ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲುವುದಕ್ಕೆ ಕಾರ್ಯಸೂಚಿ ಸಿದ್ಧಪಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು, ಸಚಿವರೊಂದಿಗೆ ಬುಧವಾರ(ಆಗಸ್ಟ್ 2) ದೆಹಲಿಯ ಅಕ್ಬರ್ ರಸ್ತೆಯಲ್ಲಿನ ಎಐಸಿಸಿ ಮುಖ್ಯ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದೆ.
ಲೋಕಸಭೆ ಚುನಾವಣೆಯನ್ನೇ ಮುಖ್ಯ ಗುರಿಯಾಗಿಟ್ಟುಕೊಂಡು ಎರಡು ಹಂತಗಳಲ್ಲಿ ಸಭೆ ನಡೆಯಲಿದ್ದು, ಮೊದಲ ಹಂತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಸದಸ್ಯರು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಎಐಸಿಸಿ ಕಾರ್ಯದರ್ಶಿಗಳು, ಪ್ರಮುಖ ಸಚಿವರು ಸೇರಿ ಸುಮಾರು 37 ಮಂದಿಯನ್ನು ಉದ್ದೇಶಿಸಿ ರಾಹುಲ್‌ಗಾಂಧಿ ಅವರು ಮಾತನಾಡಲಿದ್ದಾರೆ.
ರಾಹುಲ್ ಗಾಂಧಿ ಮುಖ್ಯವಾಗಿ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕ್ಷೇತ್ರವಾರು ಮಾಹಿತಿ ಪಡೆಯಲಿದ್ದಾರೆ. ಪ್ರತಿ ಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಪ್ರಾಥಮಿಕ ಚರ್ಚೆ ನಡೆಯಲಿದೆ. ಗೆಲ್ಲುವ ಅಭ್ಯರ್ಥಿಗಳು ಕಣಕ್ಕಿಳಿಸಲು ಈ ಕ್ಷಣದಿಂದಲೇ ಕೆಲಸ ಮಾಡುವಂತೆ ರಾಜ್ಯ ನಾಯಕರಿಗೆ ರಾಹುಲ್ ಗಾಂಧಿ ಸೂಚನೆ ನೀಡಲಿದ್ದಾರೆ.
ಎಲ್ಲ ಸಮೀಕರಣಗಳನ್ನೂ ಕ್ರೋಡೀಕರಿಸಲು ಚುನಾವಣೆ ಗೆಲ್ಲಲು ಯಾವ ಕಾರ್ಯಸೂಚಿಯನ್ನು ಮುಂದಿಟ್ಟುಕೊಂಡು ಹೋಗಬೇಕು ಎಂಬ ಬಗ್ಗೆ ಮಾರ್ಗಸೂಚಿ ಸಿದ್ಧಪಡಿಸಲಿದ್ದಾರೆ. ಮುಖ್ಯವಾಗಿ ನಿಗದಿತ ಕ್ಷೇತ್ರಗಳಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಶಾಸಕರು ಹಾಗೂ ಸಚಿವರನ್ನೇ ಲೋಕಸಭೆಗೆ ಕಣಕ್ಕಿಳಿಸುವ ಬಗ್ಗೆಯೂ ಚರ್ಚೆಯಾಗಲಿದೆ. ಗೆಲ್ಲುವ ಸಾಧ್ಯತೆ ಹೆಚ್ಚಿದ್ದರೆ ಅವರನ್ನೇ ಮನವೊಲಿಸಲು ಸಾಧ್ಯತೆಯಿದೆ.
ಈ ಸುದ್ದಿ ಓದಿದ್ದೀರಾ? ಕ್ರಿಕೆಟ್‌ನಲ್ಲಿ ನಿಮ್ಮ ಪುತ್ರ ಎಷ್ಟು ರನ್ ಸ್ಕೋರ್ ಮಾಡಿದ್ದಾರೆ? ಅಮಿತ್ ಶಾಗೆ ಸ್ಟಾಲಿನ್ ಪುತ್ರ ತಿರುಗೇಟು
ಸಚಿವರೊಂದಿಗೆ ಪ್ರತ್ಯೇಕ ಸಭೆ
ಸಚಿವರ ಇಲಾಖಾವಾರು ಪ್ರಗತಿಯ ಬಗ್ಗೆ ಮೌಲ್ಯಮಾಪನ ನಡೆಯಲಿದ್ದು, ಜೊತೆಗೆ ಶಾಸಕರ ಅಸಮಾಧಾನದ ಬಗ್ಗೆಯೂ ರಾಹುಲ್ ಗಾಂಧಿ ಚರ್ಚೆ ನಡೆಸಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬ ಸಚಿವರೂ ಬದ್ಧತೆಯಿಂದ ಕೆಲಸ ಮಾಡಬೇಕು. ಕ್ಷೇತ್ರದ ಜನರಲ್ಲಿ ಭರವಸೆ ಮೂಡಿಸಬೇಕು. ಗ್ಯಾರಂಟಿ ಯೋಜನೆಗಳ ಲಾಭ ಮತದ ರೂಪ ಪಡೆಯುವಂತೆ ಕೆಲಸ ಮಾಡಬೇಕು. ಅಗತ್ಯವಾದರೆ ಪಕ್ಷಕ್ಕಾಗಿ ಸ್ಪರ್ಧೆಗೂ ಸಿದ್ಧವಿರಬೇಕು ಎಂದು ರಾಹುಲ್ ಗಾಂಧಿ ಸಲಹೆ ನೀಡುವ ಸಾಧ್ಯತೆಯಿದೆ.
ಲೋಕಸಭೆ ಚುನಾವಣೆ ದೃಷ್ಟಿಯಿಂದ ವಿರೋಧಪಕ್ಷಗಳು ಷಡ್ಯಂತ್ರ ನಡೆಸಿ ಭ್ರಷ್ಟಾಚಾರದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಿವೆ. ಈ ನಿಟ್ಟಿನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಂದಾಗಲಿವೆ ಎಂಬ ಮಾಹಿತಿಗಳಿವೆ. ಹೀಗಾಗಿ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ರಾಹುಲ್‌ಗಾಂಧಿ ಸೂಚನೆ ನೀಡುವ ಸಾಧ್ಯತೆಯಿದೆ.
ಈ ಮೊದಲು ವಿಪಕ್ಷ ನಾಯಕರ ಸಭೆಗೆ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ರಾಹುಲ್‌ಗಾಂಧಿ ಅವರು ಜು.17 ರಂದೇ ರಾಜ್ಯ ಸಚಿವರೊಂದಿಗೆ ಸಭೆ ನಡೆಸಬೇಕಿತ್ತು. ಆದರೆ ಕೇರಳ ಮಾಜಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ನಿಧನದಿಂದ ಸಭೆ ಮುಂದೂಡಿಕೆಯಾಗಿತ್ತು.