ಬಿಜೆಪಿಯ ಕೋಮು ರಾಜಕಾರಣದ ವಿರುದ್ಧ ಮತ್ತು ಪ್ರಜಾಪ್ರಭುತ್ವ ಭಾರತಕ್ಕಾಗಿ ಎಲ್ಲರನ್ನು ಬೆಸೆಯಲು ಡಿಸೆಂಬರ್ 6ರಿಂದ ‘ಜನ ಚೇತನ ಯಾತ್ರೆ’ ನಡೆಸಲು ಹಲವಾರು ಸಂಘಟನೆಗಳು ಮುಂದಾಗಿವೆ.
ಬಾಬರಿ ಮಸೀದಿ ಧ್ವಂಸಗೊಂಡ ದಿನವಾದ ಡಿಸೆಂಬರ್ 6ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಯಾತ್ರೆ ಆರಂಭವಾಗಲಿದೆ. ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರದ ಮೂಲಕ ಹಾದು ಡಿಸೆಂಬರ್ 20ರಂದು ಉತ್ತರ ಪ್ರದೇಶದ ಬನಾರಸ್‌ಗೆ ಯಾತ್ರೆ ತಲುಪಲಿದೆ ಎಂದು ಸಂಘಟನೆಗಳು ತಿಳಿಸಿವೆ.
ಕೋಮುವಾದದ ವಿರುದ್ಧ ಪ್ರತಿಜ್ಞೆಯನ್ನು ಕೈಗೊಳ್ಳುವುದು, ಪ್ರಜಾಪ್ರಭುತ್ವ ಭಾರತಕ್ಕಾಗಿ ಪ್ರಗತಿಪರ ಧ್ವನಿಗಳನ್ನು ಬಲಪಡಿಸುವುದು ಹಾಗೂ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ದಾಳಿಯನ್ನು ಎತ್ತಿ ತೋರಿಸುವುದು ಯಾತ್ರೆಯ ಉದ್ದೇಶವಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಆರ್‌ಎಸ್‌ಎಸ್-ಬಿಜೆಪಿಯ ಹೆಚ್ಚುತ್ತಿರುವ ಫ್ಯಾಸಿಸ್ಟ್ ಆಕ್ರಮಣ, ದೇಶದ ಸಾಮಾನ್ಯ ಜನರ ಮೇಲಿನ ನವ ಉದಾರವಾದಿ ದಾಳಿಗಳು, ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷ ಮತ್ತು ಹಿಂಸೆಗಳು,
ಜನರ ಮೇಲಿನ ಎಲ್ಲ ರೀತಿಯ ಶೋಷಣೆ, ದಬ್ಬಾಳಿಕೆ ಮತ್ತು ದಮನಗಳ ವಿರುದ್ಧ ದನಿಯನ್ನು ಒಗ್ಗೂಡಿಸುವುದು ಕಾರ್ಯ ಯಾತ್ರೆಯಲ್ಲಿ ನಡೆಯಲಿದೆ ಎಂದು ಯಾತ್ರೆಯ ನೇತಾರರು ತಿಳಿಸಿದ್ದಾರೆ.
ಯಾತ್ರೆಯಲ್ಲಿ ಅಖಿಲ್ ಹಿಂದ್ ಫಾರ್ವರ್ಡ್ ಬ್ಲಾಕ್ (ಕ್ರಾಂತಿಕಾರಿ), ಆಜಾದ್ ಗಾನ ಮೋರ್ಚಾ, ಬಿಎಎಫ್‌ಆರ್‌ಬಿ, ಬಿಹಾರ ನಿರ್ಮಾಣ ಮತ್ತು ಅಸಂಗತಿತ್ ಶ್ರಮಿಕ್ ಯೂನಿಯನ್, ಸಿಬಿಎಸ್‌ಎಸ್ (ಚಾಯ್ ಬಗನ್ ಸಂಗ್ರಾಮ್ ಸಮಿತಿ), ಸಿಸಿಐ, ಸಿಪಿಐ-ಎಂಎಲ್, ಸಿಪಿಐ-ಎಂಎಲ್(ಎನ್‌ಡಿ), ಸಿಪಿಐ-ಎಂಎಲ್, ಜನವಾಡಿ ಲೋಕ ಮಂಚ್, ಮಾರ್ಕ್ಸ್‌ವಾದಿ ಸಮನ್ವಯ ಸಮಿತಿ, ಎಂಕೆಪಿ, ನಾಗರಿಕ್ ಅಧಿಕಾರ ರಕ್ಷಾ ಮಂಚ್ ಸೇರಿದಂತೆ ಹಲವಾರು ಸಂಘಟನೆಗಳು ಭಾಗಿಯಾಗಲಿವೆ.