- ತಾಪಮಾನದಲ್ಲಿ ಕಡಿಮೆಯಾಗಿದ್ದು, ಚಳಿ ವಾತಾವರಣ
- ಮಳೆಯಿಂದ ನಗರದೆಲ್ಲೆಡೆ ವಾಹನ ಸಂಚಾರ ದಟ್ಟಣೆ
ರಾಜ್ಯದಲ್ಲಿ ಮುಂಗಾರು ಈಗ ಚುರುಕುಗೊಂಡಿದೆ. ಬೆಂಗಳೂರಿನಲ್ಲಿ ಮಂಗಳವಾರ ಸಂಜೆಯಿಂದ ಜೋರು ಮಳೆ ಸುರಿಯುತ್ತಿದ್ದು, ಈ ಮಳೆ ಇನ್ನೂ ನಾಲ್ಕು ದಿನ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಗರದ ಪ್ರಕಾಶನಗರ, ರಾಜಾಜಿನಗರ, ಯಶವಂತಪುರ, ಮಲ್ಲೇಶ್ವರಂ, ಸದಾಶಿವನಗರ, ವಿಜಯನಗರ, ಗೋವಿಂದರಾಜನಗರ, ನವರಂಗ ಸೇರಿದಂತೆ ನಗರದ ಹಲವೆಡೆ ಜೋಡು ಮಳೆ ಸುರಿಯುತ್ತಿದೆ. ಮಳೆಯಲ್ಲಿ ಸಂಚರಿಸಲು ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ.
ಕಳೆದ ಒಂದು ವಾರದಿಂದ ನಗರದಲ್ಲಿ ಮಳೆ ಜತೆ ತಂಪು ವಾತಾವರಣ ಇದ್ದು, ನಗರದ ಹಲವೆಡೆ ಸೋಮವಾರವೂ ಮಳೆ ಸುರಿದಿದೆ. ಭಾನುವಾರ ನಗರದ ವಿವಿಧೆಡೆ ಉತ್ತಮ ಮಳೆ ದಾಖಲಾಗಿದೆ. ತಾಪಮಾನದಲ್ಲಿ ಇಳಿಕೆ ಆಗಿದ್ದು, ಎಲ್ಲೆಡೆ ಚಳಿ ವಾತಾವರಣ ಆರಂಭವಾಗಿದೆ.
ಮಂಗಳವಾರ ನಗರದಲ್ಲಿ ಜೋರು ಮಳೆ ಸುರಿಯುತ್ತಿದ್ದು, ಸಾಯಂಕಾಲ ಕೆಲಸ ಮುಗಿಸಿ ಮನೆಗೆ ತೆರಳುವವರು ಪರದಾಡಿದರು. ವಾಹನ ಸವಾರರು ಮಳೆಯಿಂದ ತಪ್ಪಿಸಿಕೊಳ್ಳಲು ಅಂಡರ್‌ಪಾಸ್‌ಗಳಲ್ಲಿ ಆಶ್ರಯ ಪಡೆದಿದ್ದರು. ಇನ್ನೂ ನಗರದೆಲ್ಲೆಡೆ ವಾಹನ ಸಂಚಾರ ದಟ್ಟಣೆ ಉಂಟಾಗಿತ್ತು.
ಕಾಮಾಕ್ಷಿಪಾಳ್ಯ ಬಸ್ ಸ್ಟಾಪ್ ಬಳಿ ರಸ್ತೆಯಲ್ಲಿ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ರಸ್ತೆಯಲ್ಲಿ ನಿಂತಿದ್ದ ಮಳೆ ನೀರನ್ನು ಹೆಡ್ ಕಾನ್ಸ್‌ಟೇಬಲ್ ಮಧುಸೂದನ್ ರವರು ತೆರುವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸುದ್ದಿ ಓದಿದ್ದೀರಾ? ‘ಶಕ್ತಿ’ ಯೋಜನೆಗೆ ತಿಂಗಳು: ಲಾಭ ಪಡೆದ 16.73 ಕೋಟಿ ಮಹಿಳೆಯರು, 402 ಕೋಟಿ ಟಿಕೆಟ್ ಮೊತ್ತ
ಇನ್ನೂ ಪಣತ್ತೂರು ರೈಲ್ವೆ ಸೇತುವೆಯ ಅಂಡರ್‌ಪಾಸ್ ಕೆಳಗೆ ಮಳೆ ನೀರು ನಿಂತಿದ್ದು, ಮಳೆಯಿಂದಾಗಿ ಸಂಚಾರವು ಸ್ವಲ್ಪ ನಿಧಾನವಾಗಿದೆ. ಹಾಗಾಗಿ, ಪ್ರಯಾಣಿಕರು ಈ ಮಾರ್ಗದ ಪರ್ಯಾಯವಾಗಿ ಬದಲಿ ಮಾರ್ಗದಲ್ಲಿ ಸಂಚರಿಸಲು ಬೆಂಗಳೂರು ಸಂಚಾರ ಪೊಲೀಸ್ ತಿಳಿಸಿದೆ.
ಬೆಳ್ಳಂದೂರಿನ ಡೌನ್ ರಾಂಪ್‌ನಲ್ಲಿ ನೀರು ತುಂಬಿರುವ ಕಾರಣ ಇಕೋಸ್ಪೇಸ್‌ನಿಂದ ಇಬ್ಬಲೂರು ಕಡೆಗೆ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದು, ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ನೀರನ್ನು ತೆರುವು ಮಾಡುತ್ತಿದ್ದಾರೆ.