- ಯಾವುದೇ ಶೌಚಾಲಯಗಳಲ್ಲಿ ವಿಕಲಚೇತನರಿಗೆ ಸರಿಯಾದ ವ್ಯವಸ್ಥೆಯಿಲ್ಲ
- ಸಾರ್ವಜನಿಕರಿಗೆ ನೈರ್ಮಲ್ಯದ ಶೌಚಾಲಯ ಒದಗಿಸುವುದು ಸರ್ಕಾರದ ಕರ್ತವ್ಯ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜನಸಂಖ್ಯೆಗೆ ತಕ್ಕಂತೆ ಶೌಚಾಲಯಗಳಿಲ್ಲ. ಇವುಗಳ ನಿರ್ವಹಣೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಿಫಲವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಬೆಂಗಳೂರಿನಲ್ಲಿರುವ ಶೌಚಾಲಯಗಳ ಸ್ಥಿತಿಗತಿ ಬಗ್ಗೆ ಲೆಟ್ಜ್ ಕಿಟ್ ಫೌಂಡೇಶನ್ ಸಂಸ್ಥೆ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿತ್ತು.
ಮಂಗಳವಾರ ಸಿಜೆ ಪ್ರಸನ್ನ ಬಿ ವರಾಳೆ, ನ್ಯಾ. ಎಂಜಿಎಸ್ ಕಮಲ್ ಅವರಿದ್ದ ಪೀಠ ಈ ಅರ್ಜಿ ವಿಚಾರಣೆ ನಡೆಸಿದೆ. ಅರ್ಜಿ ಸಂಬಂಧ ಸರ್ಕಾರ ತನ್ನ ಯಾವುದೇ ನಿಲುವು ತಿಳಿಸಿಲ್ಲ.
“ಬೆಂಗಳೂರಿನಲ್ಲಿರುವ ಶೌಚಾಲಯಗಳು ದುಸ್ಥಿತಿಯಲ್ಲಿವೆ. ಯಾವುದೇ ಶೌಚಾಲಯಗಳಲ್ಲಿ ವಿಕಲಚೇತನರಿಗೆ ಸರಿಯಾದ ವ್ಯವಸ್ಥೆಯಿಲ್ಲ. ಮಹಿಳಾ ಶೌಚಾಲಯಗಳಲ್ಲಿನ ಕಿಟಕಿಗಳು ಕಿತ್ತು ಹೋಗಿವೆ. ಶೌಚಾಲಯಗಳು ನೈರ್ಮಲ್ಯದಿಂದ ಕೂಡಿವೆ” ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಈ ಸುದ್ದಿ ಓದಿದ್ದೀರಾ? ಪಾವತಿಯಾಗದ ಬಾಕಿ | ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಗುತ್ತಿಗೆದಾರರ ಸಂಘ
“ಸರ್ಕಾರ ಸಾರ್ವಜನಿಕರಿಗೆ ನೈರ್ಮಲ್ಯದ ಶೌಚಾಲಯ ಒದಗಿಸಬೇಕು. ಇದು ಸರ್ಕಾರದ ಕರ್ತವ್ಯ. ಈ ಹೊಣೆಯಿಂದ ಸರ್ಕಾರ ಹಿಂದೆ ಸರಿಯಬಾರದು” ಎಂದು ಹೇಳಿದೆ.
ಇನ್ನು 3 ವಾರಗಳಲ್ಲಿ ಸಾರ್ವಜನಿಕರಿಗೆ ಶೌಚಾಲಯ ಒದಗಿಸುವ ವ್ಯವಸ್ಥೆ ಕುರಿತು ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.