ಬೀದರ್ | ಸಂವಿಧಾನದಲ್ಲಿ ವಚನಗಳ ತತ್ವ ಸಿದ್ಧಾಂತ ಅಡಕವಾಗಿದೆ: ಪ್ರೊ. ಮೀನಾಕ್ಷಿ ಬಾಳಿ

ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ನೆಲವು ವಚನಗಳ ಮೂಲಕ ಇಡೀ ಜಗತ್ತಿಗೆ ಸಾಂಸ್ಕೃತಿಕ ಅಸ್ಮಿತೆಯೊಂದನ್ನು ಕಟ್ಟಿ ಕೊಟ್ಟಿದೆ. ವಚನಗಳು ಮತ್ತು ಸಂವಿಧಾನದ ಆಶಯ, ತತ್ವಗಳಲ್ಲಿ ಹೆಚ್ಚು ಸಾಮ್ಯತೆಯಿದೆ. ಸಂವಿಧಾನದಲ್ಲಿ ವಚನಗಳ ತತ್ವ ಸಿದ್ಧಾಂತ ಅಡಕವಾಗಿದೆ ಎಂದು ಹಿರಿಯ ಚಿಂತಕಿ ಪ್ರೊ. ಮೀನಾಕ್ಷಿ ಬಾಳಿ ಹೇಳಿದರು.

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ‘ಶಿಕ್ಷಣ, ಸಾಹಿತ್ಯ ಮತ್ತು ಸಮಾಜ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಮಹಿಳೆಯರನ್ನು, ನಿರ್ಲಕ್ಷಿತರನ್ನು, ತಳ ಸಮುದಾಯದವರನ್ನು, ದಲಿತರನ್ನು ಸಾಂಸ್ಕೃತಿಕವಾಗಿ ಮುನ್ನೆಲೆಗೆ ತಂದು ಸಾಮಾಜಿಕ ಪ್ರಾಧ್ಯಾನತ್ಯ ಒದಗಿಸಿದ ಶ್ರೇಯಸ್ಸು ಶರಣರಿಗೆ ಸಲ್ಲುತ್ತದೆ. ಬಹುಸಂಸ್ಕೃತಿಯ , ಬಹುಭಾಷಿಕತೆಯ, ಬಹು ಆಯಾಮದ ನೆಲೆಯನ್ನು ಒದಗಿಸಿದ ನೆಲ ಶರಣರ ಕಲ್ಯಾಣ” ಎಂದರು.

“ಸಂವಿಧಾನ ಕರಡು ರಚನೆ ಸಂದರ್ಭದಲ್ಲಿ ದೇಶದ ಬಹು ಸಂಸ್ಕೃತಿ, ಭೌಗೋಳಿಕತೆ, ಬಹುಭಾಷಿಕತೆಯನ್ನು ಗ್ರಹಿಸಿಯೇ ಸಂವಿಧಾನ ರಚನೆ ಮಾಡಲಾಗಿದೆ. ಸಂವಿಧಾನದ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಹೀಗೆ ಹಲವು ನೆಲೆಗಳಲ್ಲಿ ಅಧ್ಯಯನ ಮಾಡುವ ಮೂಲಕ ದೇಶದ ಸಂಸ್ಕೃತಿ ಅರಿಯಬೇಕಿದೆ. ವಚನಗಳ ಆಳದ ಓದಿನಿಂದ ನಮ್ಮೊಳಗಿನ ಒಡಕು, ಕ್ರೌರ್ಯ, ಸಿನಿಕತೆ, ಸಣ್ಣತನ, ನೀಚತನದಿಂದ ಬಿಡುಗಡೆಗೊಳ್ಳಬೇಕಿದೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾರ್ಯಕ್ರಮದಲ್ಲಿ ಅಕ್ಕಲಕೋಟದ ಸಿ.ಬಿ ಖೇಡಗಿ ಬಸವೇಶ್ವರ ಕಾಲೇಜು ಪ್ರಾಚಾರ್ಯ ಡಾ. ಗುರುಲಿಂಗಪ್ಪ ಧಬಾಲೆ, ಬಸವಕಲ್ಯಾಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಡಾ. ಚಿತ್ರಶೇಖರ ಚಿರಳ್ಳಿ, ಉಪನ್ಯಾಸಕ ಡಾ. ಮಲ್ಲಿಕಾರ್ಜುನ ಬಿರಾದಾರ, ಹುಲಸೂರ ಎಂ.ಕೆ.ಕೆ.ಪಿ ಸರ್ಕಾರಿ ಪದವಿ ಕಾಲೇಜು ಉಪನ್ಯಾಸಕ ಡಾ ಸಂತೋಷ ಸಿ. ಎಂ, ಉಪನ್ಯಾಸಕ ಅಂಬರೀಶ್ ಭೀಮಾಣಿ, ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ ಮಲ್ಲಿಕಾರ್ಜುನ ಲಕ್ಕಶೆಟ್ಟಿ, ಕಾಲೇಜು ಪ್ರಾಚಾರ್ಯ ಡಾ ಭೀಮಾಶಂಕರ ಬಿರಾದಾರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಡಾ. ಶಾಂತಲಾ ಪಾಟೀಲ, ಶ್ರೀನಿವಾಸ ಉಮಾಪುರೆ, ಶಾಂತಲಿಂಗ ಧಬಾಲೆ, ವಿವೇಕಾನಂದ ಶಿಂದೆ, ಗಂಗಾಧರ ಸಾಲಿಮಠ, ರೋಷನ್ ಬಿ, ಸೌಮ್ಯಾ ಗೌಡ, ಗುರುದೇವಿ ಕಿಚಡೆ, ಸಚಿನ್ ಬಿಡವೆ, ನೀಲಮ್ಮ ಮೇತ್ರೆ, ಶಿವಾನಿರೆಡ್ಡಿ, ಅಶೋಕ ರೆಡ್ಡಿ, ಎಂ. ಡಿ ಜಬಿ, ಸುಷ್ಮಾ, ಸುಜಾವುದ್ದಿನ್, ಪ್ರವೀಣ್ ಬಿರಾದಾರ ಮೊದಲಾದವರಿದ್ದರು. ಡಾ. ಬಸವರಾಜ ಖಂಡಾಳೆ ನಿರೂಪಿಸಿದರು. ಸಂಗೀತಾ ಮಹಾಗಾಂವೆ ಸ್ವಾಗತಿಸಿದರು. ಜಗದೇವಿ ಜವಳಗೆ ವಂದಿಸಿದರು.

LEAVE A REPLY

Please enter your comment!
Please enter your name here