- ವಿದ್ಯುತ್ ದರ ಏರಿಕೆಯಿಂದ ಎಲ್ಲ ಉದ್ಯಮಿಗಳಿಗೂ ಶಾಕ್
- ಹಾಲು ಮತ್ತು ಅಕ್ಕಿಯ ಬೆಲೆ ದುಬಾರಿಯಾಗುವ ಸಂಭವ
ವಿದ್ಯುತ್ ದರ ಏರಿಕೆಯಿಂದ ಉದ್ಯಮಗಳಿಗೆ ತೊಂದರೆಯಾಗಿದ್ದು, ಹೋಟೆಲ್ ನಡೆಸುವುದು ತುಂಬಾ ಕಷ್ಟಕರವಾಗಿದೆ. ಮುಂದಿನ ದಿನಗಳಲ್ಲಿ ದೈನಂದಿನ ಬಳಕೆಯ ವಸ್ತುಗಳ ಬೆಲೆಗಳನ್ನು ಹತೋಟಿಗೆ ತರದಿದ್ದರೆ ಹೋಟೆಲಿನ ಕಾಫಿ, ತಿಂಡಿ-ತಿನಿಸುಗಳ ಬೆಲೆಗಳನ್ನು ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ ಸಿ ರಾವ್ ಹೇಳಿದ್ದಾರೆ.
“ವಿದ್ಯುತ್ ದರ ಏರಿಕೆಯಿಂದ ಎಲ್ಲ ಉದ್ಯಮಿಗಳಿಗೂ ಹಾಗೂ ಜನಸಾಮಾನ್ಯರಿಗೂ ಬಹುದೊಡ್ಡ ಶಾಕ್ ಕೊಟ್ಟಿದೆ. ಇತ್ತೀಚೆಗೆ ಹೋಟೆಲ್ ಉದ್ಯಮಕ್ಕೆ ಅಗತ್ಯವಾಗಿರುವ ಕಾಫಿಪುಡಿ, ಬೇಳೆಕಾಳು, ಮೆಣಸಿನಕಾಯಿ, ತರಕಾರಿ ಬೆಲೆ ಗಗನಕ್ಕೇರಿದೆ. ಜತೆಗೆ ಹಾಲು ಮತ್ತು ಅಕ್ಕಿಯ ಬೆಲೆ ದುಬಾರಿಯಾಗುವ ಸಂಭವವಿದೆ” ಎಂದರು.
“ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಕ್ಷಣ ಸ್ಪಂದಿಸಿ ಸಮಂಜಸವಾದ ಕ್ರಮ ಕೈಗೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ನಗರದ ಕೆಲವು ಹೋಟೆಲ್‌ಗಳಲ್ಲಿ ತಿಂಡಿ ಮತ್ತು ಕಾಫೀ, ಟೀ ದರ ಏರಿಕೆಯಾಗಿದೆ. ಈ ಹಿಂದೆ ಇದ್ದ ₹50 ಇದ್ದ ಮಸಾಲೆ ದೋಸೆ ದರ ಇದೀಗ ₹60 ರಿಂದ 70 ಆಗಿದೆ. ಟೀ, ಕಾಫಿ, ಲೆಮನ್ ಟೀ ಮೊದಲಿಗೆ ₹10 ರಿಂದ ₹12 ಇತ್ತು. ಈಗ ₹15 ರಿಂದ ₹20 ಏರಿಕೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಬಸ್ ನಿಲುಗಡೆಗಾಗಿ ನಿರ್ವಾಹಕ ಮತ್ತು ಚಾಲಕರ ಮೇಲೆ ಮಹಿಳೆಯಿಂದ ಹಲ್ಲೆ, ದೂರು ದಾಖಲು
ನೂತನ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ಹಾಲಿನ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಸರ್ಕಾರ ಹಾಲಿನ ದರ ಹೆಚ್ಚಳಕ್ಕೆ ಸಮ್ಮತಿ ನೀಡಿದರೆ, ಹಾಲಿನ ಉತ್ಪನ್ನಗಳ ಜತೆಗೆ ಹೋಟೆಲ್ ತಿಂಡಿ ದರ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.