ನ್ಯಾಯಾಲಯದ ಸೂಚನೆಯಂತೆ ಕೆರೆ, ರಾಜಕಾಲುವೆಗಳ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಹೈಕೋರ್ಟ್ ಕಿಡಿಕಾರಿದೆ.
ಕೆರೆ, ರಾಜಕಾಲುವೆ ಒತ್ತುವರಿ ತೆರವು ಕುರಿತು ಸಿಟಿಜನ್ ಆಕ್ಷನ್ ಫೋರಂ ಸೇರಿದಂತೆ ಹಲವು ಸಂಘಟನೆಗಳು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವು. ಈ ಅರ್ಜಿಗಳನ್ನು ಸಿಜೆ ಪಿ.ಬಿ.ವರ್ಲೆ ಮತ್ತು ನ್ಯಾ.ಎಂ.ಜಿ.ಎಸ್. ಕಮಲ್ ಅವರಿದ್ದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ನಗರಾಭಿವೃದ್ಧಿ ಇಲಾಖೆ ಉಪ ಕಾರ್ಯದರ್ಶಿ ನ್ಯಾಯಾಲಯದ ನಿರ್ದೇಶನದಂತೆ ವಿಚಾರಣೆ ವೇಳೆ ಹಾಜರಾಗಿದ್ದರು.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಪಾಲಿಕೆ ಮುಖ್ಯ ಆಯುಕ್ತರ ಪರವಾಗಿ ‘ನೀರಿ’ ವರದಿ ಆಧರಿಸಿ, ಒತ್ತುವರಿ ತೆರವಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸಿದರು. ಅದರಲ್ಲಿ ಕೆರೆ ಹಾಗೂ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ನಾಗರಿಕರ ಕುಂದುಕೊರತೆಗಳನ್ನು ಪರಿಹರಿಸಲು ಶ್ರೇಯಸ್ ಆ್ಯಪ್ ಅಭಿವೃದ್ಧಿಪಡಿಸಿರುವ ಬಗ್ಗೆ ಮತ್ತು ಅದನ್ನು ಆಧರಿಸಿ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಪ್ರಮಾಣಪತ್ರದಲ್ಲಿ ಉಲ್ಲೇಖಿಸಲಾಗಿದೆ.
“ಒತ್ತುವರಿ ತೆರವಿಗೆ ಕ್ರಮ ಕೈಗೊಂಡ ವರದಿ ತೃಪ್ತಿಕರವಾಗಿಲ್ಲ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಒತ್ತುವರಿದಾರರ ವಿರುದ್ಧ ಸಾಕಷ್ಟು ದಾಖಲೆಗಳ ಜತೆಗೆ ಮಾಹಿತಿ ಇದೆ. ಆದರೆ, ಒತ್ತುವರಿದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು” ಎಂದು ಆದೇಶಿಸಿದೆ.
“ಒತ್ತುವರಿಗಳ ಬಗ್ಗೆ ದೂರುಗಳಿದ್ದರೂ ನಿರ್ಲಕ್ಷಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ‘ಎಂಪ್ರಿ’ ಮತ್ತು ‘ನೀರಿ’ ಸಂಸ್ಥೆಗಳು ವರದಿ ಸಲ್ಲಿಸಿವೆ. ಅದರಂತೆ, ಒತ್ತುವರಿ ತಡೆಗೆಂದೇ ಕೆರೆ ಸಂರಕ್ಷಣಾ ಕಾಯಿದೆ ಮತ್ತು ಬಿಬಿಎಂಪಿ ಕಾಯಿದೆಯಡಿ ಪ್ರತ್ಯೇಕ ಅಧಿಕಾರಿ ನೇಮಿಸಬೇಕು” ಎಂದು ಹೇಳಿದೆ.
ಒತ್ತುವರಿ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕು. ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ, ಜಲಮಂಡಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಎಲ್ಲ ಪ್ರಾಧಿಕಾರಗಳು ಸೇರಿ ಸಮಾಲೋಚನೆ ನಡೆಸಿ ನಾಲ್ಕು ವಾರಗಳಲ್ಲಿ ಕ್ರಿಯಾ ಯೋಜನೆ ಸಲ್ಲಿಸಬೇಕು. ನ್ಯಾಯಾಲಯದ ನಿರ್ದೇಶನದಂತೆ ಕೆರೆ, ರಾಜಕಾಲುವೆಗಳ ಒತ್ತುವರಿ ತೆರವಿಗೆ ಕ್ರಮ ಕೈಗೊಂಡಿಲ್ಲ ಹೀಗಾದರೆ, ಬೆಕ್ಕಿಗೆ ಗಂಟೆ ಕಟ್ಟುವವರ್ಯಾರು ಎಂದು ನಗರಾಭಿವೃದ್ಧಿ ಮತ್ತು ಬಿಬಿಎಂಪಿ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ.
ಈ ಸುದ್ದಿ ಓದಿದ್ದೀರಾ? ಲಾಲ್‌ಬಾಗ್‌ನಲ್ಲಿ ಆ.4 ರಿಂದ 15ರವರೆಗೆ 214ನೇ ಫಲಪುಷ್ಪ ಪ್ರದರ್ಶನ
ನ್ಯಾಯಾಲಯ ಈ ವಿಚಾರಣೆಯನ್ನು ಸೆ. 4ಕ್ಕೆ ಮುಂದೂಡಿದೆ.