- ಕಟ್ಟಡ ನಿರ್ಮಾಣಕ್ಕೆ ₹280 ಕೋಟಿ ವೆಚ್ಚ ಸಾಧ್ಯತೆ: ಡಾ ಪ್ರತಿಮಾ ಮೂರ್ತಿ
- ದೂರದ ಊರುಗಳಿಂದ ಬರುವ ರೋಗಿಗಳಿಗೆ ಆರಾಮದಾಯಕ ವಾತಾವರಣ
ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯಲು ಹಾಗೂ ವೈದ್ಯರ ಭೇಟಿ ಮಾಡಲು ರೋಗಿಗಳು ಬೆಳಗ್ಗೆ 4 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಟೋಕನ್ ಪಡೆದು ಕಾಯುತ್ತಾರೆ. ಇದೀಗ ಈ ಸಮಸ್ಯೆಯನ್ನು ದೂರ ಮಾಡಲು ನಿಮ್ಹಾನ್ಸ್ ಆಸ್ಪತ್ರೆ ಮುಂದಾಗಿದ್ದು, ಹೊರರೋಗಿಗಳ ವಿಭಾಗಕ್ಕೆಂದೇ ನಿಮ್ಹಾನ್ಸ್ 4 ಅಂತಸ್ತಿನ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲು ನಿರ್ಧರಿಸಿದೆ.
“₹280 ಕೋಟಿವರೆಗೆ ಕಟ್ಟಡ ನಿರ್ಮಾಣಕ್ಕೆ ವೆಚ್ಚವಾಗಬಹುದು. ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಪಡೆಯಲು ಹಾಗೂ ಧನಸಹಾಯಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವೆ. 1990ರ ಮಧ್ಯಭಾಗದಲ್ಲಿ ಸರಾಸರಿ 400 ರಿಂದ 500 ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಇದೀಗ, ಈ ಸಂಖ್ಯೆ ಆರು ಪಟ್ಟು ಹೆಚ್ಚಾಗಿದೆ. ದಿನಕ್ಕೆ 2,000 ರಿಂದ 2,500 ಹೊರರೋಗಿಗಳು ಆಸ್ಪತ್ರೆಗೆ ಭೇಟಿ ಮಾಡುತ್ತಾರೆ. ಆಸ್ಪತ್ರೆಯ ರೋಗಿಗಳಿಗೆ ಆರಾಮದಾಯಕವಾಗಿಸಲು ಬಯಸುತ್ತೇವೆ” ನಿಮ್ಹಾನ್ಸ್‌ನ ನಿರ್ದೇಶಕಿ ಡಾ ಪ್ರತಿಮಾ ಮೂರ್ತಿ ತಿಳಿಸಿದರು.
“ಈಗಿರುವ ಓಪಿಡಿ ಹಿಂದೆಯೇ ಹೊಸ ಓಪಿಡಿ ನಿರ್ಮಿಸಲಾಗುವುದು. ಅಸ್ತಿತ್ವದಲ್ಲಿರುವ ಒಂದು ಓಪಿಡಿಯನ್ನು ಮುಚ್ಚಲಾಗುವುದು. ಸಿಬ್ಬಂದಿ ಮತ್ತು ವೈದ್ಯಕೀಯ ಉಪಕರಣಗಳನ್ನು ಹೊಸ ಆವರಣಕ್ಕೆ ವರ್ಗಾಯಿಸಲಾಗುತ್ತದೆ. ಈಗಿರುವ ಉದ್ಯಾನವನವನ್ನು ಸುಂದರ ಉದ್ಯಾನವನ್ನಾಗಿ ಪರಿವರ್ತಿಸಲಾಗುವುದು” ಎಂದರು.
“ರೋಗಿಗಳು ದೂರದ ಊರುಗಳಿಂದ ಬರುತ್ತಾರೆ. ಆಸ್ಪತ್ರೆಯಲ್ಲಿ ಆರಾಮದಾಯಕವಾಗಿ ಅವರು ಕುಳಿತುಕೊಳ್ಳಬಹುದು. ಇದರಿಂದ ಅವರ ಒತ್ತಡದ ಮಟ್ಟವನ್ನು ಕಡಿಮೆ ಮಾಡಬಹುದು” ಎಂದು ಡಾ ಪ್ರತಿಮಾ ಹೇಳಿದರು.
“ರೋಗಿಗಳ ಕಾಯುವ ಅವಧಿಯನ್ನು ಸುಧಾರಿಸಲು ನಿಮ್ಹಾನ್ಸ್ ಈಗಾಗಲೇ ಕೆಲವು ಕ್ರಮಗಳನ್ನು ಕೈಗೊಂಡಿದೆ. ವಯಸ್ಸಾದವರಿಗೆ, ಗರ್ಭಿಣಿಯರಿಗೆ ಹಾಗೂ ಮಕ್ಕಳಿರುವವರಿಗೆ ಪ್ರತ್ಯೇಕ ಸರತಿ ಸಾಲು ಪ್ರಾರಂಭಿಸಿದ್ದೇವೆ. ಇದು ಅವರಿಗೆ ಸಹಾಯ ಮಾಡಿದೆ” ಎಂದು ಹಿರಿಯ ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬ್ರ್ಯಾಂಡ್ ಬೆಂಗಳೂರು | ಸ್ವಚ್ಛ ನಗರಕ್ಕೆ ನಾಗರಿಕರಿಂದ 10,479 ಸಲಹೆ
“ರೋಗಿಗಳ ಪ್ರತಿಕ್ರಿಯೆಗಾಗಿ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ, ಹಲವರು ಕಾಯುವ ಅವಧಿ ಹಾಗೂ ಹಣ ನೀಡುವಂತೆ ಸಿಬ್ಬಂದಿ ಒತ್ತಾಯಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ” ಎಂದು ಅವರು ಹೇಳಿದರು.