- ಸತತ ನೋಟಿಸ್ ಹೊರತಾಗಿಯೂ ವಿಚಾರಣೆಗೆ ಗೈರು ಹಾಜರು
- ಎರಡು ವಾಣಿಜ್ಯ ಮತ್ತು ಒಂದು ವಸತಿ ಪ್ರದೇಶದಲ್ಲಿ ಶೋಧ
ವಿದೇಶಿ ಹೂಡಿಕೆ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದಡಿ ಎಜುಟೆಕ್ ಕಂಪನಿ ‘ಬೈಜೂಸ್’ನ ಸಿಇಒ ರವೀಂದ್ರನ್ ಬೈಜು ಅವರ ಕಚೇರಿ ಮತ್ತು ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ) ನಿಬಂಧನೆಗಳ ಅಡಿಯಲ್ಲಿ ಬೈಜು ರವೀಂದ್ರನ್ ಮತ್ತು ಅವರ ಕಂಪನಿ ‘ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್’ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಯು ಬೆಂಗಳೂರಿನ ಎರಡು ವಾಣಿಜ್ಯ ಮತ್ತು ಒಂದು ವಸತಿ ಪ್ರದೇಶದಲ್ಲಿ ಶೋಧ ನಡೆಸಿದೆ. ಈ ವೇಳೆ ಹಲವಾರು ದಾಖಲೆಗಳು ಮತ್ತು ದತ್ತಾಂಶಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?: 2050ರ ವೇಳೆಗೆ ನೀರಿನ ಕೊರತೆ ಎದುರಿಸಲಿರುವ ಬೆಂಗಳೂರು
ಖಾಸಗಿ ವ್ಯಕ್ತಿಗಳಿಂದ ಕೇಳಿ ಬಂದ ದೂರುಗಳ ಆಧಾರದ ಮೇಲೆ, ಬೈಜೂ ರವೀಂದ್ರನ್ ಅವರ ವಿರುದ್ಧ ದೂರು ದಾಖಲಿಸಿಕೊಂಡು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಸತತ ನೋಟಿಸ್ ಜಾರಿಯಾದ ಹೊರತಾಗಿಯೂ ವಿಚಾರಣೆಗೆ ಅವರು ಗೈರು ಹಾಜರಾಗಿದ್ದರು. ಹೀಗಾಗಿ, ಕೊನೆಯದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
“ಶೋಧದ ವೇಳೆ ‘ಥಿಂಕ್ ಅಂಡ್ ಲರ್ನ್ ಪ್ರೈ. ಲಿಮಿಟೆಡ್’ 2011 ರಿಂದ 2023ರ ಅವಧಿಯಲ್ಲಿ ಸುಮಾರು 28,000 ಕೋಟಿ ರೂಪಾಯಿ ವಿದೇಶಿ ನೇರ ಹೂಡಿಕೆಯನ್ನು(ಎಫ್‌ಡಿಐ) ಸ್ವೀಕರಿಸಿದೆ. ಇದೇ ಅವಧಿಯಲ್ಲಿ ಬೈಜೂಸ್ ಕಂಪನಿಯು ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ಸುಮಾರು ₹9,754 ಕೋಟಿಯನ್ನು ವಿವಿಧ ವಿದೇಶಿ ಕಂಪನಿಗಳಿಗೆ ರವಾನಿಸಿದೆ” ಎಂದು ಇಡಿ ತಿಳಿಸಿದೆ.
ಬೈಜೂಸ್‌ಗೂ ಮುನ್ನ ರವೀಂದ್ರನ್ ಬೈಜು ಗಣಿತ ಶಿಕ್ಷಕರಾಗಿ ಮನೆ ಪಾಠ ಮಾಡುತ್ತಿದ್ದರು. ಅದಾದ ನಂತರ, ತಮ್ಮ ಪತ್ನಿ ದಿವ್ಯಾಗೋಕುಲ್ ನಾಥ್ ಅವರ ಸಹಯೋಗದೊಂದಿಗೆ 2011ರಲ್ಲಿ ಅಧಿಕೃತವಾಗಿ ಬೈಜೂಸ್ ಆರಂಭಿಸಿದ್ದರು. ಅವರು ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ 2,071 ನೇ ಸ್ಥಾನದಲ್ಲಿದ್ದಾರೆ.