ರಾಜ್ಯ ರಾಜಧಾನಿ ಬೆಂಗಳೂರಿನ ಮಲ್ಲೇಶ್ವರ ಕಾಡು ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಿಯಲ್ಲಿ ಡಿ.3 ರಿಂದ ಡಿ.5 ರವರೆಗೆ ಕಡಲೆಕಾಯಿ ಪರಿಷೆ ಆರಂಭವಾಗಿದ್ದು, ಇನ್ನೂ ಮೂರು ದಿನಗಳ ಕಾಲ ಈ ಪರಿಷೆ ಇರಲಿದೆ.
ಶಾಸಕ ಮುನಿರತ್ನ, ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ, ಕಾಂಗ್ರೆಸ್ ಪಕ್ಷದ ಮುಖಂಡ ಅನೂಪ್ ಅಯ್ಯಂಗಾರ್ ಅವರು ಮಲ್ಲೇಶ್ವರ ಕಡಲೆಕಾಯಿ ಪರಿಷೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಉದ್ಘಾಟನೆ ಬಳಿಕ ಸಂಪಿಗೆ ರಸ್ತೆಯ ಗತವೈಭವವನ್ನು ಮರುಕಳಿಸಲು ಸಂಪಿಗೆ ರಸ್ತೆಯಲ್ಲಿ 50ಕ್ಕೂ ಅಧಿಕ ಸಂಪಿಗೆ ಗಿಡಗಳನ್ನು ನೆಡಲಾಯಿತು.
ಗಂಗಮ್ಮ ದೇವಿ ದೇವಸ್ಥಾನದ ಮುಂಭಾಗದಲ್ಲಿ 20 ಅಡಿ ಅಗಲ, 22 ಅಡಿ ಎತ್ತರದ ನಂದಿ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, 800 ಕೆಜಿ ಕಡಲೆಕಾಯಿಗಳಿಂದ ಅಲಂಕಾರ ಮಾಡಲಾಗಿದೆ.
ಭ್ರಮರಾಂಭ ಸಮೇತ ಕಾಡುಮಲ್ಲಿಕಾರ್ಜುನ ದೇವಾಲಯ ಸನ್ನಿಧಿಯಲ್ಲಿ ಮಲ್ಲೇಶ್ವರ ಕಡಲೆಕಾಯಿ ಪರಿಷೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕಳೆದ 7 ವರ್ಷಗಳಿಂದ ಕಾಡು ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ನೇತೃತ್ವದಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಮಲ್ಲೇಶ್ವರ ಕಡಲೆಕಾಯಿ ಪರಿಷೆಯು ಪ್ಲಾಸ್ಟಿಕ್ ಮುಕ್ತ ಪರಿಷೆಯಾಗಬೇಕೆಂಬ ಉದ್ದೇಶದಿಂದ ‘ಮನೆಯಿಂದ ಕೈಚೀಲ ತನ್ನಿ’ ಎಂಬ ಅಭಿಯಾನವನ್ನೂ ಹಮ್ಮಿಕೊಳ್ಳಲಾಗಿದೆ.
ಈ ವೇಳೆ ಮಾತನಾಡಿದ ಶಾಸಕ ಮುನಿರತ್ನ, “ಹಿಂದೂ ಸಂಸ್ಕೃತಿ, ಸಂಪ್ರಾದಾಯ ಅಚಾರ ವಿಚಾರ ತಿಳಿಯಬೇಕು. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿ ತಿಳಿಸಲು ಕಡಲೆಕಾಯಿ ಪರಿಷೆ ಸಾಕ್ಷಿಯಾಗಿದೆ. ಮಲ್ಲೇಶ್ವರ ಎಂದರೆ ಸಂಸ್ಕೃತಿ, ಸಂಪ್ರದಾಯಗಳ ಪ್ರತೀಕ ಮತ್ತು ಸ್ಪೂರ್ತಿದಾಯಕ ಕ್ಷೇತ್ರವಾಗಿದೆ. ಶ್ರೀ ಮಲ್ಲಿಕಾರ್ಜುನಸ್ವಾಮಿ ಆಶೀರ್ವಾದ, ಕೃಪೆ ನಾಡಿನ ಜನರಿಗೆ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.
ಕಾಡು ಮಲ್ಲೇಶ್ವರ ಗೆಳಯರ ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ಮಾತನಾಡಿ, “ಕಡಲೆಕಾಯಿ ಪರಿಷೆಯಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರ ರಾಜ್ಯಗಳಿಂದ ಬಂದ ರೈತರು 350 ಮಳಿಗೆಗಳನ್ನು ಹಾಕಿದ್ದಾರೆ. ಜನರು ಮಲ್ಲಿಕಾರ್ಜುನ ದರ್ಶನ ಪಡೆದು, ಕಡಲೆಕಾಯಿ ಪರಿಷೆಯಲ್ಲಿ ಪಾಲ್ಗೊಂಡಿದ್ದಾರೆ. ಮೂರು ದಿನಗಳ ಕಾಲ ಜರುಗುವ ಈ ಪರಿಷೆಯಲ್ಲಿ 8 ಲಕ್ಷ ಜನರು ಭಾಗವಹಿಸುವ ಸಾಧ್ಯತೆ ಇದೆ. ಆಗಮಿಸುವ ಭಕ್ತರಿಗೆ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಇದೆ. ಕಡಲೆಕಾಯಿಯನ್ನು ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತಿದೆ. ಕಡಲೆಕಾಯಿ ಪರಿಷೆಯಲ್ಲಿ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಡಿಸೆಂಬರ್, ಜನವರಿ ಹಾಗೂ ಫೆಬ್ರವರಿಯ ನಾನಾ ದಿನಾಂಕದಂದು 18 ರೈಲುಗಳ ಸಂಚಾರ ರದ್ದು: ಮಾಹಿತಿ ಇಲ್ಲಿದೆ
“ಬಸವನಗುಡಿಯಲ್ಲಿ ಜರುಗುವ ಕಡಲೆಕಾಯಿ ಪರಿಷೆಯಂತೆ ಮಲ್ಲೇಶ್ವರದಲ್ಲಿ ಆಯೋಜಿಸಲಾಗಿದೆ. 10 ನಾನಾ ಬಗೆಯ ಕಡಲೆಕಾಯಿ ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ನಾನಾ ಕರಕುಶಲ ವಸ್ತುಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ನಾಗರಿಕರು ಕಡಲೆಕಾಯಿ ಪರಿಷೆಯಲ್ಲಿ ಪಾಲ್ಗೊಳ್ಳಬೇಕು” ಎಂದು ತಿಳಿಸಿದರು.
ಸಾಂಸ್ಕ್ರತಿಕ ಕಾರ್ಯಕ್ರಮಗಳು
ಡಿ.2 ರಂದು ಸಾಯಂಕಾಲ ಜಿತ್ವಾವನ ಮಹಿಳಾ ಯಕ್ಷಗಾನ ಮಂಡಳಿ ಶೈಲಜಾ ಜೋಶಿ ಮತ್ತು ತಂಡದವರಿಂದ ಯಕ್ಷಗಾನ ನಡೆಯಲಿದೆ.
ಡಿಸೆಂಬರ್ 3ರಂದು ಬೆಳಗ್ಗೆ 11.30ಕ್ಕೆ ಪಂಚಮ ಸಂಗೀತ ತಂಡ ಎಲ್. ಶಿವಕುಮಾರ್ ಮತ್ತು ತಂಡದವರಿಂದ ಸುಗಮ ಸಂಗೀತ ಇರಲಿದೆ. ಸಾಯಂಕಾಲ ಮಧು ಮನೋಹರ್ ಮತ್ತು ಕಾರ್ತಿಕ್ ಪಾಂಡವಪುರ ತಂಡದವರಿಂದ ಗಾನ ಗಂಧರ್ವ ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಸವಿ ನೆನಪಿನಲ್ಲಿ ಮಧುರ ನೆನಪಿನಗಾನ ನಡೆಯಲಿದೆ. ನವಯುವ ಹೋಟೆಲ್ ಮಾಲೀಕರಾದ ಮೋಹನ್ ರಾವ್ ಮುಖ್ಯ ಅತಿಥಿಗಳಾಗಿ ಉಪಸ್ಥಿತಿ ಇರಲಿದ್ದಾರೆ.
ಡಿ.4 ರಂದು ಬೆಳಗ್ಗೆ 9.30ಕ್ಕೆ ಕಾಡುಮಲ್ಲಿಕಾರ್ಜುನ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ಹಾಗೂ ಪ್ರಸಾದ ವಿನಿಯೋಗ ಇರಲಿದೆ. ಸಂಜೆ 6.30ಕ್ಕೆ ಭವಾನಿ ಗಾನ ವೃಂದದವರಿಂದ ವಿದೂಷಿ ಶೈಲಜ ಶ್ರೀನಾಥ್ ಮತ್ತು ತಂಡದವರಿಂದ ಶಿವ ವೀಣಾ ಗಾನ ಸಂಗಮ ನಡೆಯಲಿದೆ. ವಿದ್ಯಾಮಂದಿರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್. ಬಾಬು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.