ಬರೀ ಚಿತ್ರಕಲೆಯಲ್ಲ, ಓದುವ ಗೀಳನ್ನು, ವೈಚಾರಿಕ ಚಿಂತನೆಯನ್ನು, ಲೋಕ ಗ್ರಹಿಸುವ ರೀತಿಯನ್ನೂ ಕಲಿಸುತ್ತಿದ್ದರು. ಅವರಿಂದ ಕಲಿತು ಹೊರಬಂದ ತಕ್ಷಣ, ಬ್ಯಾನರ್ ಬರೆಯುವುದನ್ನು ಬಿಟ್ಟ ಶಿವಕುಮಾರ್, ಪೈಂಟಿಂಗ್ ಆರಂಭಿಸಿದರು. ಆ ಸಂದರ್ಭದಲ್ಲಿ ಗೆಳೆಯ ಮ್ಯೂರಲ್ ಆರ್ಡರ್ ಹಿಡಿದುಕೊಂಡು ಬಂದ. ಆದರೆ, ಅದನ್ನು ಮಾಡುವುದು ಗೊತ್ತಿಲ್ಲ. ಉಬ್ಬುಕಲೆ, ಶಿಲ್ಪಕಲೆ ಮಾಡಿದ್ದಿಲ್ಲ. ಇಬ್ಬರೂ ಹಿರಿಯ ಕಲಾವಿದರ ಬಳಿ ಹೋದರು. ಅವರು, ಮೂವರೂ ಸೇರಿ ಮಾಡೋಣ ಎಂದರು; ಅವರೇ ವೆಂಕಟಾಚಲಪತಿಯವರು.

“ಗಾಂಧಿ ಕಂಡ್ರೆ ಭಾರೀ ಇಷ್ಟ; ಹಾಗಾಗಿ ಶಿಲ್ಪಕಲೆಗೆ ಕೈ ಹಾಕಿದಾಗ, ಮೊದಲಿಗೆ ಗಾಂಧಿ ಪ್ರತಿಮೆ ಮಾಡಿದೆ. ನನ್ನ ಕೃತಿ ಬಗ್ಗೆ ನನಗೇ ಜಿಗುಪ್ಸೆ ಹುಟ್ಟಿತು. ಸೀದಾ ಗುರು ಚಲಪತಿಯವರಲ್ಲಿಗೆ ಹೋದೆ. ಅವರು ರೆವರೆಂಡ್ ಕಿಟ್ಟೆಲ್ ಅವರ ಏಳೂವರೆ ಅಡಿಯ ಪ್ರತಿಮೆ ತಯಾರಿಯಲ್ಲಿ ನಿರತರಾಗಿದ್ದರು. ಅದಕ್ಕೆ ಪೂರ್ವಭಾವಿಯಾಗಿ ಮಾಕೆಟ್ (ಮಿನಿಯೇಚರ್) ಮಾಡಿಕೊಂಡಿದ್ದರು. ಇಷ್ಟು ಚಿಕ್ಕ ಚಿತ್ರವನ್ನು ಹೇಗೆ ಏಳೂವರೆ ಅಡಿ ಮಾಡುತ್ತಾರೆ ಎಂಬ ಕುತೂಹಲ… ಕೇಳಿದೆ. ಅವರು ಮಗುವಿಗೆ ಹೇಳುವಂತೆ ಒಂದೊಂದೇ ಹೇಳಿಕೊಟ್ಟರು. ಅವರ ಸಹಾಯಕನಾಗಿ 1998ರಿಂದ 2004ರವರೆಗೆ- ಆರು ವರ್ಷ ಕೆಲಸ ಮಾಡಿದೆ. ಅವರ ಸೃಜನಶೀಲ ಪ್ರತಿಭೆಗೆ, ಸರಳ ಸಜ್ಜನಿಕೆಗೆ ಮಾರುಹೋದೆ. ನನಗೆ ಈ ಇಬ್ಬರು ಗುರುಗಳು ಸಿಗದೆಹೋಗಿದ್ದರೆ, ಇವತ್ತು ಇಲ್ಲಿ ನಿಂತು ಮಾತನಾಡುವ ಮನುಷ್ಯನಾಗುತ್ತಿರಲಿಲ್ಲ, ನಾಡು ಗುರುತಿಸುವಂತಹ ಕಲಾವಿದನೂ ಆಗುತ್ತಿರಲಿಲ್ಲ,” ಎಂದರು.

‍55ರ ಹರೆಯದ ಶಿವಕುಮಾರ್‌ಗೆ ಸ್ನೇಹಿತರೇ ಬಲು ದೊಡ್ಡ ಶಕ್ತಿ. ಅವರ ಪ್ರೋತ್ಸಾಹ, ಸಹಕಾರ ಹಾಗೂ ಅವರಿಂದ ಸಿಕ್ಕ ಅವಕಾಶ ಅಗಣಿತ. ಆ ಸ್ನೇಹಿತರಿಂದಲೇ ಪರಿಚಯವಾದ ಹನುಮಂತನಗರದ ಕಾರ್ಪೊರೇಟರ್ ಚಂದ್ರಶೇಖರ್, ಶಿವಕುಮಾರ್ ಮನೆಯ ಮಹಡಿ ಮೇಲಿನ ಸ್ಟುಡಿಯೋಗೆ ‍ಆಗಾಗ ಬಂದು ಹೋಗುತ್ತಿದ್ದರು. ಆ ಸಮಯದಲ್ಲಿ ಕುವೆಂಪು ಶಿಲ್ಪದ ತಯಾರಿ ನಡೆಯುತ್ತಿತ್ತು. ಅದನ್ನು ನೋಡಿದ ಚಂದ್ರಶೇಖರ್, ರಾಮಾಂಜನೇಯ ಗುಡ್ಡದ ನವೀಕರಣ ಕೆಲಸ ನಡೆಯುತ್ತಿದೆ, ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಮಾಡಿಕೊಡಿ ಎಂದರು. “ಎರಡೂವರೆ ಅಡಿಯ ಕೆಂಗಲ್ ಪ್ರತಿಮೆ ನನ್ನ ಮೊದಲ ಪ್ರತಿಮೆಯಾಯಿತು. ಆನಂತರ ಗವಿಪುರಂ ಗೆಳೆಯರು, ಗವಿಗಂಗಾಧರೇಶ್ವರ ದೇವಸ್ಥಾನದ ಮುಂದಿನ ಸರ್ಕಲ್‌ನಲ್ಲಿ ಪ್ರತಿಷ್ಠಾಪಿಸಲು ಕೆಂಪೇಗೌಡರ ಒಂಬತ್ತು ಅಡಿ ಪ್ರತಿಮೆ ಮಾಡಲು ಆರ್ಡರ್ ಕೊಟ್ಟರು. ಅದಾದಮೇಲೆ, ಚಂದ್ರಶೇಖರ್ ನಿರ್ಮಿಸಿದ ಜಿಂಕೆ ಪಾರ್ಕಿಗೆ ಜ್ಞಾನಪೀಠ ಪುರಸ್ಕೃತರು ಮತ್ತು ಕೆಂಪೇಗೌಡ, ರಾಜಕುಮಾರ್ ಪ್ರತಿಮೆಗಳನ್ನು ಮಾಡಲು ಹೇಳಿದರು. ಆ ಪ್ರತಿಮೆಗಳೇ ನನ್ನನ್ನು ನಾಡಿಗೆ ಪರಿಚಯಿಸಿ, ಪ್ರಚಾರ-ಪ್ರಸಿದ್ಧಿ ತಂದುಕೊಟ್ಟವು,” ಎಂದರು.

ಶಿವಕುಮಾರ್ ಮೊದಲು ಚನ್ನಸಂದ್ರದಲ್ಲಿ ‘ಆಕಾರ’ ಎಂಬ ಸ್ಟುಡಿಯೊ ಮಾಡಿದರು. ಬೇಡಿಕೆ ಹೆಚ್ಚಾಗುತ್ತಿದ್ದಂತೆ ದೊಡ್ಡ ಜಾಗ ಬೇಕೆಂದು ರಾಮೋಹಳ್ಳಿಗೆ ಬದಲಿಸಿದರು. ಇಪ್ಪತ್ತು ವರ್ಷಗಳ ಕಾಲ ಇವರ ಕೈಯಿಂದ ಕೆತ್ತಲ್ಪಟ್ಟ ಕೆಂಗಲ್, ಕೆಂಪೇಗೌಡ, ಕುವೆಂಪು, ಕಾರಂತ, ರಾಜಕುಮಾರ್, ಪ್ರೊಫೆಸರ್ ನಂಜುಂಡಸ್ವಾಮಿ, ಎಚ್ ನರಸಿಂಹಯ್ಯ, ಮಾಸ್ತಿ, ಡಿವಿಜಿ, ಗಾಂಧಿ, ಬುದ್ಧ, ಬಸವಣ್ಣ, ಅಂಬೇಡ್ಕರ್, ಕನಕದಾಸ, ವಿವೇಕಾನಂದ, ವಿಶ್ವೇಶ್ವರಯ್ಯ, ಸಿದ್ದಗಂಗಾ ಶ್ರೀ, ವಿಷ್ಣುವರ್ಧನ್, ಪುನೀತ್, ಅಂಬರೀಷ್, ಎಂ ಪಿ ಪ್ರಕಾಶ್, ಮರೀಗೌಡ, ವಜ್ರಮುನಿಯವರ ಶಿಲ್ಪಗಳು ರಾಜ್ಯದ ಕಲಾಪ್ರೇಮಿಗಳ ಕಣ್ತುಂಬಿ, ಮನತುಂಬಿ ಹುಡುಕಿಕೊಂಡು ಬರುವಂತೆ ಮಾಡಿವೆ. ಕೆಲವೇ ವರ್ಷಗಳ ಅಂತರದಲ್ಲಿ ನೂರಾರು ಶಿಲ್ಪಗಳು ನಿರ್ಮಾಣವಾಗಿ ನಾಡಿನ ಮೂಲೆ-ಮೂಲೆಯಲ್ಲಿ ವಿರಾಜಮಾನವಾಗಿವೆ. ಶಿವಕುಮಾರರ ಸ್ಟುಡಿಯೊ ಇವತ್ತು ವರ್ಷವೊಂಬತ್ತು ಕಾಲವೂ ಕಾಯಕದ ಕುಲುಮೆಯಾಗಿದೆ. ಹತ್ತಾರು ಕಲಾವಿದರಿಗೆ ಕೈ ತುಂಬ ಕೆಲಸ ಕೊಟ್ಟು, ಅವರ ಕುಟುಂಬಗಳಿಗೆ ಆಸರೆಯಾಗಿದೆ. ಇಷ್ಟಾದರೂ ಶಿವಕುಮಾರ್, ನಾನೂ ಅವರಲ್ಲೊಬ್ಬ ಎನ್ನುವ ವಿನಯ-ವಿವೇಕವನ್ನು ಬಿಟ್ಟಿಲ್ಲ; ಭಾರೀ ಬೇಡಿಕೆಯ ಕಲಾವಿದರಾದರೂ ಪ್ರಶಸ್ತಿ-ಪುರಸ್ಕಾರಗಳ ಬೆನ್ನುಹತ್ತಿ ಹೋಗಲಿಲ್ಲ.

two

ಶಿವಕುಮಾರ್, ಚಿತ್ರ ರಚನೆಯಿಂದ ಹಿಡಿದು ಶಿಲ್ಪಕ್ಕೆ ಜೀವ ತುಂಬುವವರೆಗೆ ತೋರುವ ತಲ್ಲೀನತೆ ಮತ್ತು ಕಾಯಕನಿಷ್ಠೆಯನ್ನು ಸ್ಟುಡಿಯೊದಲ್ಲಿದ್ದೇ ಕಣ್ತುಂಬಿಕೊಳ್ಳಬೇಕು. ವ್ಯಕ್ತಿಯ ಸಣ್ಣ-ಸಣ್ಣ ವಿವರಗಳನ್ನೂ ಸೂಕ್ಷ್ಮವಾಗಿ ಗ್ರಹಿಸಿ, ಚಿತ್ತದಿಂದ ಚಿತ್ರಕ್ಕಿಳಿಸುವ ಅವರ ಕುಸುರಿತನ ಅಳತೆಗೆ ನಿಲುಕದ್ದು. ಪದಗಳಲ್ಲಿ ಹಿಡಿದಿಡಲಾಗದ್ದು. ತಗಡಿನಿಂದ ನಿರ್ಮಿಸಿದ ಶೆಡ್‌ನಂತಿರುವ ಸ್ಟುಡಿಯೊದಲ್ಲಿ ಸಾಮಾನ್ಯ ಕೆಲಸಗಾರನಂತೆ ಮೈ-ಕೈಯನ್ನೆಲ್ಲ ಮಣ್ಣು-ಬಣ್ಣ ಮಾಡಿಕೊಂಡ ಅವರನ್ನು, “ಶಿಲ್ಪಗಳನ್ನು ತಯಾರಿಸುವುದು ಹೇಗೆ?” ಎಂದರೆ, “ಶಿಲ್ಪಗಳಲ್ಲಿ ಎರಡು ವಿಧ, ಎದೆ ಮಟ್ಟದ ಭಾವಶಿಲ್ಪ, ಪೂರ್ಣಪ್ರಮಾಣದ ಶಿಲ್ಪ. ಈ ಶಿಲ್ಪಗಳು ಮುಖ್ಯವಾಗಿ ವ್ಯಕ್ತಿಗಳದೇ ಆಗಿದ್ದು, ಹಿಂದಿನವರು ಮತ್ತು ಈಗಿನವರದಾಗಿರುತ್ತವೆ. ಈಗಿನವರದು ಫೋಟೊಗಳು ಸಿಕ್ತವೆ, ಹಿಂದಿನವರದಾದರೆ ಚರಿತ್ರೆ ಓದಬೇಕು, ಲಾವಣಿ ಕೇಳಬೇಕು, ಒಂದೊಂದೇ ವಿವರಗಳನ್ನು ತಲೆಯಲ್ಲಿ ಚಿತ್ರಿಸಿಕೊಳ್ಳಬೇಕು. ಉದಾಹರಣೆಗೆ, ಕೆಂಪೇಗೌಡರ ಒಂಬತ್ತು ಅಡಿ ಪ್ರತಿಮೆ ಮಾಡಬೇಕೆಂದರೆ, ಒಂಬತ್ತು ಅಡಿಯ ಚಿತ್ರ ಮಾಡಿಕೊಳ್ಳಬೇಕು. ದೇಹ ರಚನೆಯಲ್ಲಿ ಮೂಳೆಯ ಬದಲಿಗೆ ಕಬ್ಬಿಣದ ಸ್ಕೆಲಿಟನ್ ತಯಾರಿಸಿಕೊಳ್ಳಬೇಕು. ಬಟ್ಟೆ ತೊಡಿಸಿ, ಮಣ್ಣು ಮೆತ್ತಬೇಕು. ಇದಕ್ಕೂ ಮುಂಚೆ ಒಂದು-ಒಂದೂವರೆ ಅಡಿಯ ಮಾಕೆಟ್ ತಯಾರಿಸಿಕೊಳ್ಳಬೇಕು. ಇದು ನಮ್ಮ ಕಲ್ಪನೆಯ ಕೃತಿ. ಇದನ್ನು ಪ್ರತಿಮೆ ಮಾಡಿಸುವವರಿಗೆ ತೋರಿಸಿ, ಕರೆಕ್ಷನ್ ಇದ್ದರೆ ಸರಿಪಡಿಸಿಕೊಳ್ಳುತ್ತೇವೆ. ಆನಂತರ ನಮ್ಮ ತಲೆಯಲ್ಲಿರುವ ದೊಡ್ಡ ಕೃತಿ ಮಾಡ್ತಾ-ಮಾಡ್ತಾ ಮೈದಾಳುತ್ತದೆ. ಇಲ್ಲಿ ಅನಾಟಮಿ ಮತ್ತು ಸ್ಕೇಲಿಂಗ್ ತುಂಬಾ ಮುಖ್ಯ,” ಎನ್ನುವ ಶಿವಕುಮಾರ್, ಭಾವಶಿಲ್ಪಗಳನ್ನು (ಬಸ್ಟ್) ಫೈಬರ್‌ನಿಂದಲೂ, ಆಳೆತ್ತರದ ಕೃತಿಗಳನ್ನು ಕಂಚಿನಿಂದಲೂ ಕಡೆದು ನಿಲ್ಲಿಸಿದ್ದಾರೆ. ಅದರಲ್ಲೂ, ಕಂಚಿನ ಪ್ರತಿಮೆಗಳಿಗೆ ಶಿವಕುಮಾರ್ ಎತ್ತಿದ ಕೈ ಎನ್ನುವ ಹೆಸರು ಚಾಲ್ತಿಯಲ್ಲಿದೆ. ಯಡಿಯೂರು ಕೆರೆಯ ನಡುವೆ ನಿಲ್ಲಿಸಿರುವ ವಿವೇಕಾನಂದರ 16 ಅಡಿಯ ಕೃತಿ, ಶಿವಕುಮಾರ್ ಮಾಡಿರುವ ಅತಿ ಎತ್ತರದ ಕೃತಿ.

“ಕಂಚಿನ ಪ್ರತಿಮೆಗಳ ಫಿನಿಶಿಂಗ್‌ಗೆ ಕೆಲಸ ಜಾಸ್ತಿ. ಇದು ಶ್ರದ್ಧೆ, ಶ್ರಮ ಹಾಗೂ ಸಮಯ ಬೇಡುತ್ತೆ. ಊರಿನ ಮುಖ್ಯ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲ್ಪಡುವ ಪ್ರತಿಮೆಗಳು, ಹೆಚ್ಚು ಜನರ ದೃಷ್ಟಿಗೆ ಬೀಳುವ ಪ್ರತಿಮೆಗಳು, ಸ್ವಲ್ಪ ಹೆಚ್ಚೂಕಡಿಮೆಯಾದರೂ ಶಿಲ್ಪಿಯನ್ನು ದೂಷಣೆಯ ಶಿಲುಬೆಗೇರಿಸುವುದುಂಟು. ಆದ್ದರಿಂದ ಕಷ್ಟವಾದರೂ, ಪ್ರತಿ ಶಿಲ್ಪಕ್ಕೂ ನನ್ನ ಉಸಿರನ್ನೇ ತುಂಬಿ ತಯಾರಿಸುತ್ತೇನೆ. ಅವುಗಳಲ್ಲಿ ಜೀವಕಳೆ ಇದ್ದರೆ ನಾನು ಜೀವಂತ,” ಎನ್ನುತ್ತಾರೆ.

ಶಿವಕುಮಾರ್ ಅಜ್ಜ-ಅಪ್ಪನಿಗೂ ಕಲೆಗೂ ಯಾವ ಸಂಬಂಧವಿಲ್ಲ. ಆದರೆ, ಶಿವಕುಮಾರ್ ಅವರಲ್ಲಿದ್ದ ಆಸಕ್ತಿ, ಆ ಹಾದಿ ಬಿಟ್ಟು ಬೇರೆ ಕಡೆ ಕಾಲಿಡಲು ಬಿಡಲಿಲ್ಲ. ನಗರದಲ್ಲಿ ಹುಟ್ಟಿ ಬೆಳೆದಿದ್ದರೂ ಹೊಸಗಾಲದ ತಂತ್ರಜ್ಞಾನಕ್ಕೆ ತೆರೆದುಕೊಂಡವರಲ್ಲ. ತಮ್ಮ ಅತ್ಯದ್ಭುತ ಕಲಾಕೃತಿಗಳನ್ನು ಶೋ ಕೇಸ್ ಮಾಡಲು ವೆಬ್ಸೈಟ್, ಸೋಷಿಯಲ್ ಮೀಡಿಯಾಗಳ ಮೊರೆಹೋದವರಲ್ಲ. ಸುದ್ದಿ ಮಾಧ್ಯಮಗಳತ್ತ ಸುಳಿದವರಲ್ಲ. ವ್ಯವಹಾರಜ್ಞಾನವಂತೂ ಇಲ್ಲವೇ ಇಲ್ಲ. “ಯಾರಾದರೂ ಚೌಕಾಸಿ, ಮೋಸ ಮಾಡಿದ್ದಾರೆಯೇ?” ಎಂದರೆ, “ಬರುವವರೆಲ್ಲ ಕಲಾಪ್ರೇಮಿಗಳೇ. ಅವರು ಶಿಲ್ಪಕ್ಕಾಗುವ ಖರ್ಚು ಕೊಟ್ಟರೂ ಖುಷಿಯಿಂದ ಮಾಡಿಕೊಡುತ್ತೇನೆ. ಕೆಲವರು ಪ್ರತಿಮೆ ನೋಡಿ ಖುಷಿಯಿಂದ ಹೆಚ್ಚಿಗೆ ಕೊಡಲು ಬಂದವರೂ ಇದ್ದಾರೆ, ತೆಗೆದುಕೊಂಡಿಲ್ಲ,” ಎನ್ನುತ್ತಾರೆ ಶಿವಕುಮಾರ್.

PIC 3
ಕಲಾವಿದ ಶಿವಕುಮಾರ್ ಜೊತೆ ಲೇಖಕರು

ಕಲೆಗಳ ಬೀಡು ಕರ್ನಾಟಕ ಎಂಬ ಮಾತಿದೆ. ಆದರೆ, ಇತ್ತೀಚಿನ ವರ್ಷಗಳವರೆಗೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಬೃಹತ್ ಪ್ರತಿಮೆಗಳ ನಿರ್ಮಾಣ ಎಂದಾಕ್ಷಣ ಎಲ್ಲರೂ ಮುಂಬೈ, ಪುಣೆಯತ್ತ ನೋಡುತ್ತಿದ್ದರು. ಅದಕ್ಕೆ ಕಾರಣ, ಮುಂಬೈನ ‘ಜೆಜೆ ಸ್ಕೂಲ್ ಆಫ್ ಆರ್ಟ್ಸ್‌’ನಿಂದ ಹೊರಬಂದ ಕಲಾವಿದರು. ಇವತ್ತಿಗೂ ಕರ್ನಾಟಕದ ನಾನಾ ಭಾಗಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಬಸವಣ್ಣ, ಸಂಗೊಳ್ಳಿ ರಾಯಣ್ಣ, ಶಿವಾಜಿ ಪ್ರತಿಮೆಗಳನ್ನು ಮಾಡಿದವರು ಪುಣೆಯ ಕಲಾವಿದರೇ. ಅಷ್ಟೇ ಏಕೆ, ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಿರುವ ಕೆಂಪೇಗೌಡರ ಬೃಹತ್ ಪ್ರತಿಮೆ ಕೂಡ ಪುಣೆಯ ಅನಿಲ್ ಸುತಾರ್ ಕೃತಿ. ಈ ಬಗ್ಗೆ ಶಿವಕುಮಾರ್‌ಗೆ, “ನೀವೇ ನಿರ್ಮಿಸಬಹುದಿತ್ತಲ್ಲ?” ಎಂದರೆ, “ನೀವು ಕೇಳಿದ್ದಕ್ಕಾಗಿ ಹೇಳ್ತಿದ್ದೇನೆ, ತಪ್ಪಾಗಿ ಭಾವಿಸಬೇಡಿ… ಪ್ರತಿಮೆ ನಿರ್ಮಿಸಿದ್ದು ರಾಮ್ ಸುತಾರ್ ಅಂತಾರೆ, ಅವರಿಗೆ ಈಗ 92 ವರ್ಷ. ಅವರದೇ ಶಿವಾಜಿ ಪ್ರತಿಮೆಯ ಬಾಡಿ ಮತ್ತು ನನ್ನ ಕೆಂಪೇಗೌಡ ಪ್ರತಿಮೆಯ ಮುಖವನ್ನು ತೆಗೆದು, ಕಟ್ ಅಂಡ್ ಪೇಸ್ಟ್ ಮಾಡಿ, ಅವರ ಮಗ ಅನಿಲ್ ಸುತಾರ್ ನಿರ್ಮಿಸಿದ ಕೆಂಪೇಗೌಡ ಅದು. ಅನಿಲ್ ಕಲಾವಿದರಲ್ಲ. ಆ ಬಗ್ಗೆ ಬೇಸರವಿದೆ, ಹೇಳಿಕೊಳ್ಳುವುದು ಅಷ್ಟು ಸರಿಯಲ್ಲ, ಬಿಡಿ,” ಎಂದರು.

ಗಣ್ಯರು, ಸಾಧಕರು, ನಾಯಕರು, ಜನಪ್ರಿಯ ವ್ಯಕ್ತಿಗಳ ಪ್ರತಿಮೆ ಕಡೆದಿಡುವ ಶಿವಕುಮಾರ್, ಆ ವ್ಯಕ್ತಿಗಳು ಚರಿತ್ರೆಯಲ್ಲಿ ದಾಖಲಾಗಿರುವಂತೆ, ತಮ್ಮ ಪ್ರತಿಮೆಗಳೂ ಜನಮಾನಸದಲ್ಲಿ ಉಳಿಯುವ ಬಗ್ಗೆ ಹೆಮ್ಮೆ ಇದೆ. ಆದರೆ, ನಾನು ಮಾಡಿದ್ದು ಎಂಬ ಅಹಂ ಇಲ್ಲ. ಮೋದಿಯವರಿಂದ ಪಟೇಲ್ ಪ್ರತಿಮೆ ಪ್ರತಿಷ್ಠಾಪಿಸಲ್ಪಟ್ಟಿತು, ಮತ್ತೆ ಪ್ರತಿಮಾ ಸಂಸ್ಕೃತಿ ತಲೆ ಎತ್ತಿತು ಎಂದು ಪ್ರಜ್ಞಾವಂತರು ಹೀಗಳೆದರೆ; ಶಿವಕುಮಾರ್ ಅದನ್ನು “ಕಲಾವಿದರಿಗೆ ಕೆಲಸ ಸಿಕ್ಕಿ, ಬದುಕು ನಿಸೂರಾಯಿತು,” ಎಂದು ವ್ಯಾಖ್ಯಾನಿಸುತ್ತಾರೆ.

3 8

20 ವರ್ಷಗಳಲ್ಲಿ ನಾಡಿನ ಸಾಧಕರ ಸುಮಾರು 90 ಶಿಲ್ಪಗಳನ್ನು ನಿರ್ಮಿಸಿರುವ, ಅವು ನಾಡಿನಾದ್ಯಂತ ಪ್ರತಿಷ್ಠಿತ ಜಾಗಗಳಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ, ಪ್ರಶಂಸೆಗೊಳಗಾಗಿರುವ ಪ್ರತಿಮೆಗಳ ಕುರಿತು ಶಿವಕುಮಾರ್ ಅವರಿಗೆ ತೃಪ್ತಿ ಇದೆ. ಆದರೆ, ತಕ್ಕಮಟ್ಟಿನ ಹಣ ಸಿಕ್ಕಿದ್ದು, ಮನೆಯ ಆರ್ಥಿಕ ಸ್ಥಿತಿ ಸುಧಾರಿಸಿದ್ದು ರಾಜಕುಮಾರ್ ಪ್ರತಿಮೆಗಳಿಂದ ಎನ್ನುವುದನ್ನು ಮರೆಯುವುದಿಲ್ಲ. ರಾಜಕುಮಾರ್ ಅವರ ಚಿತ್ರಗಳ ಪಾತ್ರಗಳನ್ನಾಧರಿಸಿದ ಸುಮಾರು ಹನ್ನೆರಡು ರೀತಿಯ ಶಿಲ್ಪಗಳನ್ನು ಶಿವಕುಮಾರ್ ನಿರ್ಮಿಸಿದ್ದಾರೆ. ಒಂದೊಂದು ಕೃತಿಯೂ ನೂರಾರು ಸಲ ಕಾಪಿ ಆಗಿದೆ. ಇಂತಹ ಕಲಾಕೃತಿಗಳನ್ನು ಕಡೆದಿಟ್ಟ ಶಿವಕುಮಾರ್ ಅವರಿಗೆ, “ಖುಷಿ ಕೊಟ್ಟ ಕ್ಷಣ ಯಾವುದು?” ಎಂದರೆ, “ಕೆಲಸವೇ ಖುಷಿ. ನನ್ನ ಪುಟ್ಟ ಸ್ಟುಡಿಯೊಗೆ ಜ್ಞಾನಪೀಠ ಪುರಸ್ಕೃತರಾದ ಯು ಆರ್ ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಬಂದು ಮಾಡೆಲ್ ಆಗಿ ದಿನವಿಡೀ ನಿಂತಿದ್ದಾರೆ. ‘ಮಯೂರ’ ಚಿತ್ರದ ಪಾತ್ರದ ರಾಜಕುಮಾರ್ ಪ್ರತಿಮೆ ನೋಡಿ ಪಾರ್ವತಮ್ಮನವರು, ‘ನಮ್ಮವರು ಕಣ್ಮುಂದೆ ನಿಂತಂತಾಯಿತು’ ಎಂದಿದ್ದಾರೆ. ತಮ್ಮದೇ ಕೃತಿಗಾಗಿ ಪುನೀತ್ ರಾಜಕುಮಾರ್ ಸ್ಟುಡಿಯೊಗೆ ಬಂದು, ಕೆಲಸ ನೋಡಿ ಕೈ ಮುಗಿದಿದ್ದಾರೆ. ಅಶ್ವಾರೂಢ ಬಸವಣ್ಣನವರ ಪ್ರತಿಮೆ ನೋಡಿ, ಹೊಸಪೇಟೆಯಿಂದ ಜನ ಬಂದು ಬಿಗಿದಪ್ಪಿಕೊಂಡಿದ್ದಾರೆ. ಜನರ ಅಭಿಮಾನ ದೊಡ್ಡದು. ಅವರೇ ನನ್ನ ಅನ್ನದಾತರು. ಅವರಿಗೆ ಖುಷಿಯಾದರೆ ಅದೇ ನನ್ನ ಖುಷಿ, ಅಷ್ಟು ಸಾಕು,” ಎನ್ನುವ ಶಿವಕುಮಾರ್, ಸಾಮಾನ್ಯರಲ್ಲಿಯೇ ಸಾಮಾನ್ಯರು, ಅಸಾಮಾನ್ಯ ಕಲಾವಿದರು.

ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಚನಯಾನ | ಸನಾತನ ಧರ್ಮವು ಶರಣ ಧರ್ಮಕ್ಕೆ ಶರಣಾಗತವಾಗಿದೆ

ಶರಣರು ಸನಾತನ ಬ್ರಾಹ್ಮಣ ಧರ್ಮದ ಷಡ್ದರ್ಶನ ಪರಿಕಲ್ಪನೆಯನ್ನು ಹಾಗೂ ಸಮಯಾದಿ ಶೈವಗಳೆಲ್ಲವನ್ನು...

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

Download Eedina App Android / iOS

X