ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ತೋಗುಣಸಿ ರಸ್ತೆಗೆ ಹೊಂದಿಕೊಂಡಿರುವ ಹಾನಾಪೂರ ಎಸ್.ಪಿ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ವರ್ಷ ಶಾಸಕರಿಂದ ಉದ್ಘಾಟನೆಗೊಂಡ ಇಂದಿರಾಗಾಂಧಿ ವಸತಿ ಶಾಲೆ ಕೇವಲ ಒಂದು ವರ್ಷದೊಳಗೆ ಅವ್ಯವಸ್ಥೆಗಳ ಗೂಡಾಗಿ ಮಾರ್ಪಟ್ಟಿದೆ.
ಮೂಲಭೂತ ಸೌಲಭ್ಯಗಳ ಕೊರತೆ ಹಾಗೂ ನಿರ್ವಹಣೆಯಲ್ಲಿನ ಲೋಪಗಳಿಂದ ಬೇಸತ್ತಿರುವ ಪಾಲಕರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಿ ಅಗತ್ಯ ಸುಧಾರಣಾ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಮುರುಡಿ ಗ್ರಾಮದ ಸರ್ವೇ ನಂ.77ರಲ್ಲಿ 9.20 ಎಕರೆ ಪ್ರದೇಶದಲ್ಲಿ ಸುಮಾರು ₹22.40 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ವಸತಿ ಶಾಲೆ ನಿರ್ಮಿಸಲಾಗಿದೆ. 125 ವಿದ್ಯಾರ್ಥಿನಿಯರು ಹಾಗೂ 125 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 250 ಮಂದಿಗೆ ಶಿಕ್ಷಣ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಇದೇ ಆವರಣದಲ್ಲಿ ಪ್ರಾಚಾರ್ಯರು ಹಾಗೂ 13 ಸಿಬ್ಬಂದಿಗೆ ಪ್ರತ್ಯೇಕ ಸುಸಜ್ಜಿತ ವಸತಿ ಗೃಹಗಳನ್ನು ಸಹ ನಿರ್ಮಿಸಲಾಗಿದೆ. ಶಾಲೆಯ ಪರಿಸರ ಮತ್ತು ಮೂಲಸೌಕರ್ಯಗಳು ಆಕರ್ಷಕವಾಗಿದ್ದರೂ, ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ವೈಯಕ್ತಿಕ ವಸ್ತುಗಳ ಸುರಕ್ಷತೆಗೆ ಸಮರ್ಪಕ ವ್ಯವಸ್ಥೆ ಇಲ್ಲ ಎಂಬ ಆರೋಪವನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಮಾಡುತ್ತಿದ್ದಾರೆ.
ವಸತಿ ಕೊಠಡಿಗಳಲ್ಲಿ ಸಮರ್ಪಕ ಸ್ವಚ್ಛತೆ ಕಾಪಾಡಲಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿತರಿಸಲಾಗಿರುವ ತಗಡಿನ ಟ್ರಂಕ್‌ಗಳ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆಯೂ ಪಾಲಕರು ಹಾಗೂ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಟ್ರಂಕ್‌ಗಳ ಕೀಲಿಗಳು ಸುಲಭವಾಗಿ ತೆರೆಯಬಹುದಾದ ಸ್ಥಿತಿಯಲ್ಲಿದ್ದು, ಕೆಲವೊಮ್ಮೆ ಕೀಲಿ ಮುರಿದು ಒಳಗಿರುವ ವಸ್ತುಗಳನ್ನು ಕಳವು ಮಾಡಲಾಗುತ್ತಿದೆ ಎನ್ನಲಾಗಿದೆ.
ಬಟ್ಟೆ, ಪುಸ್ತಕಗಳು ಹಾಗೂ ಇತರ ವೈಯಕ್ತಿಕ ಸಾಮಗ್ರಿಗಳು ಪದೇ ಪದೇ ನಾಪತ್ತೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದ್ದು, ತಮ್ಮ ಮಕ್ಕಳ ವಸ್ತುಗಳ ಸುರಕ್ಷತೆ ಬಗ್ಗೆ ಪಾಲಕರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಶೀಘ್ರವಾಗಿ ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಟ್ರಂಕ್ಗಳಲ್ಲಿಟ್ಟ ಪಾಲಕರು ಮಕ್ಕಳಿಗೆ ಕೊಟ್ಟ ಖರ್ಚಿನ ಹಣ, ಪುಸ್ತಕಗಳು, ತಿನಿಸು, ಬಟ್ಟೆ ಸೇರಿ ಇನ್ನೂ ಅನೇಕ ವಸ್ತುಗಳು ನಿರಂತರ ಕಳ್ಳತನವಾಗುತ್ತಿವೆ. ಶೂ, ಚಪ್ಪಲಿ ಇವುಗಳನ್ನೂ ಬಿಡುತ್ತಿಲ್ಲ. ಹೀಗಾದರೆ ನಾವು ಯಾರನ್ನು ದೂರಬೇಕೆಂದು ಪಾಲಕರು ಪ್ರಾಚಾರ್ಯರಿಗೆ ಪ್ರಶ್ನಿಸಿದರೂ ಅವರಿಂದ ಸಮರ್ಪಕ ಉತ್ತರವಿಲ್ಲ. ತಪ್ಪಾಗಿದೆ ಸರಿ ಮಾಡುತ್ತೇವೆ ಎಂಬ ಹಾರಿಕೆ ಉತ್ತರಗಳನ್ನು ಕೊಡುತ್ತ ಬಂದಿದ್ದಾರೆ” ಎಂದು ಪೋಷಕರು ಆರೋಪಿಸಿದ್ದಾರೆ.
“ಇಂತಹ ಕೃತ್ಯದಲ್ಲಿ ಭಾಗಿಯಾದವರು ಯಾರೆಂಬ ಪೋಷಕರ ಪ್ರಶ್ನೆಗೆ, ಎಸ್ಸೆಸ್ಸೆಲ್ಸಿ, ಮುಗಿಸಿ ಹೋದ ಬ್ಯಾಚಿನ ಕೆಲ ವಿದ್ಯಾರ್ಥಿಗಳು ಎಂದು ಪ್ರಾಚ್ಯಾರ ಪ್ರಾಚಾರ್ಯರು ಉತ್ತರಿಸುತ್ತಾರೆ. ಅವರ ಮೇಲೆ ಯಾವ ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಾಚಾರ್ಯರಿಗೆ ಕೇಳಿದರೆ ಅವರಿಂದ ಸಮರ್ಪಕ ಉತ್ತರ ಬರುತ್ತಿಲ್ಲ” ಎಂದು ಪಾಲಕರು ಹೇಳುತ್ತಾರೆ.
“ಈ ವಸತಿ ಶಾಲೆಗೆ ಸಂಬಂಧಿಸಿದ ಮೇಲಧಿಕಾರಿಗಳು ಗಮನಹರಿಸಿ ವಾತಾವರಣವನ್ನು ಸುಧಾರಿಸಬೇಕು. ಬಡಮಕ್ಕಳ ಉತ್ತಮ ಶಿಕ್ಷಣ ಹಾಗೂ ಭವಿಷ್ಯಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ಉತ್ತಮ ನಾಗರಿಕರಾಗುವ ಕನಸು ಹೊತ್ತು ಸರ್ಕಾರ ಕೋಟ್ಯಂತರ ರೂ. ಅನುದಾನದಲ್ಲಿ ನಿರ್ಮಿಸಿದ ವಸತಿ ಶಾಲೆಯಲ್ಲಿ ಕಲಿತ ಮಕ್ಕಳ ಭವಿಷ್ಯ ಉಜ್ವಲವಾಗಬೇಕೇ ವಿನಃ ಕಳ್ಳತನ ಕಲಿಯಬಾರದು” ಎಂದು ಪಾಲಕರಾದ ಮುರುಡಿ ಗ್ರಾಮದ ಹನಮಂತ ನೀರಲಕೇರಿ, ಲಾಯದಗುಂದಿ ಗ್ರಾಮದ ಬಸವರಾಜ ದೊಡ್ಡಮನಿ, ಹಳದೂರ ಗ್ರಾಮದ ರಮೇಶ ಮಾದರ ಸೇರಿದಂತೆ ಇನ್ನೂ ಅನೇಕರು ಆಗ್ರಹಿಸಿದ್ದಾರೆ.
ಈದಿನ.ಕಾಮ್ ಜೊತೆ ಮಾತನಾಡಿದ ವಿದ್ಯಾರ್ಥಿಯ ಪಾಲಕರಾದ ಬಸವರಾಜ ದೊಡ್ಡಮನಿ, “ವಸತಿ ಶಾಲೆಯಲ್ಲಿನ ಸಮಸ್ಯೆಗಳ ಬಗ್ಗೆ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ಗಮನಕ್ಕೂ ತಂದಿದ್ದೇವೆ. ನಮ್ಮ ಮಕ್ಕಳು ಅಂಕಗಳಲ್ಲಿ ಹಿಂದೆ ಬಿದ್ದರೂ ಚಿಂತೆಯಿಲ್ಲ, ಆದರೆ ಉತ್ತಮ ಮೌಲ್ಯಗಳು ಮತ್ತು ಸಂಸ್ಕಾರಗಳನ್ನು ಕಲಿಯಬೇಕು. ದುರದೃಷ್ಟವಶಾತ್, ಶಾಲೆಯ ವಾತಾವರಣದಲ್ಲಿ ಕಳ್ಳತನದಂತಹ ದುಷ್ಪ್ರವೃತ್ತಿಗಳು ಬೆಳೆಯುತ್ತಿರುವುದು ಆತಂಕಕಾರಿ. ವಸತಿ ನಿಲಯದ ವಾರ್ಡನ್ ಕೂಡ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸದಿದ್ದರೆ, ನಮ್ಮ ಮಕ್ಕಳನ್ನು ಬೇರೆ ಶಾಲೆಗೆ ವರ್ಗಾಯಿಸುವ ಅನಿವಾರ್ಯತೆ ಎದುರಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಇಂದಿರಾಗಾಂಧಿ ವಸತಿ ಶಾಲೆಯ ಪ್ರಾಚಾರ್ಯೆ ರುಕ್ಷೀಣಿಬಾಯಿ ಪವಾರ ಮಾತನಾಡಿ, “ಈ ಕಳ್ಳತನದ ಘಟನೆ ನಮ್ಮನ್ನೂ ನೋಯಿಸಿದೆ. ಪ್ರಾಥಮಿಕ ತನಿಖೆಯಲ್ಲಿ, ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಶಾಲೆಯಿಂದ ತೆರಳಿರುವ ಕೆಲ ವಿದ್ಯಾರ್ಥಿಗಳೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಸಂಬಂಧಿತ ವಿದ್ಯಾರ್ಥಿಗಳನ್ನು ಗುರುತಿಸಲಾಗಿದ್ದು, ಅವರ ಪಾಲಕರಿಗೂ ಮಾಹಿತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸದಾಶಿವು ಬಡಿಗೇರ ಮಾತನಾಡಿ, “ಈ ಘಟನೆ ನಮ್ಮ ಗಮನಕ್ಕೆ ಪ್ರಾಚಾರ್ಯರು ತಂದಿಲ್ಲ. ಮಾಹಿತಿ ಪಡೆದು ಇಂತಹ ಘಟನೆ ಮರುಕಳಿಸದಂತೆ ಕ್ರಮವಹಿಸುತ್ತೇವೆ” ಎಂದರು.
ಜೀವನದ ಮೌಲ್ಯಗಳನ್ನು, ಆದರ್ಶಗಳನ್ನು ಕಲಿಸಬೇಕಿರುವ ಶಾಲೆಯಲ್ಲಿ ಕಳ್ಳತನಕ್ಕೆ ಆಸ್ಪದ ಕೊಡುವುದು ತರವಲ್ಲ. ಇಷ್ಟೆಲ್ಲಾ ಆರೋಪಗಳ ನಡುವೆ ಶಾಲೆಯ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸುವತ್ತ ಗಮನ ಹರಿಸುತ್ತದೆಯೇ ಕಾದು ನೋಡಬೇಕಿದೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು




