ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ದಾರಿದ್ರ್ಯವಿದ್ದಲ್ಲಿ ನಿದ್ರೆ
ಕಬ್ಬು ಬೆಳೆವುದಯ್ಯ ಕರಿಯ ಭೂಮಿಯಿದ್ದಲ್ಲಿ,
ಉಬ್ಬುಬ್ಬಿ ಬೆಳೆವುದಯ್ಯ ಜಲ ಪ್ರಮಾಣವಿರ್ದಲ್ಲಿ,
ದಾರಿದ್ರ್ಯವಿದ್ದಲ್ಲಿ ನಿದ್ರೆ ಬೆಳೆವುದಯ್ಯ,
ನಮ್ಮ ಶಿವನ ಸಲೆ ಸಂದ ಶರಣರಾದ ಹಿರಿಯರಿದ್ದಲ್ಲಿ ಬುದ್ಧಿ ಬೆಳವುದಯ್ಯ,
ಜಟ್ಟಿ ಮಾಸಾಳರಿರ್ದಲ್ಲಿ ಕಾಳಗ ಘನವನಪ್ಪುದಯ್ಯ,
ಇಷ್ಟ ಕಂಡು ಬೆರಗಾದ ನಮ್ಮ ಗುಹೇಶ್ವರ.
ಪದಾರ್ಥ:
ಸಲೆ = ಸರಿಯಾಗಿ
ಮಾಸಾಳ = ವೀರ, ಶೂರ
ಇಷ್ಟ = ಇಷ್ಟನ್ನು
ವಚನಾರ್ಥ:
ಫಲವತ್ತಾದ ಭೂಮಿ ಇದ್ದಲ್ಲಿ ಅದರ ಮೇಲೆ ರಸಭರಿತ ಕರಿಯ ಕಬ್ಬು ಬೆಳೆಯುತ್ತದೆ. ಅಂತರ್ಜಲ ಯಥೇಚ್ಛವಾಗಿರುವ ಕಡೆಯಲ್ಲಿ ಭಾವಿ ತೋಡಿದರೆ ನೀರು ಉಕ್ಕಿ ಉಕ್ಕಿ ಬರುತ್ತದೆ. ಜೀವನವನ್ನು ಸರಿಯಾಗಿ ಅರಿತು ಶಿವಶರಣರೆನಿಸಿಕೊಂಡ ಹಿರಿಯರ ಸಂಪರ್ಕದಲ್ಲಿದ್ದರೆ ಬುದ್ದಿ ಬೆಳೆಯುತ್ತದೆ. ಜಟ್ಟಿಗಳ ಸೆಣಸಾಟದಲ್ಲಿ ಇಬ್ಬರೂ ಶೂರರು ಸಮಬಲರಿದ್ದರೆ ಕಾಳಗ ಕಳೆಗಟ್ಟಿ ಬೆಳೆಯುತ್ತದೆ. ಇವೆಲ್ಲಾ ಸಕಾರಾತ್ಮಕ ಬೆಳವಣಿಗೆಗಳು. ಇನ್ನೊಂದು ನಕಾರಾತ್ಮಕ ಬೆಳವಣಿಗೆ ಇದೆ. ಚುರುಕಾಗಿ ಕೆಲಸ ಮಾಡದೇ ಸೋಮಾರಿತನ ರೂಢಿಸಿಕೊಂಡರೆ ಸದಾಕಾಲ ನಿದ್ರೆಯ ಜೊಂಪು ಮೈಯಲ್ಲಿ ಬೆಳೆಯುತ್ತದೆ.
ಈ ಎಲ್ಲಾ ಸಕಾರಾತ್ಮಕ ಮತ್ತು ನಕಾರಾತ್ಮಕ ಬೆಳೆವಣಿಗೆಗಳು ಜೀವನ ಕ್ರಿಯೆಯಲ್ಲಿ ಬೆರಗನ್ನು ಬರಿಸುವಂತಹವು.
ಪದಪ್ರಯೋಗಾರ್ಥ:
ದಿನವೊಂದಕ್ಕೆ ಸತತ ಏಳೆಂಟು ಗಂಟೆಗಳ ಕಾಲ ನಿದ್ರೆ ಬೇಕು. ಅದು ಆರೋಗ್ಯಕರ ಜೀವನದ ದಿನಚರಿ. ಆದರೆ ಅದಕ್ಕಿಂತ ಹೆಚ್ಚಾಗಿ ನಿದ್ರೆ ಮಾಡುವ ಕ್ರಮವನ್ನು ಬೆಳೆಸಿಕೊಂಡರೆ ಮಾಡುವ ಕೆಲಸಗಳನ್ನು ಸಕಾಲದಲ್ಲಿ ಮಾಡಲಾಗದೆ ಅಭಿವೃದ್ಧಿ ಕುಂಠಿತವಾಗಿ
ದಾರಿದ್ರ್ಯ ಮೈದಳೆಯುತ್ತದೆ. ದಾರಿದ್ರ್ಯವಿದ್ದಲ್ಲಿ ನಿದ್ರೆ ಬೆಳೆವುದಯ್ಯ, ನಿದ್ರೆ ಬೆಳೆದಲ್ಲಿ ದಾರಿದ್ರ್ಯವಿರುವುದಯ್ಯ. ನಿದ್ರೆ ಎಂಬ ಕ್ರಿಯೆಯನ್ನು ಮಾಯೆಗೆ ಹೋಲಿಸಿ ಅಲ್ಲಮ ಬರೆದ ಅಪರೂಪದ ಮತ್ತೊಂದು ವಚನ ಅತ್ಯಂತ ಗಮನ ಸೆಳೆಯುತ್ತದೆ.
“ಮೂರು ಲೋಕದ ಧೀರೆ ನಿದ್ರಾಂಗನೆ,
ಎಲ್ಲರನೂ ಹಿಂಡಿ ಹೀರಿ ಪ್ರಾಣಾಕರ್ಷಣೆಯ ಮಾಡಿ,
ಕಟ್ಟಿ ಕೆಡಹಿದಳಲ್ಲಾ!
ಇವಳ ಗೆಲುವ ಧೀರನಾರುವನೂ ಕಾಣೆ.
ಇವಳ ಬಾಣಕ್ಕೆ ಗುರಿಯಾಗಿ ಏಳುತ್ತ ಬೀಳುತ್ತಲಿದ್ದರು ಎಲ್ಲರೂ-ಗುಹೇಶ್ವರಾ.”
ಸರಳ ಸುಂದರವಾದ ಅಲ್ಲಮನ ಈ ವಚನಕ್ಕೆ ವ್ಯಾಖ್ಯಾನ ಬೇಕಿಲ್ಲ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.