ಭಾರತದ ಸಂವಿಧಾನ ಸರ್ವಜನಾಂಗದ ಅಭಿವೃದ್ಧಿಯನ್ನು ಬಯಸುವ ಶ್ರೇಷ್ಠ ಗ್ರಂಥ. ಇಂತಹ ಮಹಾನ್ ಗ್ರಂಥವನ್ನು ನಾವೆಲ್ಲ ಅಧ್ಯಯನ ಮಾಡಿ, ಅದರ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಪರಿಶಿಷ್ಟ ಪಂಗಡದ ಕಲ್ಯಾಣ ಅಧಿಕಾರಿ ಮಂಜುಳಾ ಅಸುಂಡಿ ಹೇಳಿದರು.
ತಾಲೂಕಿನ ಮಸರಕಲ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ್ದ ʼಸಂವಿಧಾನದ ಕಡೆ ವಿದ್ಯಾರ್ಥಿಗಳ ನಡೆʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ನನ್ನಂತಹ ಸಾಮಾನ್ಯ ಮಹಿಳೆ ಅಧಿಕಾರಿಯಾಗಿದ್ದೇನೆ ಎಂದರೆ ಇದಕ್ಕೆ ಕಾರಣ ಸಂವಿಧಾನ. ಈ ಸಂವಿಧಾನವು ಶಾಸನಗಳನ್ನು ರೂಪಿಸುವ, ಜಾರಿಗೆ ತರುವ ಕಾರ್ಯವನ್ನು ಮಾಡುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸಂವಿಧಾನದ ಕುರಿತಾಗಿ ಜಾಗೃತಿ ಹೊಂದುವುದು ತುಂಬಾ ಅಗತ್ಯವಿದೆ” ಎಂದು ಇಂತಹ ಕಾರ್ಯಕ್ಕೆ ಮುಂದಾಗಿರುವ ಸಮತಾ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆಯನ್ನು ಅಭಿನಂದಿಸಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಎನ್‌ಐಎ ದಾಳಿ; ನಕಲಿ ನೋಟು ತಯಾರಿಸುತ್ತಿದ್ದ ವ್ಯಕ್ತಿ ಬಂಧನ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸತಿ ಶಾಲೆಯ ಪ್ರಾಂಶುಪಾಲ ಶರಣಬಸಯ್ಯ ಹಿರೇಮಠ, ಜಿಲ್ಲಾ ವಕ್ಫ್ ಮಂಡಳಿ ಸದಸ್ಯ ಅಲಿಪಾಷಾ, ರೈತ ಮುಖಂಡ ಸುನಂದಕುಮಾರ ಬಳೆ ಸೇರಿದಂತೆ ಇತರರು ಇದ್ದರು.
ವರದಿ : ಬಸವರಾಜ್ ಬ್ಯಾಗವಾಟ್