ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಬಯಲು
ಬಯಲು ಬಯಲನೆ ಬಿತ್ತಿ
ಬಯಲು ಬಯಲನೆ ಬೆಳೆದು
ಬಯಲು ಬಯಲಾಗಿ ಬಯಲಾಯಿತ್ತಯ್ಯ
ಬಯಲು ಜೀವನ ಬಯಲು ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯ
ನಿಮ್ಮ ಪೂಜಿಸಿದವರು ಮುನ್ನವೇ
ಬಯಲಾದರು
ನಾ ನಿನ್ನ ನಂಬಿ ಬಯಲಾದೆ ಗುಹೇಶ್ವರ
ವಚನಾರ್ಥ:
ಇದು ಅಲ್ಲಮನ ಅತ್ಯಂತ ಮಹತ್ವದ ವಚನಗಳಲ್ಲೊಂದು ಎಂದು ಪರಿಗಣಿತವಾಗಿರುವ ವಿಸ್ತಾರವಾದ ಅರ್ಥವುಳ್ಳ ವಚನ. ಶೂನ್ಯದ ಕಲ್ಪನೆ, ಪೂರ್ಣತೆಯ ಕಲ್ಪನೆಯ ಹಾಗೆ ಬಯಲು ಎಂಬುದೊಂದು ಅಪೂರ್ವವಾದ ಆಧ್ಯಾತ್ಮಿಕ ಚಿಂತನೆಯ ಕಲ್ಪನೆ. ಅದು ನಿತ್ಯ ನೂತನವಾದದ್ದು. ನಿರಂತರವಾದದ್ದು. ನಿರ್ದಿಷ್ಟ ನೆಲೆಯಿಲ್ಲದ್ದು. ಬಯಲು ಬಯಲನೆ ಬಿತ್ತುತ್ತದೆ. ಬಯಲು ಬಯಲನೆ ಬೆಳೆಯುತ್ತದೆ. ಕೊನೆಗೆ ಬಯಲು ಬಯಲಾಗಿ ಬಯಲಾಗುತ್ತದೆ. ಈ ಪ್ರಕ್ರಿಯೆ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಇದನ್ನೇ ಅಲ್ಲಮ ಬಯಲು ಜೀವನ ಅಂದದ್ದು. ಬಯಲಲ್ಲಿ ಉದಿಸಿ ಬಂದ ಜೀವ ಜೀವನವನ್ನು ಬಿತ್ತಿ ಜೀವನವನ್ನು ಬೆಳೆದು ಜೀವನದ ಅಂತ್ಯದಲ್ಲಿ ಬಯಲಲ್ಲಿ ಬಯಲಾಗಿ ಪಂಚಭೂತಗಳಲ್ಲಿ ಲೀನವಾಗುತ್ತದೆ. ಹಿಂದೆ ಆಗಿ ಹೋದ ಎಲ್ಲಾ ಹಿರಿಯರು ಹಾಗೆಯೇ ಬಯಲಾಗಿ ಹೋದವರು. ಹಾಗೆ ಬಯಲಾಗುವ ಪ್ರಕ್ರಿಯೆಗೆ ಸ್ವಯಂ ಅಲ್ಲಮನೂ ಹೊರತಲ್ಲ. ಅಲ್ಲಮನೇ ಹೇಳುವಂತೆ ನಾನು ನಿನ್ನ ನಂಬಿ ಬಯಲಾದೆ ಗುಹೇಶ್ವರ.
ಪದ ಪ್ರಯೋಗಾರ್ಥ:
ಇಡೀ ವಚನದಲ್ಲಿ ಬಯಲು ಎಂಬ ಪದ ಹದಿನಾಲ್ಕು ಬಾರಿ ಬಳಕೆ ಆಗಿದೆ. ಎಂಟು ಬಾರಿ ನಾಮಪದವಾಗಿ, ನಾಲ್ಕು ಬಾರಿ ಕ್ರಿಯಾಪದವಾಗಿ ಮತ್ತು ಎರಡು ಬಾರಿ ವಿಶೇಷಣವಾಗಿ. ಬಯಲು ಎಂದಾಕ್ಷಣ ಅನಂತವಾದ ಆಕಾಶದಡಿಯಲ್ಲಿ ಕಣ್ಣಿಗೆ ಕಾಣುವಷ್ಟು ದೂರ ಸಮತಟ್ಟಾದ ಒಂದು ಭೂಪ್ರದೇಶದ ಕಲ್ಪನೆ ಮೂಡುತ್ತದೆ. ಅಂತಹ ಬಯಲಿನಲ್ಲಿ ನಿಂತ ವ್ಯಕ್ತಿಯೊಬ್ಬ ತನ್ನನ್ನು ತಾನು ಆ ಬಯಲಿನ ವ್ಯಾಪ್ತಿಯಲ್ಲಿ ಅಳವಡಿಸಿಕೊಂಡಾಗ ಮನಸ್ಸಿನಲ್ಲಿ ಮೂಡುವ ಭಾವನೆಗಳನ್ನು ಅಲ್ಲಮ “ಬಯಲು ಭಾವನೆ” ಅಂದಿದ್ದು. ಬಯಲು ಎಂಬ ಪದವೇ ಅಲ್ಲಮನ ಒಟ್ಟಾರೆ ಆಧ್ಯಾತ್ಮಿಕ ಚಿಂತನೆಗಳ ಒಂದು ಪ್ರಮುಖ ಪ್ರತಿಮೆಯಾಗಿ ವಚನ ಸಾಹಿತ್ಯದಲ್ಲಿ ಸ್ಥಿರಸ್ಥಾಯಿಯಾಗಿ ನಿಂತಿದೆ. ಅಲ್ಲಮ ಅಂದರೆ ಬಯಲು, ಬಯಲು ಅಂದರೆ ಅಲ್ಲಮ ಅಂತ ಅನಿಸುವಂತೆ. ಅಲ್ಲಮ ಪ್ರತಿಪಾದಿಸಿದ ಬಯಲಿನ ಅರ್ಥ ಇದೇ, ಅದು ಇಂತದೇ ಎಂದು ನಿರ್ದಿಷ್ಟವಾಗಿ ಹೇಳಿದ ವ್ಯಾಖ್ಯಾನಗಳು ಇಂದಿಗೂ ದೊರೆತಿಲ್ಲ ಎಂಬುದೇ ಅಲ್ಲಮನ ಬಯಲಿನ ಬೆರಗು.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.