- ತನಿಖೆಯಲ್ಲಿ ಪೊಲೀಸರಿಗೆ ಸಹಕಾರ ನೀಡುವಂತೆ ನಾಟಕವಾಡಿದ್ದ ಆರೋಪಿಗಳು
- ಕಾಣೆಯಾಗಿದ್ದ ಮಗುವನ್ನು ಕೆಲವೇ ನಿಮಿಷಗಳಲ್ಲಿ ಪೊಲೀಸರಿಗೆ ಒಪ್ಪಿಸಿದ್ದ ಆರೋಪಿ
39 ವರ್ಷದ ಮಹಿಳೆಯೊಬ್ಬರ ಮೇಲೆ ಮೂವರು ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದಾಗ ಪರಾರಿಯಾಗಲು ಯತ್ನಿಸಿದ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.
ಬನ್ನೇರುಘಟ್ಟ ಸಮೀಪದ ಬ್ಯಾಟರಾಯನದೊಡ್ಡಿಯ ಹಕ್ಕಿಪಿಕ್ಕಿ ಕಾಲೋನಿಯ ಬಳಿ ಈ ಅತ್ಯಾಚಾರ, ಹತ್ಯೆ ಘಟನೆ ನಡೆದಿತ್ತು. ಪ್ರಕರಣ ಸಂಬಂಧ ಪೊಲೀಸರು ನಾಲ್ಕು ತಂಡಗಳನ್ನು ರಚನೆ ಮಾಡಿ ತನಿಖೆಗೆ ಇಳಿದಿದ್ದರು.
ಶುಕ್ರವಾರ ಮೂವರು ಆರೋಪಿಗಳನ್ನು ಸ್ಥಳ ಮಹಜರಿಗೆ ಪೊಲೀಸರು ಕರೆದುಕೊಂಡು ಹೋಗಿದ್ದರು. ಈ ವೇಳೆ, ಸೋಮ ಅಲಿಯಾಸ್ ಸೋಮಶೇಖರ್ ಎಂಬ ಆರೋಪಿ ಪೊಲೀಸ್ ಪೇದೆ ಮಾದಪ್ಪ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಕಾರ್ಯನಿರತರಾಗಿದ್ದ ಜಿಗಣಿ ಇನ್ಸ್‌ಪೆಕ್ಟರ್ ಮಂಜುನಾಥ್ ಅವರು ಆರೋಪಿಯ ಎಡಗಾಲಿಗೆ ಗುಂಡೇಟು ಹೊಡೆದಿದ್ದಾರೆ. ಸದ್ಯ ಆರೋಪಿಗೆ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಕೆಐಎ ಟರ್ಮಿನಲ್ 2 | ತಪಾಸಣೆ ವೇಳೆ ಸಿಬ್ಬಂದಿ ಮೇಲೆ ಹಲ್ಲೆ; ಮಹಿಳಾ ಪ್ರಯಾಣಕಿ ಬಂಧನ
ಏನಿದು ಪ್ರಕರಣ?
ಬನ್ನೇರುಘಟ್ಟ ಸಮೀಪದ ಬ್ಯಾಟರಾಯನದೊಡ್ಡಿಯಲ್ಲಿರುವ ಮನೆಯಿಂದ ಮುನಿರತ್ನ(38) ಎಂಬ ಮಹಿಳೆ ಆಕೆಯ ಕಿರಿಯ ಸಹೋದರಿಯ ಎರಡು ವರ್ಷದ ಮಗನೊಂದಿಗೆ ಹೊರಗಡೆ ಹೋಗಿದ್ದಳು.
ಈ ವೇಳೆ ಗಾಂಜಾ ಮತ್ತಿನಲ್ಲಿದ್ದ ಮೂವರು ಆರೋಪಿಗಳು ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ತುಂಬಾ ಸಮಯ ಕಳೆದ ಬಳಿಕ ಮನೆಗೆ ಮಹಿಳೆ ಹಾಗೂ ಮಗು ವಾಪಸ್ ಬರದೆ ಇರುವುದರಿಂದ ಗಾಬರಿಗೊಂಡ ಮಹಿಳೆಯ ಮನೆಯವರು ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಎಲ್ಲೂ ಪತ್ತೆಯಾಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳೀಯರು ಮಹಿಳೆಯ ಮೃತದೇಹವನ್ನು ಕಂಡು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿತ್ತು.
ತನಿಖೆ ಆರಂಭಿಸಿದ ಪೊಲೀಸರಿಗೆ ಆರೋಪಿಗಳು ಸಹಕಾರ ನೀಡುವಂತೆ ಮಗುವಿನ ಹುಡುಕಾಟದಲ್ಲಿ ತೊಡಗಿದ್ದರು. ಮೃತ ದೇಹ ಸಿಕ್ಕ ಜಾಗದಲ್ಲಿ ಯಾರಿಗೂ ಸಂಶಯ ಬರದಂತೆ ಓಡಾಡಿಕೊಂಡಿದ್ದರು. ಆರೋಪಿ ಹರೀಶ್ ಎಂಬಾತ ಕಲವೇ ನಿಮಿಷಗಳಲ್ಲಿ ಕಾಣೆಯಾಗಿದ್ದ ಮಗುವನ್ನು ಕರೆದುಕೊಂಡು ಬಂದು ಪೊಲೀಸರಿಗೆ ಒಪ್ಪಿಸಿದ್ದನು. ಇದರಿಂದ ಅನುಮಾನಗೊಂಡ ಪೊಲೀಸರು ಆರೋಪಿ ಹರೀಶ್‌ನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದಾಗ ಆರೋಪಿ ಸತ್ಯ ಬಾಯಿಬಿಟ್ಟಿದ್ದಾನೆ.