ಕಳೆದ ಒಂದು ದಿನದ ಹಿಂದಷ್ಟೆ ಖಾಸಗಿ ಹಾಗೂ ವಾಣಿಜ್ಯ ವಾಹನಗಳಿಗೆ ನೂತನ ಶುಲ್ಕ ದರಗಳನ್ನು ವಿಧಿಸಿ ಆದೇಶ ಹೊರಡಿಸಿದ್ದ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಸಂಸ್ಥೆ ಕಾರು ಚಾಲಕರು ಹಾಗೂ ಸಾರ್ವಜನಿಕರ ಪ್ರತಿಭಟನೆಗೆ ಮಣಿದು ಆದೇಶವನ್ನು ಹಿಂಪಡೆದಿದೆ.
ನೂತನ ಶುಲ್ಕ ದರಗಳ ಯೋಜನೆಯನ್ನು ಕೈಬಿಟ್ಟಿರುವುದಾಗಿ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಸಂಸ್ಥೆಯ ಮೂಲಗಳು ದೃಢಪಡಿಸಿವೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕ್ರಿಕೆಟ್ ಆಟ, ಹುಚ್ಚಾಟ, ಜೂಜಾಟ ಮತ್ತು ಧೋನಿಯ ದುಗುಡ
ಖಾಸಗಿ ವಾಹನಗಳು ಹಾಗೂ ವಾಣಿಜ್ಯ ವಾಹನಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದ್ವಾರಕ್ಕೆ ಪ್ರವೇಶಿಸಬೇಕಾದರೆ ಮೊದಲ 7ರಿಂದ 14 ನಿಮಿಷಗಳವರೆಗೆ ಕ್ರಮವಾಗಿ 150 ಹಾಗೂ 300 ರೂ. ಶುಲ್ಕವನ್ನು ಪಾವತಿಸಬೇಕಿತ್ತು. ಹಾಗೆಯೇ ಪ್ರಾಧಿಕಾರವು ಬಸ್ಸುಗಳಿಗೆ 600 ಹಾಗೂ ಟೆಂಪೋ ಟ್ರಾವಲರ್‌ಗಳಿಗೆ 300 ರೂ. ಶುಲ್ಕ ನಿಗದಿಪಡಿಸಿತ್ತು. ಸಮಯ ಹೆಚ್ಚಾದಂತೆ ಶುಲ್ಕ ಕೂಡ ಹೆಚ್ಚಾಗುತ್ತಿತ್ತು.
ಶುಲ್ಕವು ವಿಮಾನ ನಿಲ್ದಾಣದ ಟರ್ಮಿನಲ್ 1 ಹಾಗೂ ಟರ್ಮಿನಲ್ 2ರ ದ್ವಾರಕ್ಕೆ ಅನ್ವಯಿಸಲಾಗಿತ್ತು. ನೂತನ ಶುಲ್ಕ ದರ ವಿಧಿಸಿರುವುದನ್ನು ಪ್ರತಿಭಟಿಸಿ ಓಲಾ, ಊಬರ್ ಸೇರಿದಂತೆ ಕಾರು ಚಾಲಕರು ಹಾಗೂ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಮಣಿದ ವಿಮಾನ ನಿಲ್ದಾಣ ಪ್ರಾಧಿಕಾರಿ ಶುಲ್ಕ ಆದೇಶವನ್ನು ಮಂಗಳವಾರ (ಮೇ.21) ಹಿಂಪಡೆದಿದೆ.
